ನಾಪೋಕ್ಲು, ಜು. ೩೦: ಸಮೀಪದ ಹಳೆ ತಾಲೂಕಿನ ರೈತ ಶಿವಚಾಳಿಯಂಡ ವಿಜು ಪೂಣಚ್ಚ ಅವರ ಗದ್ದೆಯಲ್ಲಿ ನಡೆದ ಕೆಸರುಗದ್ದೆ ಕ್ರೀಡಾಕೂಟದಲ್ಲಿ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಸಂಭ್ರಮಿಸಿದರು.
ನಾಪೋಕ್ಲುವಿನ ಅಂಕುರ್ ಪಬ್ಲಿಕ್ ಶಾಲಾ ವತಿಯಿಂದ ಏರ್ಪಡಿಸಲಾಗಿದ್ದ ಕೆಸರುಗದ್ದೆ ಕ್ರೀಡಾಕೂಟದ ಉದ್ಘಾಟನಾ ಕಾರ್ಯಕ್ರಮವನ್ನು ನಾಪೋಕ್ಲು ಕೃಷಿ ಪತ್ತಿನ ಸಹಕಾರ ಸಂಘದ ವ್ಯವಸ್ಥಾಪಕ ಶಿವಚಾಳಿಯಂಡ ವಿಜು ಪೂಣಚ್ಚ ನೆರವೇರಿಸಿ ಮಾತನಾಡಿ, ಕ್ರೀಡೆಗಳು ವಿದ್ಯಾರ್ಥಿಗಳ ಮಾನಸಿಕ ಹಾಗೂ ಶಾರೀರಿಕ ಬೆಳವಣಿಗೆಗೆ ಅಗತ್ಯವಾಗಿದೆ. ಕೆಸರುಗದ್ದೆ ಕ್ರೀಡಾಕೂಟದಲ್ಲಿ ಭಾಗವಹಿಸುವವರಿಗೆ ಹೆಚ್ಚಿನ ಕೌಶಲ್ಯ ಹಾಗೂ ತರಬೇತಿಯ ಅವಶ್ಯಕತೆ ಇದೆ ಎಂದರು. ಸುಳ್ಯದ ಕೆವಿಜಿ ವಿದ್ಯಾ ಸಂಸ್ಥೆಯ ಪ್ರಾಂಶುಪಾಲ ಅರುಣ್ ಮಾತನಾಡಿ, ಕ್ರೀಡಾಕೂಟಕ್ಕೆ ಶುಭ ಹಾರೈಸಿದರು. ಅಂಕುರ್ ಪಬ್ಲಿಕ್ ಶಾಲೆಯ ಅಧ್ಯಕ್ಷ ಕೇಟೋಳಿರ ರಾಜ ಚರ್ಮಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಕಾರ್ಯದರ್ಶಿ ರತ್ನ ಚರ್ಮಣ ಉಪಸ್ಥಿತರಿದ್ದರು. ಕೆಸರುಗದ್ದೆಯಲ್ಲಿ ನಡೆದ ವಾಲಿಬಾಲ್, ಥ್ರೋಬಾಲ್, ಹಗ್ಗ ಜಗ್ಗಾಟ ಮುಂತಾದ ಕ್ರೀಡೆಗಳಲ್ಲಿ ಮಕ್ಕಳು ಪಾಲ್ಗೊಂಡು ಸಂಭ್ರಮಿಸಿದರು. ಕ್ರೀಡಾಕೂಟದಲ್ಲಿ ಕೂಡಿಗೆ ಸೈನಿಕ್ ಶಾಲೆ, ಮಡಿಕೇರಿಯ ಎ ಎಲ್ ಜಿ ಕ್ರೆಸೆಂಟ್ ಶಾಲೆ, ಭಾರತೀಯ ವಿದ್ಯಾ ಭವನ ಪಬ್ಲಿಕ್ ಶಾಲೆ, ಗೋಣಿಕೊಪ್ಪದ ನ್ಯಾಷನಲ್ ಅಕಾಡೆಮಿ ಸ್ಕೂಲ್, ಸುಳ್ಯದ ಕೆವಿಜಿ ಶಾಲೆ ಹಾಗೂ ಅರಮೇರಿಯ ಎಸ್‌ಎಂಎಸ್ ಶಾಲೆ, ಅಂಕುರ್ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳು, ಶಿಕ್ಷಕರ ವೃಂದ ಹಾಗೂ ಪೋಷಕರು, ಸಿಬ್ಬಂದಿ ಪಾಲ್ಗೊಂಡಿದ್ದರು.