ವೀರಾಜಪೇಟೆ, ಜು. ೨೯: ಕರ್ನಾಟಕ ಸರ್ಕಾರವು ಕರ್ನಾಟಕ ಜನನ ಮತ್ತು ಮರಣ ನಿಯಮ ೯ಕ್ಕೆ ತಿದ್ದುಪಡಿ ಮಾಡಿ ಹೊರಡಿಸಿದ ಅಧಿಸೂಚನೆಗೆ ವಿರೋಧ ವ್ಯಕ್ತಪಡಿಸಿ ವೀರಾಜಪೇಟೆ ವಕೀಲರ ಸಂಘದ ವತಿಯಿಂದ ನ್ಯಾಯಾಲಯದಲ್ಲಿ ಪ್ರತಿಭಟನೆ ನಡೆಸಲಾಯಿತು.

ವಕೀಲರ ಸಂಘದ ಅಧ್ಯಕ್ಷ ಐ.ಆರ್. ಪ್ರಮೋದ್ ಮಾತನಾಡುತ್ತಾ, ಅಧಿಕಾರಿಗಳಿಗೆ ಕಾನೂನಿನ ಸಮರ್ಪಕ ಜ್ಞಾನ ಇರುವುದಿಲ್ಲ. ಕಕ್ಷಿದಾರರಿಗೆ ನ್ಯಾಯ ಸಿಗುವಲ್ಲಿ ವಿಳಂಬವಾಗುತ್ತದೆ. ತಹಶೀಲ್ದಾರ್ ಕಚೇರಿಯಲ್ಲಿ ಕಕ್ಷಿದಾರರು ಜನನ ಮತ್ತು ಮರಣ ಪ್ರಮಾಣ ಪತ್ರ ಕೇಳಿ ಅರ್ಜಿ ಸಲ್ಲಿಸಿದಾಗ ಅವರು ನಮ್ಮಲ್ಲಿ ಲಭ್ಯವಿರುವುದಿಲ್ಲ ಎಂದು ಪ್ರತಿ ನೀಡುತ್ತಾರೆ. ಅದರ ಆಧಾರದ ಮೇಲೆ ನಾವು ನ್ಯಾಯಾಲಯದಲ್ಲಿ ದಾವೆ ನಡೆಸುತ್ತೇವೆ. ಆದರೆ ಈಗ ಬಂದಿರುವ ಈ ತಿದ್ದುಪಡಿಯಿಂದ ಒಬ್ಬರು ಅಧಿಕಾರಿ ಲಭ್ಯವಿಲ್ಲ ಎಂದು ನೀಡಿದ ಮಾಹಿತಿಯನ್ನು ಮತ್ತೊಬ್ಬ ಅಧಿಕಾರಿ ಪರಿಶೀಲನೆ ಮಾಡಿ ತೀರ್ಪು ನೀಡುವ ವ್ಯವಸ್ಥೆ ನಿಜಕ್ಕೂ ವಿಪರ್ಯಾಸವೇ ಸರಿ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಉಪನೋಂದಣಾಧಿಕಾರಿ ಕಚೇರಿಯಲ್ಲಿ ಭ್ರಷ್ಟಾಚಾರ, ಲಂಚಗುಳಿತನ ಮಿತಿ ಮೀರಿದೆ. ಕಕ್ಷಿದಾರರ ಜೊತೆ ನೇರ ಸಂಪರ್ಕ ಮಾಡಿ ಲಂಚ ಪಡೆಯುತ್ತಿದ್ದಾರೆ. ದಲ್ಲಾಳಿಗಳ ಹಾವಳಿ ಮಿತಿ ಮೀರಿದ್ದು, ಅವರು ಅವ್ಯವಹಾರದಲ್ಲಿ ಭಾಗಿಯಾಗಿದ್ದಾರೆ. ಇದರಿಂದಾಗಿ ಅವರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಎಂದು ಇದೇ ಸಂದರ್ಭದಲ್ಲಿ ಗೊತ್ತುವಳಿ ಮಂಡನೆ ಮಾಡಲಾಯಿತು.

ಈ ಸಂದರ್ಭ ವಕೀಲರ ಸಂಘದ ಕಾರ್ಯದರ್ಶಿ ಎಂ.ಕೆ ದಿನೇಶ್, ಉಪಾಧ್ಯಕ್ಷ ಸುಬ್ಬಯ್ಯ, ಜಂಟಿ ಕಾರ್ಯದರ್ಶಿ ವಿ.ಎಸ್ ಪ್ರೀತಮ್ ಖಜಾಂಚಿ ರಾಕೇಶ್, ವಕೀಲರ ಸಂಘದ ಎಲ್ಲಾ ಪದಾಧಿಕಾರಿಗಳು, ವಕೀಲರುಗಳು ಹಾಜರಿದ್ದರು.