ಮಡಿಕೇರಿ, ಜು. ೨೮: ಜಿಲ್ಲೆಯಾದ್ಯಂತ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಗ್ರಾಮ - ಕುಗ್ರಾಮಗಳ ಪಂಚಾಯಿತಿ ಕಚೇರಿಗಳಲ್ಲಿ ಸುಂದರ ಉದ್ಯಾನವನಗಳನ್ನು ನಿರ್ಮಿಸಿ ವರ್ಣರಂಜಿತ ಪುಷ್ಪಗಳು ಸಾರ್ವಜನಿಕರನ್ನು ಆಕರ್ಷಿಸುತ್ತಿದೆ. ಆದರೆ ಇವುಗಳೆಲ್ಲವನ್ನೂ ಮೀರುವಂತೆ ಮಡಿಕೇರಿಯ ನಗರಸಭೆಯ ಆವರಣವು ಕಾಡುಗಿಡಗಳಿಂದ ಆವೃತ್ತವಾಗಿ ಕಂಗೊಳಿಸುತ್ತಿದೆ. ಯಾವುದೇ ಯೋಜನೆಯ ಯಾವುದೇ ಅನುದಾನವಿಲ್ಲದೆಯೇ ಈ ಉದ್ಯಾನವು ನಿರ್ಮಾಣವಾಗಿದೆ. ಕಾವೇರಿ ಕಲಾಕ್ಷೇತ್ರದ ಬದಿಯಿರುವ ಕಾರಂಜಿಯು ಕೆಲವು ದಿನಗಳಲ್ಲಿ ಕಾಡಿನ ಗಿಡಗಳಿಂದ ಆವರಣಗೊಂಡು ಮಾಯವಾಗುವಂತಿದೆ.

ಶೌಚಾಲಯದ ಅವಸ್ಥೆ

ನಗರಸಭೆಯ ಶೌಚಾಲಯ ಬಳಕೆಗೆ ರೂ.೨ ನೀಡಬೇಕಾಗಿದ್ದು, ಬಳಕೆಗೆ ಅನರ್ಹವಾಗಿದೆ. ಶೌಚಗುಂಡಿಯು ಸಂಪೂರ್ಣ ಬ್ಲಾಕ್ ಆಗಿದ್ದು ಬಳಸಲು ಅಸಾಧ್ಯವಾಗಿದೆ. ಆದರೂ ಅಧಿಕಾರಿಗಳಿಗೆ ನಾಚಿಕೆಯೇ ಇಲ್ಲದ ಹಾಗೆ ಶೌಚಾಲಯ ದ್ವಾರದಲ್ಲಿ ಸ್ವಚ್ಛ ಸರ್ವೇಕ್ಷಣ-೨೦೨೧ ಫಲಕವೊಂದು ಕೆಳಗೆ ಬಿದ್ದಿದ್ದು, ನಗರದ ಸ್ವಚ್ಛತೆ ಕುರಿತು ಆ್ಯಪ್ ಮೂಲಕ ವೋಟ್ ಮಾಡಬೇಕಾಗಿ ಮನವಿ ಮಾಡಲಾಗಿದೆ..!

-ಟಿ.ಜಿ ಸತೀಶ್.