ನಾಪೋಕ್ಲು, ಜು. ೨೮: ಸಮೀಪದ ಕುಂಜಿಲ ಗ್ರಾಮದಲ್ಲಿ ಈ ಬಾರಿ ಸುರಿದ ಸತತ ಮಳೆಗೆ ಕಾಫಿ ಗಿಡಗಳಲ್ಲಿ ಕೊಳೆ ರೋಗ ಕಾಣಿಸಿಕೊಂಡಿದ್ದು, ಕಾಫಿ ಫಸಲು ಸಂಪೂರ್ಣವಾಗಿ ನೆಲಕಚ್ಚಿದ್ದು, ಬೆಳೆಗಾರರು ಆತಂಕಕ್ಕೆ ಒಳಗಾಗಿದ್ದಾರೆ.

ಈ ಬಾರಿ ಮುಂಗಾರು ಮಳೆ ಎಡೆಬಿಡದೆ ಸುರಿದ ಹಿನೆÀ್ನಲೆಯಲ್ಲಿ ನಾಲ್ಕುನಾಡು ವ್ಯಾಪ್ತಿಯ ಎಲ್ಲಾ ಗ್ರಾಮಗಳಲ್ಲಿಯೂ ಕೊಳೆರೋಗದಿಂದ ಕಾಫಿ ಫಸಲು ಸಂಪೂರ್ಣವಾಗಿ ನಾಶಗೊಂಡಿದೆ. ಆದರೆ, ಕುಂಜಿಲ ಗ್ರಾಮವನ್ನು ಹೊರತುಪಡಿಸಿ ಇತರ ಗ್ರಾಮಗಳಿಗೆ ಕಂದಾಯ ಇಲಾಖಾಧಿಕಾರಿಗಳು ಹಾಗೂ ಕಾಫಿ ಮಂಡಳಿ ಅಧಿಕಾರಿಗಳು ಭೇಟಿ ನೀಡಿ ಸಮೀಕ್ಷೆ ನಡೆಸಿದ್ದಾರೆ. ಆದರೆ, ಕುಂಜಿಲ ಗ್ರಾಮವನ್ನು ಬೆಳೆ ಹಾನಿ ಪರಿಹಾರದಿಂದ ಹೊರತುಪಡಿಸಲಾಗಿದೆ ಎನ್ನುವ ಮಾತುಗಳು ಕೇಳಿ ಬರುತ್ತಿದೆ. ಆದರೆ, ಕುಂಜಿಲ ಗ್ರಾಮವು ಇಗ್ಗುತ್ತಪ್ಪ ದೇವರ ಮಲ್ಮ ಬೆಟ್ಟವನ್ನು ಒಳಗೊಂಡAತೆ ಬಹುತೇಕ ಬೆಟ್ಟಗುಡ್ಡಗಳ ಪ್ರದೇಶವಾಗಿದ್ದು, ಇಲ್ಲಿಯೂ ಕಾಫಿ ಬೆಳೆ ಸಂಪೂರ್ಣವಾಗಿ ನಷ್ಟಗೊಂಡಿರುತ್ತದೆ. ಕಂದಾಯ ಇಲಾಖೆ ಹಾಗೂ ಕಾಫಿ ಮಂಡಳಿ ಅಧಿಕಾರಿಗಳು ಕುಂಜಿಲ ಗ್ರಾಮಕ್ಕೂ ಭೇಟಿ ನೀಡಿ ಬೆಳೆ ಹಾನಿಗೊಂಡಿರುವ ಬಗ್ಗೆ ಸಮೀಕ್ಷೆ ನಡೆಸಿ ಪರಿಹಾರ ನೀಡಲು ಕ್ರಮಕೈಗೊಳ್ಳಬೇಕೆಂದು ಗ್ರಾಮಸ್ಥರ ಪರವಾಗಿ ಕಕ್ಕಬ್ಬೆ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕಲ್ಯಾಟಂಡ ರಘು ತಮ್ಮಯ್ಯ ಒತ್ತಾಯಿಸಿದ್ದಾರೆ. -ಪಿ.ವಿ.ಪ್ರಭಾಕರ್