ಆಲೂರುಸಿದ್ದಾಪುರ, ಜು. ೨೮: ಶನಿವಾರಸಂತೆ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಅಳವಡಿಸಿದ್ದ ಕ್ರಿಮಿನಾಶಕ ಯಂತ್ರ ವಾಪಸ್ ತೆಗೆದುಕೊಂಡು ಹೋಗಲು ಬಂದವರನ್ನೆ ವಾಪಸ್ ಕಳುಹಿಸಿದ ಘಟನೆ ನಡೆದಿದೆ.

ಶನಿವಾರಸಂತೆ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕಳೆದ ೩ ವರ್ಷಗಳಿಂದ ಕೆಟ್ಟು ನಿಂತ್ತಿದ್ದ ಕ್ರಿಮಿನಾಶಕ ಯಂತ್ರದ ಬಗ್ಗೆ ಸಂಬAಧಪಟ್ಟವರಿಗೆ ಸ್ಥಳೀಯ ಗ್ರಾಮ ಪಂಚಾಯಿತಿ ಮನವಿ ಮಾಡಿತ್ತು. ಅದರಂತೆ ಕಳೆದ ಎರಡು ದಿನಗಳ ಹಿಂದೆ ನೂತನ ಯಂತ್ರವನ್ನು ಅಳವಡಿಸಲಾಗಿತ್ತು. ಯಂತ್ರ ಕಾರ್ಯಾರಂಭ ಕೂಡ ಮಾಡಿತ್ತು. ಆದರೆ ಜಿಲ್ಲಾಸ್ಪತ್ರೆಯಲ್ಲಿ ಅಳವಡಿಸಿರುವ ಕ್ರಿಮಿನಾಶಕ ಯಂತ್ರ ಇಂದು ಕೆಟ್ಟು ಹೋಗಿದ್ದರಿಂದ ಶನಿವಾರಸಂತೆ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಆಳವಡಿಸದ್ದ ಯಂತ್ರವನ್ನು ವಾಪಸ್ ತೆಗೆದುಕೊಂಡು ಹೋಗಲು ಆರೋಗ್ಯ ಇಲಾಖಾ ಸಿಬ್ಬಂದಿ ಮುಂದಾಗಿದ್ದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಶನಿವಾರಸಂತೆ ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಸದಸ್ಯರು ಯಾವುದೇ ಕಾರಣಕ್ಕೂ ಇದನ್ನು ತೆಗೆದುಕೊಂಡು ಹೋಗಬಾರದು ಎಂದು ವಿರೋಧ ವ್ಯಕ್ತಪಡಿಸಿ ತಾಲೂಕು ಆರೋಗ್ಯ ಅಧಿಕಾರಿಯವರಿಗೆ ಹಾಗೂ ಜಿಲ್ಲಾ ಆರೋಗ್ಯಾಧಿಕಾರಿಗಳ ಗಮನಕ್ಕೆ ತಂದ ಮೇರೆಗೆ ಕ್ರಿಮಿನಾಶಕವನ್ನು ಸಮುದಾಯ ಆರೋಗ್ಯ ಕೇಂದ್ರದಲ್ಲೇ ಇರಿಸಲಾಯಿತು.

ಈ ಸಂದರ್ಭ ಗ್ರಾ.ಪಂ. ಅಧ್ಯಕ್ಷೆ ಸರೋಜ ಶೇಖರ್, ಉಪಾಧ್ಯಕ್ಷ ಮಧು, ಸದಸ್ಯರಾದ ಸರ್ದಾರ್ ಆಹಮ್ಮದ್, ಶರತ್ ಶೇಖರ್ ಇದ್ದರು.

ವರದಿ: ದಿನೇಶ್ ಮಾಲಂಬಿ