ಗೋಣಿಕೊಪ್ಪಲು, ಜು. ೨೭: ಇತ್ತೀಚೆಗೆ ಜನನಿಬಿಡ ಪ್ರದೇಶದಲ್ಲಿ ಕಾಡಾನೆಗಳು ಪ್ರತ್ಯಕ್ಷಗೊಳ್ಳುತ್ತಿದ್ದು ನಾಗರಿಕರಲ್ಲಿ ಆತಂಕಕ್ಕೆ ಕಾರಣವಾಗಿದೆ.ಮನೆಯಿಂದ ಹೊರ ಬರಲು ನಾಗರಿಕರು ಭಯಪಡುತ್ತಿದ್ದಾರೆ. ಬುಧವಾರ ಮುಂಜಾನೆ ೭.೪೫ರ ಸುಮಾರಿಗೆ ತಿತಿಮತಿ ಸಮೀಪದ ದೇವಮಚ್ಚಿ ಬಳಿ ವಾಸವಿರುವ ಕೃಷ್ಣಪ್ಪ ಎಂಬವರ ಮನೆ ಬಾಗಿಲಿಗೆ ಆಗಮಿಸಿದ ಒಂಟಿ ಸಲಗವೊಂದು ಕೃಷ್ಣಪ್ಪ ಅವರಿಗೆ ಸೊಂಡಿಲಿನಿAದ ತಿವಿದು ನಂತರ ಮನೆಯ ಸುತ್ತಲಿನ ಪ್ಲಾಸ್ಟಿಕ್ ಹೊದಿಕೆಗಳನ್ನು ಎಳೆದು ಮನೆಯೊಳಗಿದ್ದ ವಸ್ತುಗಳನ್ನು ಚಲ್ಲಾಪಿಲ್ಲಿ ಮಾಡಿ ಅರಣ್ಯದತ್ತ ವಾಪಸ್ಸಾಗಿದೆ.

ಈ ವೇಳೆ ಕೃಷ್ಣಪ್ಪ (೫೫) ಅವರ ಕೈ ಹಾಗೂ ಎದೆಯ ಭಾಗಕ್ಕೆ ಗಾಯಗಳಾಗಿವೆ. ಮನೆಯಲ್ಲಿದ್ದ ಪತ್ನಿ ಪ್ರೇಮ ಹಾಗೂ ಮಗಳು ಈ ಘಟನೆಯಿಂದ ಬೆಚ್ಚಿಬಿದ್ದು ಮನೆಯಲ್ಲಿಯೇ ಕುಸಿದು ಬಿದ್ದಿದ್ದರು. ಗಾಯಗೊಂಡಿದ್ದ ಕೃಷ್ಣಪ್ಪ ಸುತ್ತಮುತ್ತಲಿನ ಜನರಿಗೆ ಈ ಘಟನೆ ಬಗ್ಗೆ ತಿಳಿಸಿ ನಂತರ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ತೆರಳಿದರು. ಈ ಪ್ರದೇಶವು ವನ್ಯ ಜೀವಿಯ ವಿಭಾಗಕ್ಕೆ ಸೇರಿದ್ದು ಸಾಕಷ್ಟು ಕಾಡಾನೆಗಳು ಈ ಭಾಗದಲ್ಲಿ ದಿನನಿತ್ಯ ಅಡ್ಡಾಡುತ್ತಿವೆ. ಒಂಟಿ ಸಲಗವೊಂದು ಹಲವು ಸಮಯದಿಂದ ಈ ಭಾಗದ ಜನರಿಗೆ ಭಯವನ್ನುಂಟು ಮಾಡುತ್ತಿದೆ.

ರಾಜ್ಯ ರೈತ ಸಂಘದ ಪೊನ್ನಂಪೇಟೆ ಅಧ್ಯಕ್ಷ ಚೊಟ್ಟೇಕಾಳಪಂಡ ಮನು ನೇತೃತ್ವದಲ್ಲಿ ಪದಾಧಿಕಾರಿಗಳು ಆಸ್ಪತ್ರೆಗೆ ತೆರಳಿ ಗಾಯಾಳು ಕೃಷ್ಣಪ್ಪ ಅವರ ಆರೋಗ್ಯ ವಿಚಾರಿಸಿದರು. ಕೃಷ್ಣಪ್ಪ ಪ್ರಾಣಾಪಾಯದಿಂದ ಪಾರಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಭಾಗದಲ್ಲಿ ಹಲವು ಕುಟುಂಬಗಳು ವಾಸವಿದ್ದು ಇಲ್ಲಿ ನೆಲೆಸಿರುವ ಬಡ ಕುಟುಂಬಗಳಿಗೆ ಇನ್ನೂ ಕೂಡ ಸರ್ಕಾರದ ವತಿಯಿಂದ ಮನೆ ಮಂಜೂರಾತಿ ಆಗಿಲ್ಲ. ಕೂಲಿಯನ್ನೇ ನಂಬಿ ಜೀವನ ನಡೆಸುತ್ತಿರುವ ಈ ಕುಟುಂಬಗಳು ನೂರಾರು ಬಾರಿ ಮನೆಗಾಗಿ ಅರ್ಜಿ ಸಲ್ಲಿಸಿದ್ದರೂ ಇನ್ನೂ ಕೂಡ ಇವರ ಅರ್ಜಿಯನ್ನು ಪರಿಗಣನೆಗೆ ತೆಗೆದುಕೊಂಡಿಲ್ಲ.

-ಹೆಚ್.ಕೆ.ಜಗದೀಶ್