ಪೊನ್ನಂಪೇಟೆ, ಜು. ೨೭: ಜಿಲ್ಲೆಯಲ್ಲಿ ಶಾಂತಿ ಕದಡಲು ಕೆಲವೇ ಕೆಲವು ಶಕ್ತಿಗಳು ನಿರಂತರವಾಗಿ ಯತ್ನಿಸುತ್ತಿವೆ. ಈ ರೀತಿಯ ಜಾಲಗಳನ್ನು ಪತ್ತೆಹಚ್ಚಿ ಅವುಗಳಿಗೆ ಕಟ್ಟುನಿಟ್ಟಾದ ಕಡಿವಾಣ ಹೇರಬೇಕು ಎಂದು ವೀರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕ ಪೊಲೀಸ್ ಇಲಾಖೆಯನ್ನು ಒತ್ತಾಯಿಸಿದೆ.

ಈ ಕುರಿತು ವೀರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಕೋಳುಮಂಡ ರಫೀಕ್ ಅವರ ನೇತೃತ್ವದ ಅಲ್ಪಸಂಖ್ಯಾತ ಪ್ರಮುಖರ ನಿಯೋಗ ವೀರಾಜಪೇಟೆಯಲ್ಲಿ ಡಿವೈಎಸ್ಪಿ ನಿರಂಜನರಾಜೇ ಅರಸ್ ಅವರನ್ನು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿತು.

ಹಿಂದಿನಿAದಲೂ ಶಾಂತಿಪ್ರಿಯತೆ ಮತ್ತು ಅನ್ಯೋನ್ಯತೆಗೆ ಹೆಸರಾಗಿದ್ದ ಕೊಡಗು ಜಿಲ್ಲೆಯಲ್ಲಿ ಏನಾದರೂ ಮಾಡಿ ಅಶಾಂತಿ ಸೃಷ್ಟಿಸಿ ಅದರ ಲಾಭ ಪಡೆದುಕೊಳ್ಳಲು ಮತೀಯ ಕಿಡಿಗೇಡಿಗಳ ಜಾಲವೊಂದು ಕಾರ್ಯನಿರ್ವಹಿಸುತ್ತಿರುವ ಬಗ್ಗೆ ವ್ಯಾಪಕವಾದ ಸಂಶಯವಿದೆ. ಕೊಡಗಿನ ಬಹುವರ್ಗದ ಜನರ ಸಾಮರಸ್ಯದ ಬದುಕನ್ನು ಸಹಿಸದ ಈ ಶಕ್ತಿಗಳು ಜನರ ನೆಮ್ಮದಿ ಹಾಳು ಮಾಡಲು ನಿರಂತರವಾಗಿ ಶ್ರಮಿಸುತ್ತಿದೆ. ಚುನಾವಣೆ ಸಂದರ್ಭ ಬಂದಾಗ ಈ ರೀತಿಯ ಹೇಡಿ ಕೃತ್ಯ ಹೆಚ್ಚಾಗುತ್ತದೆ. ಆದ್ದರಿಂದ ಪೊಲೀಸ್ ಇಲಾಖೆ ಇದನ್ನು ಗಂಭೀರವಾಗಿ ಪರಿಗಣಿಸಿ, ಶಾಂತಿ ಕದಡಲು ಸಮಾಜಘಾತಕ ಶಕ್ತಿಗಳ ಜಾಲವನ್ನು ಭೇದಿಸಿ ನಿಯಂತ್ರಣ ಕ್ರಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಎಂದು ಮನವಿ ಪತ್ರದಲ್ಲಿ ಆಗ್ರಹಿಸಲಾಗಿದೆ. ನಿಯೋಗದಿಂದ ಮನವಿ ಸ್ವೀಕರಿಸಿದ ನಿರಂಜನರಾಜೇ ಅರಸ್ ಮಾತನಾಡಿ, ಯಾವುದೇ ಶಕ್ತಿಗಳು ಪ್ರಯತ್ನಿಸಿದರೂ ಸಮಾಜದಲ್ಲಿ ಅಶಾಂತಿ ಸೃಷ್ಟಿಸಲು ಯಾರಿಗೂ ಅವಕಾಶ ನೀಡುವುದಿಲ್ಲ. ಈ ಕುರಿತು ಪೊಲೀಸ್ ಇಲಾಖೆ ಗಂಭೀರವಾಗಿ ಕಾರ್ಯನಿರ್ವಹಿಸುತ್ತಿದೆ. ಜನರಿಗೆ ಈ ಕುರಿತು ಯಾವುದೇ ಆತಂಕ ಬೇಡ ಎಂದು ಹೇಳಿದರು.

ವೀರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಕೋಳುಮಂಡ ರಫೀಕ್ ಮಾತನಾಡಿ, ಜಿಲ್ಲೆಯಲ್ಲಿ ಬಹುಪಾಲು ಜನರು ಸಾಮರಸ್ಯ ಬದುಕನ್ನೇ ಬಯಸುತ್ತಿದ್ದಾರೆ. ಜನಾಂಗೀಯ ಸಂಘರ್ಷ ಇಲ್ಲಿ ಯಾರಿಗೂ ಬೇಡ. ಇದರಿಂದ ಸಮಾಜಕ್ಕೆ ಯಾವುದೇ ಲಾಭವಿಲ್ಲ. ಆದರೆ ಜನರ ಮುಗ್ದತೆಯನ್ನು ದುರ್ಬಳಕೆ ಮಾಡಿಕೊಂಡು ಸಮಾಜದ ಸ್ವಾಸ್ಥö್ಯ ಹಾಳು ಮಾಡುತ್ತಿರುವ ಕೆಲಸ ಇತ್ತೀಚಿಗೆ ಅಲ್ಲಲ್ಲಿ ಕಂಡುಬರುತ್ತಿದೆ. ಈ ರೀತಿಯ ದುಷ್ಕೃತ್ಯಗಳನ್ನು ಯಾವುದೇ ವರ್ಗದವರು ಮಾಡಿದರೂ ಅವರಿಗೆ ತಕ್ಕ ಕಾನೂನು ಶಿಕ್ಷೆಯಾಗಬೇಕು ಎಂದು ಹೇಳಿದರಲ್ಲದೆ, ಕೊಡಗಿನಲ್ಲಿ ಜನಾಂಗೀಯ ಸಾಮರಸ್ಯ ಹೆಚ್ಚಾಗಿ ಶಾಂತಿ ನೆಲೆಸಬೇಕೆಂಬುದೇ ನಮ್ಮ ಅಂತಿಮ ಗುರಿ ಎಂದು ಸ್ಪಷ್ಟಪಡಿಸಿದರು.

ನಿಯೋಗದಲ್ಲಿ ವೀರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಉಪಾಧ್ಯಕ್ಷರು ಮತ್ತು ಗ್ರಾ. ಪಂ. ಸದಸ್ಯರ ಒಕ್ಕೂಟದ ಅಧ್ಯಕ್ಷ ಪಿ.ಎ. ಹನೀಫ್, ಪ್ರಧಾನ ಕಾರ್ಯದರ್ಶಿ ಬೆನ್ನಿ ಅಗಸ್ಟಿನ್, ವೀರಾಜಪೇಟೆ ಪಟ್ಟಣ ಪಂಚಾಯಿತಿ ಸದಸ್ಯರಾದ ಮೊಹಮ್ಮದ್ ರಾಫಿ, ಡಿಸಿಸಿ ಸದಸ್ಯರಾದ ಎಂ.ಎ. ಮೊಯ್ದು, ಕೊಡಗು ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಮಾಜಿ ಸದಸ್ಯರಾದ ಆತಿಫ್ ಮನ್ನಾ, ಕಾಂಗ್ರೆಸ್ ಮುಖಂಡರಾದ ಸಿ.ಎ. ನಾಸರ್, ವೀರಾಜಪೇಟೆ ನಗರ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ರುಮಾನ್, ಯುವ ಕಾಂಗ್ರೆಸ್ ಪ್ರಮುಖರಾದ ಶಬೀರ್ ಮೊದಲಾದವರು ಇದ್ದರು.