ಮಡಿಕೇರಿ, ಜು. ೨೭ : ಸಾಧನೆಗಳನ್ನು ಸಕಾರಗೊಳಿಸಲು ಸತತ ಪ್ರಯತ್ನ ಅಗತ್ಯ ಎಂದು ಆಜಾಧಿ ಕಾ ಅಮೃತ್ ಮಹೋತ್ಸವದ ಜಿಲ್ಲಾ ನೋಡಲ್ ಅಧಿಕಾರಿ ಡಾ.ಮೇಜರ್ ರಾಘವ್ ಅವರು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಮಡಿಕೇರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಮಂಗಳೂರು ವಿಶ್ವವಿದ್ಯಾನಿಲಯದಿಂದ ಆಯೋಜಿಸಿದ ಆಜಾಧಿ ಕಾ ಅಮೃತ್ ಮಹೋತ್ಸವ ಪ್ರಯುಕ್ತ ಕೊಡಗು ಜಿಲ್ಲಾ ಮಟ್ಟದ ಅಂತರ್ ಕಾಲೇಜು ಸ್ವಾತಂತ್ರ್ಯ ಓಟದಲ್ಲಿ ವಿಜೇತರಿಗೆ ಪ್ರಶಸ್ತಿ ಪತ್ರ ವಿತರಿಸಿ ಮಾತನಾಡಿದ ಅವರು, ಮನಸ್ಸಿದ್ದರೆ ಮಾರ್ಗ ಎನ್ನುವಂತೆ ವಿದ್ಯಾರ್ಥಿಗಳು ತಮಗೆ ಆಸಕ್ತಿ ಇರುವ ಕ್ಷೇತ್ರದಲ್ಲಿ ಸಾಧನೆ ಮಾಡುವುದು ಬಹಳ ಸುಲಭ. ಆದರೆ ಸತತ ಪ್ರಯತ್ನ ಮತ್ತು ಪರಿಶ್ರಮ ಬಹಳ ಮುಖ್ಯ. ವಿದ್ಯಾರ್ಥಿಗಳು ಪ್ರತಿಯೊಬ್ಬ ಸಾಧಕನ ಹಿಂದಿನ ಇತಿಹಾಸವನ್ನು ಓದಿ ಅರ್ಥೈಸಿಕೊಂಡು ಮುನ್ನಡೆಯಿರಿ ಎಂದರು.
ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ಪ್ರಾಂಶುಪಾಲರಾದ ಡಾ.ಸಿ.ಜಗತ್ ತಿಮ್ಮಯ್ಯ ಅವರು ಮಾತನಾಡಿ, ಸೋಲು ಗೆಲುವು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಆದ್ದರಿಂದ ಎರಡನ್ನು ಸಮ ಮನಸ್ಥಿತಿಯಿಂದ ಸ್ವೀಕರಿಸಿಕೊಂಡು ಹೋಗುವಂತೆ ಸ್ಪರ್ಧಾಳುಗಳಿಗೆ ಶುಭ ಕೋರಿದರು.
ಪುರುಷರ ಸ್ವಾತಂತ್ರö್ಯ ಓಟ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ಎನ್.ಎಚ್.ಮುರಳಿಧರ, ದ್ವಿತೀಯ ಸ್ಥಾನ ಮಡಿಕೇರಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್.ಸಂದೀಪ್, ತೃತೀಯ ಸ್ಥಾನ ಗೋಣಿಕೊಪ್ಪ ಕಾವೇರಿ ಕಾಲೇಜಿನ ಮೊನಿಶ್ ಮೇದಪ್ಪ.
ಮಹಿಳೆಯರ ವಿಭಾಗದಲ್ಲಿ ಪ್ರಥಮ ಮತ್ತು ದ್ವಿತೀಯ ಸ್ಥಾನವನ್ನು ಫೀಲ್ಡ್ ಮಾರ್ಷಲ್ ಕೆ. ಎಂ ಕಾರ್ಯಪ್ಪ ಕಾಲೇಜಿನ ಅಪ್ಸರಾ ಹೆಚ್.ಎ ಮತ್ತು ಧುನುಶ್ರೀ ಹೆಚ್.ಜಿ ಗಳಿಸಿಕೊಂಡರೆ ತೃತೀಯ ಸ್ಥಾನವನ್ನು ವೀರಾಜಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪಿ.ಎನ್.ಚೈತ್ರ ಪಡೆದುಕೊಂಡರು.
ಈ ಸಂದರ್ಭದಲ್ಲಿ ಮಡಿಕೇರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯ ವಿಭಾಗದ ಪ್ರೊ.ಎಂ.ಎನ್ ಪ್ರಕಾಶ್, ಇತಿಹಾಸ ವಿಭಾಗದ ಪ್ರೊ.ಟಿ.ಎಲ್. ತ್ಯಾಗರಾಜು, ದೈಹಿಕ ಶಿಕ್ಷಣ ನಿರ್ದೇಶಕರಾದ ಎವರೆಸ್ಟ್ ರೋಡ್ರಿಗಸ್, ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ಪವನ್ಕೃಷ್ಣ, ರಮೇಶ್ ಹಾಗೂ ಪ್ರವಾಸೋದ್ಯಮ ವಿಭಾಗದ ಪ್ರೊ.ಹರ್ಷಿತ್ ಉಪಸ್ಥಿತರಿದ್ದರು.