ಭಾಗಮಂಡಲ, ಜು. ೨೬: ದೇಶ ರಕ್ಷಣೆ ಇಂದು ಯುವ ಪೀಳಿಗೆ ಕೈಯ್ಯಲ್ಲಿದ್ದು, ಯುವ ಪೀಳಿಗೆಗೆ ದೇಶ ರಕ್ಷಣೆಯ ಮಾಹಿತಿಯ ಕೊರತೆಯಿದೆ. ಮಾರ್ಗದರ್ಶನ ತುಂಬುವ ಕೆಲಸ ನಡೆಯಬೇಕಿದೆ. ಅಲ್ಲದೆ ಇಂದು ಯುವಕರಿಗೆ ಸೈನ್ಯಕ್ಕೆ ಸೇರುವ ಹುರುಪು ಇದ್ದರೂ ಕೆಲವರು ವಿಫಲರಾಗುತ್ತಾರೆ ಚಿಕ್ಕವಯಸ್ಸಿನಿಂದಲೇ ದೈಹಿಕ ಕ್ಷಮತೆಯನ್ನು ಕಾಪಾಡಿಕೊಳ್ಳಬೇಕು ಎಂದು ನಿವೃತ್ತ ಲೆಫ್ಟಿನೆಂಟ್ (ಹಾನರರಿ) ಕುಂಬೇರ ಭೀಮಯ್ಯ ಹೇಳಿದರು. ಚೇರಂಗಾಲದ ಕಾವೇರಿ ಜನ್ಮಭೂಮಿಯಲ್ಲಿ ಭಾಗಮಂಡಲ ನಾಡು ಗೌಡ ಯುವ ಒಕ್ಕೂಟ ಆಯೋಜಿಸಿದ ಕಾರ್ಗಿಲ್ ವಿಜಯೋತ್ಸವದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಸ್ಮಾರಕಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದರು. ಇನ್ನೋರ್ವ ಅತಿಥಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಹೊಸೂರು ಸತೀಶ್ ಕುಮಾರ್ ಮಾತನಾಡಿ ಕಾರ್ಗಿಲ್ ಮತ್ತು ಸಿಯಾಚಿನ್ ಪ್ರದೇಶದಲ್ಲಿ ಅತ್ಯಂತ ಶೀತ ವಾತಾವರಣ ಹೊಂದಿದ್ದು ವಾಸಿಸಲು ಯೋಗ್ಯವಿಲ್ಲದ ಪ್ರದೇಶದಲ್ಲಿ ನಮ್ಮ ಸೈನಿಕರು ಕೆಚ್ಚೆದೆಯ ಹೋರಾಟವನ್ನು ಮೆರೆದಿದ್ದಾರೆ. ಇದನ್ನು ಸ್ಮರಿಸುತ್ತಾ ದೇಶ ರಕ್ಷಣೆ ಎಂಬುದು ಪ್ರತಿಯೊಬ್ಬನ ಕರ್ತವ್ಯವಾಗಿದೆ ಎಂದರು. ಈ ಸಂದರ್ಭ ಮಾಜಿ ಸೈನಿಕರುಗಳಾದ ನಿಡ್ಯಮಲೆ ನವೀನ್, ಕೇಟೋಳಿ ದೀಪಕ್, ಕುದುಕುಳಿ ಶೇಖರ್, ಕರ್ತವ್ಯ ನಿರತ ಸೈನಿಕ ಕೋಟೇರ ರಚನ್, ಒಕ್ಕೂಟದ ಅಧ್ಯಕ್ಷ ಕುದುಕುಳಿ ಕಿಶೋರ್ ಕುಮಾರ್. ಗ್ರಾಮ ಪಂಚಾಯಿತಿ ಸದಸ್ಯರಾದ ಸಿರಾಕಜೆ ನಾಗೇಶ್. ದಂಡಿನ ಜಯಂತ್, ಕಾರ್ಯದರ್ಶಿ ನಿಡ್ಯಮಲೆ ಚಲನ್, ನಿರ್ದೇಶಕರಾದ ನಿಡ್ಯಮಲೆ ರವೀಂದ್ರ, ಕುಯ್ಯಮುಡಿ ಸುನಿಲ್, ಕುದುಕುಳಿ ಅಶ್ವತ್, ಕೋಳಿಬೈಲು ಸುರೇಂದ್ರ, ಚೇತನ್ ಕೂಡಕಂಡಿ, ನಂಗಾರು ಪುನೀತ್, ಸದಸ್ಯರಾದ ಪಾಣತ್ತಲೆ ನಂದ, ಬಾರಿಕೆ ಜಗದೀಶ್, ನಿಲಯ ಪಾಲಕ ಶಿವಪ್ಪ ಉಪಸ್ಥಿತರಿದ್ದರು.