ಅತ್ಯಂತ ಅಪಾಯಕಾರಿ ಎಂ.ಡಿ.ಎA.ಎ. ಮಾದಕ ಪದಾರ್ಥ ಕೊಡಗಿಗೆ ಪದಾರ್ಪಣೆ ವೀರಾಜಪೇಟೆ, ಜು. ೨೬: ದಕ್ಷಿಣ ಕೊಡಗಿನ ಗಡಿ ತಾಲೂಕಾದ ವೀರಾಜಪೇಟೆಯಲ್ಲಿ ಕಳೆದ ಒಂದೂವರೆ ದಶಕದಿಂದ ಈಚೆಗೆ ದಂಧೆಯಾಗಿರುವ ಗಾಂಜಾದ ಅಮಲು ಬಹುಬೇಗನೇ ಹರಡುತ್ತಿದ್ದು ಇದು ಸದ್ದಿಲ್ಲದೆ ಯುವಜನತೆಯನ್ನು ಬಲಿಪಡೆಯುತ್ತಿದೆ.
ವೀರಾಜಪೇಟೆ ಕೊಡಗಿನ ಗಡಿಭಾಗವಾದ್ದರಿಂದ ಇಲ್ಲಿ ನಡೆಯದ ಚಟುವಟಿಕೆಗಳೇ ಇಲ್ಲ ಎನ್ನಬಹುದು. ಮೊದ ಮೊದಲು ನಗರ ಪ್ರದೇಶಕ್ಕೆ ಹೋದವರು ಖಾಸಗೀಯಾಗಿ ಅಲ್ಲಿ, ಇಲ್ಲಿ ಗಾಂಜಾ ಸೇವನೆ ಮಾಡಿಬರುವುದು. ಅದನ್ನು ಆಪ್ತವಲಯದಲ್ಲಿ ರಸವತ್ತಾಗಿ ಹೇಳಿಕೊಳ್ಳುವುದು ಇಷ್ಟಕ್ಕೆ ಸೀಮಿತವಾಗಿತ್ತು.
ಇಂದು ಹಾಗಲ್ಲ ವೀರಾಜಪೇಟೆ ಯಲ್ಲಿ ಮತ್ತು ಅದರ ಸುತ್ತಮುತ್ತಲಿನ ಊರುಗಳಲ್ಲಿ ಈಗ ಗಾಂಜಾ ಮತ್ತು ಮಾದಕ ವಸ್ತುಗಳ ಮಾರಾಟ ವಾಣಿಜ್ಯ ಸ್ವರೂಪವನ್ನು ಪಡೆದು ಕೊಂಡಿದೆ. ಕಾಲೇಜು ಹುಡುಗರಿಂದ ಹಿಡಿದು, ಸಂಸಾರಸ್ಥರ ತನಕ ತಲುಪುವ ಒಂದು ಅಮಲು ಪದಾರ್ಥವಾಗಿ ಮಾರ್ಪಟ್ಟಿದೆ.
ಇದಕ್ಕೆ ಪೂರಕವಾಗಿ ಲಾಕ್ಡೌನ್ ಸಮಯದಲ್ಲಿ ವೀರಾಜಪೇಟೆ ತಾಲೂಕಿನಲ್ಲಿ ೨೦೨೦ ಮೇ ತಿಂಗಳಿನಿAದ ಇಲ್ಲಿಯವರೆಗೆ ೧೭ ಪ್ರಕರಣಗಳು ಎನ್.ಡಿ.ಪಿ.ಎಸ್. ಕಾಯ್ದೆಯಡಿಯಲ್ಲಿ ದಾಖಲಾಗಿವೆ.
ಮಾದಕ ಪದಾರ್ಥವನ್ನು ಜನರಿಗೆ ಒಂದಕ್ಕೆ ಎರಡು ಬೆಲೆಗೆ ಮಾರಾಟ ಮಾಡುವ ವ್ಯಾಪಕ ಜಾಲವೇ ದಕ್ಷಿಣ ಕೊಡಗಿನಲ್ಲಿ ಕಾರ್ಯನಿರ್ವಹಿಸುತ್ತಿದೆ. ಸಾರ್ವಜನಿಕ ವಲಯದಲ್ಲಿ, ಕಾಲೇಜಿನ ಪೋಷಕರ ಸಭೆಗಳು, ಪೊಲೀಸರು ನಡೆಸುವ ಜನಸಂಪರ್ಕ ಸಭೆಗಳಲ್ಲಿಯೂ ಸಾರ್ವಜನಿಕರು ಆಕ್ರೋಶ ಹಾಗೂ ಕಳವಳದ ಜೊತೆಗೆ ವೀರಾಜಪೇಟೆಯಲ್ಲಿ ಡ್ರಗ್ಸ್ ಜಾಸ್ತಿಯಾಗಿದೆ. ಆಯಕಟ್ಟಿನ ಜಾಗದಲ್ಲಿ ಇಂತಹ ಚಟುವಟಿಕೆಗಳು ನಡೆಯುತ್ತಿವೆ ಎಚ್ಚರ ವಹಿಸಿ ಎನ್ನುವ ಮಾತುಗಳನ್ನು ಪೊಲೀಸ್ ಇಲಾಖೆಗೆ ಹೇಳುತ್ತಲೇ ಇರುತ್ತಾರೆ. ಇತ್ತೀಚೆಗೆ ವೀರಾಜ ಪೇಟೆಯಲ್ಲಿ ನಡೆದ ಪೊಲೀಸ್ ಜನಸಂಪರ್ಕ ಸಭೆಯಲ್ಲಿ ಮೂರ್ನಾಲ್ಕು ಮಂದಿ ಇದೇ ವಿಚಾರವನ್ನು ಸಭೆಯಲ್ಲಿ ಹೇಳುವ ಯತ್ನ ಮಾಡಿದರು.
ಕೊಡಗಿಗೆ ಪ್ರವೇಶ ಪಡೆದ ಮಾರಕ ಎಂ.ಡಿ.ಎA.ಎ. ಡ್ರಗ್
ಇದುವರೆಗೂ ದೊಡ್ಡ ಹೈ ಎಂಡ್ ಪಾರ್ಟಿಗಳು, ವಿದೇಶದ ಸಂಗೀತ ಉತ್ಸವಗಳಲ್ಲಿ ಸದ್ದು ಮಾಡುತ್ತಿದ್ದ ಎಂ.ಡಿ.ಎA.ಎ. ಕ್ರಿಸ್ಟಲ್ ಪೌಡರ್ ಇದೇ ಮೊದಲ ಬಾರಿಗೆ ವೀರಾಜಪೇಟೆಯಲ್ಲಿ ಪತ್ತೆಯಾಗಿದೆ. ಜೂನ್ ೧೨ ರಂದು ಎಂ.ಡಿ.ಎA.ಎ. ಡ್ರಗ್ ಮಾರಾಟ ಮಾಡಲು ಬಂದಿದ್ದ ಹಾಗೂ ಕೊಳ್ಳಲು ಬಂದಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ವೀರಾಜಪೇಟೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಆರೋಗ್ಯ ಇಲಾಖೆಗೆ ಸಂಬAಧಪಟ್ಟವರೇ ಈ ಕೃತ್ಯದಲ್ಲಿ ಅತಿಹೆಚ್ಚು ಶಾಮೀಲು
ಆಗಾಗ್ಗೆ ಸಾರ್ವಜನಿಕ ವಲಯದಲ್ಲಿ ಈ ವಿಚಾರ ಚರ್ಚೆಗೆ ಮುನ್ನೆಲೆಗೆ ಬರುತ್ತಲೇ ಇದೆ. ಆರೋಗ್ಯ ಇಲಾಖೆಗೆ ಸಂಬAಧಪಟ್ಟ ಕೆಲವು ಮಳಿಗೆ, ವ್ಯಕ್ತಿಗಳು ಹಣದಾಸೆಗೆ ಕೆಲವರು ಈ ದಂಧೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಹೊರ ರಾಜ್ಯದ ಮಾದಕ ವ್ಯಸನಿಗಳು ಇಲ್ಲಿಗೆ ಬಂದು ಔಷಧ ಕೊಂಡುಕೊಳ್ಳುವ ನೆಪದಲ್ಲಿ ಮಾದಕ ಪದಾರ್ಥ ಖರೀದಿ ಮಾಡಿ ಹೋಗುತ್ತಿದ್ದಾರೆ ಎನ್ನುವ ವದಂತಿಯೂ ಇದೆ. ಇದಕ್ಕೆ ಪುಷ್ಟಿ ನೀಡುವಂತೆ ಇತ್ತೀಚೆಗೆ ಎಂ.ಡಿ.ಎA.ಎ. ಪ್ರಕರಣದಲ್ಲಿ ಸಿಕ್ಕಿಬಿದ್ದ ಆರೋಪಿಯೂ ಸರ್ಕಾರಿ ಆರೋಗ್ಯ ಸೇವೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಹಲವು ವರ್ಷಗಳಿಂದ ಇದೇ ದಂಧೆಯಲ್ಲಿ ತೊಡಗಿಸಿಕೊಂಡಿದ್ದಾನೆ ಎನ್ನಲಾಗಿದೆ. ಇನ್ನೂ ಕೆಲವು ನಿಷೇಧಿತ ಮಾತ್ರೆಗಳು ಮತ್ತು ಔಷಧಿಗಳನ್ನು ಅತೀ ಹೆಚ್ಚು ಹಣ ಪಡೆದು ಮಾರಾಟ ಮಾಡುವ ವ್ಯವಸ್ಥೆಯೂ ಜಿಲ್ಲೆಯೊಳಗೆ ಸದ್ದಿಲ್ಲದೆ ಕಾರ್ಯನಿರ್ವಹಿಸುತ್ತಿದೆ ಎನ್ನಲಾಗಿದೆ.
ಎಂ.ಡಿ.ಎA.ಎ ಡ್ರಗ್ ಅದೆಷ್ಟು ಅಪಾಯಕಾರಿ ಗೊತ್ತಾ?
ಇದರ ನಿರಂತರ ಸೇವನೆಯಿಂದ ದಿನಕಳೆದಂತೆ ಕಣ್ಣು ಮಂಜಾಗುವುದು, ವಾಕರಿಕೆ, ವಾಂತಿ, ಮಾಂಸಖAಡಗಳ ಸೆಳೆತ, ಹಸಿವು ಕಡಿಮೆ ಆಗುವುದು, ಮಾನಸಿಕ ಸ್ಥಿಮಿತ ಕಳೆದುಕೊಳ್ಳುವುದು ಇತ್ಯಾದಿ ಸಮಸ್ಯೆಗಳು ಬರುತ್ತವೆ. ಎಂ.ಡಿ.ಎA.ಎ. ಸೇವನೆ ನಂತರ ದೇಹದ ತಾಪಮಾನ ಒಮ್ಮೆಗೆ ಜಾಸ್ತಿಯಾಗಿ, ಪಾರ್ಶ್ವವಾಯು ಕೂಡಾ ಉಂಟಾಗಬಹುದು. ಅನೇಕ ಬಗೆಯ ಮಾನಸಿಕ ಸಮಸ್ಯೆಗಳು, ಅತೀ ಹೆಚ್ಚಿನ ಕೋಪ ಕೂಡಾ ಇದರಿಂದ ಉಂಟಾಗುತ್ತದೆ.
ವೀರಾಜಪೇಟೆಯಲ್ಲಿ ಮಾದಕ ಪದಾರ್ಥ ಮಾರಾಟಗಾರರನ್ನು ಹೇಗೆ ಮಟ್ಟ ಹಾಕಲಾಗುತ್ತಿದೆ?
ಸಾಧಾರಣವಾಗಿ ವೀರಾಜಪೇಟೆ ಯಲ್ಲಿ ಗಮನಿಸಿದರೆ ಒಂದು ಬಾರಿ ಎನ್.ಡಿ.ಪಿ.ಎಸ್. ಕಾಯ್ದೆಯಡಿಯಲ್ಲಿ ಬಂಧನವಾದವರೆ ಮತ್ತೊಮ್ಮೆ, ಮಗದೊಮ್ಮೆ ಅದೇ ಆರೋಪಿಗಳು ಅಪರಾಧ ಮಾಡಿರುವ ಪ್ರಕರಣಗಳು ಸಾಕಷ್ಟಿವೆ.
ಎನ್.ಡಿ.ಪಿ.ಎಸ್. ಕಾಯ್ದೆಯಲ್ಲಿ ನಿಗದಿಪಡಿಸಿದ ಹಾಗೆ ಮಾದಕ ಪದಾರ್ಥ ಯಾವ ಪ್ರಮಾಣದಲ್ಲಿ ಪತ್ತೆಯಾಗುತ್ತದೆ ಎಂಬ ಆಧಾರದಲ್ಲಿ ಅವರ ಅಪರಾಧದ ಸ್ವರೂಪ ನಿರ್ಧಾರವಾಗುವುದರಿಂದ ಚಿಕ್ಕಪುಟ್ಟ ಗ್ರಾಂಗಳಷ್ಟು ಒಂದು ಕೇಜಿಗಿಂತ ಕಡಿಮೆ ತೂಕದ ಮಾದಕ ಪದಾರ್ಥ ಮಾರಾಟ ಮಾಡುವ ಆರೋಪಿಗಳಿಗೆ ಬೇಗ ನ್ಯಾಯಲಯದಿಂದ ಜಾಮೀನು ದೊರಕುತ್ತದೆ.
ಇದೇ ಧೈರ್ಯದಲ್ಲಿ ಅವರು ಪುನಃ ಅದೇ ವೃತ್ತಿಯಲ್ಲಿ ತೊಡಗಿಸಿಕೊಳ್ಳುತ್ತಲೂ ಇರಬಹುದು. ಇಲ್ಲವೇ ಪೊಲೀಸರಿಗೂ ಉನ್ನತ ಅಧಿಕಾರಿಗಳಿಂದ ಡ್ರಗ್ ಡ್ರೈವ್ ಮಾಡಲೇಬೇಕಾದ ಅನಿವಾರ್ಯತೆ ಇದ್ದು ಈ ರೀತಿ ಪ್ರಕರಣಗಳು ಪದೇ ಪದೇ ದಾಖಲಾಗುತ್ತಿವೆಯಾ ಎಂಬುದೂ ಪ್ರಶ್ನೆಯಾಗಿದೆ.
ಡ್ರಗ್ ಜಾಲ ಬೇಧಿಸಲು ಜಿಲ್ಲೆ ಬಿಟ್ಟು ಪೊಲೀಸ್ ಇಲಾಖೆ ಹೊರಗಡೆ ಹೋಗುತ್ತಲೇ ಇಲ್ಲ. ವೀರಾಜಪೇಟೆಯಲ್ಲಿ ಡ್ರಗ್, ಗಾಂಜಾ ಅಥವಾ ಯಾವುದೇ ಮಾದಕ ಪದಾರ್ಥ ವಿಚಾರವಾಗಿ ಯಾರದಾದ್ದರೂ ಬಂಧನವಾದರೆ ಅದು ಮಗ್ಗುಲ, ಸುಂಕದಕಟ್ಟೆ, ಡೆಂಟಲ್ ಕಾಲೇಜ್ ಟರ್ನ್, ಬಿಳಿಗುಂದ ಜಂಕ್ಷನ್ ಈ ಸರಹದ್ದಿನ್ನಲ್ಲೇ ನಡೆದಿರುತ್ತದೆ.
ಪ್ರಕರಣ ದಾಖಲಾದ ಬಳಿಕ ಪೊಲೀಸ್ ವರಿಷ್ಟಾಧಿಕಾರಿಯ ಒಂದು ಸುದ್ದಿಗೋಷ್ಠಿಯ ಜೊತೆಗೆ ಅಲ್ಲಿಗೆ ಆ ಸುದ್ದಿ ತಣ್ಣಗಾಗುತ್ತದೆ. ಆದರೆ ಎಂದಿಗೂ ಆರೋಪಿಗಳ ಬಾಯಿಬಿಡಿಸಿ ಆ ಮೂಲಕ ತನಿಖೆಯನ್ನು ಮತ್ತೊಂದು ಹಂತಕ್ಕೆ ತೆಗೆದುಕೊಂಡು ಹೋಗಿ ಡ್ರಗ್ ಪೆಡ್ಲರ್ಗಳ ಹೆಡೆಮುರಿ ಕಟ್ಟುವ ಕೆಲಸಗಳು ಬಹುಶಃ ಬಹಳ ಕಡಿಮೆ ಪ್ರಕರಣಗಳಲ್ಲಿ ನಡೆಯುತ್ತಿವೆ.
ಕೊಡಗಿನಂತಹ ಪ್ರಶಾಂತ ಜಿಲ್ಲೆಗೆ ಮಾದಕತೆಯ ನಶೆ ಅಂಟಿಸುತ್ತಿರುವ ಕೆಡುಕರ ಹೆಡೆಮುರಿಯನ್ನು ಜಿಲ್ಲೆಯ ಪೊಲೀಸ್ ಇಲಾಖೆ ಕಟ್ಟಬೇಕಾಗಿದೆ. ಸಾರ್ವಜನಿಕ ವಲಯದಲ್ಲಿ, ವೀರಾಜಪೇಟೆಯ ಕಾಲೇಜು ವಿದ್ಯಾರ್ಥಿಗಳು ಒಟ್ಟಾಗಿ ಹಣ ಸಂಗ್ರಹ ಮಾಡಿ, ಒಬ್ಬ ಅಥವಾ ಇಬ್ಬರು ಕೆ.ಎಸ್.ಆರ್.ಟಿ.ಸಿ. ಬಸ್ನಲ್ಲಿ ಮೈಸೂರಿಗೆ ಹೋಗಿ ಡ್ರಗ್ ತಂದು ಹಂಚಿಕೆ ಮಾಡಿಕೊಳ್ಳುತ್ತಾರೆ ಎನ್ನುವ ಆರೋಪ ಮಾಡುತ್ತಾರೆ.
ಇಂತಹ ಮಾಹಿತಿಗಳನ್ನು ಪೊಲೀಸ್ ಇಲಾಖೆ ಕಡೆಗಣಸಲೇ ಬಾರದು. ವೀರಾಜಪೇಟೆ ಸರಹದ್ದು ಬಹಳ ಚಿಕ್ಕದು. ಅನುಮಾನ ಇರುವ ಕಡೆ ತಮ್ಮ ಸರ್ಪಗಾವಲು ಹೆಚ್ಚಿಸಿದರೆ ಇದಕ್ಕೆಲ್ಲಾ ಬ್ರೇಕ್ ಬೀಳಬಹುದು.
ಏನೇ ಇರಲಿ ಗಡಿ ತಾಲೂಕಾದ ವೀರಾಜಪೇಟೆ ಗಾಂಜಾ, ಅಫೀಮುಗಳ ಪ್ರಕರಣಗಳಲ್ಲಿ ಸದ್ದು ಮಾಡುತ್ತಿರುವುದು ಇಲ್ಲಿನ ಪರಿಸರ ಹಾಳಾಗುತ್ತಿರುವ ಮುನ್ಸೂಚನೆಯಂತೆ ಕಾಣುತ್ತಿದೆ. ಸಾರ್ವಜನಿಕರು, ಪೋಷಕರು ಹಾಗೂ ಪೊಲೀಸ್ ಇಲಾಖೆಯ ಜವಾಬ್ದಾರಿ ಈಗ ಮತ್ತಷ್ಟು ಹೆಚ್ಚಿದಂತಾಗಿದೆ. ಮಕ್ಕಳು ಹಾಗೂ ಪ್ರಾಪ್ತ ವಯಸ್ಕರ ಮೇಲೆ ಒಂದು ಕಣ್ಣು ಹೆಚ್ಚೇ ಇರಿಸ ಬೇಕಾಗಿದೆ.
- ಉಷಾ ಪ್ರೀತಮ್