ಮಡಿಕೇರಿ, ಜು.೨೬ : ಜನರಲ್ ತಿಮ್ಮಯ್ಯ ಮ್ಯೂಸಿಯಂನಲ್ಲಿರುವ ಅಮರ್ ಜವಾನ್ ಸ್ಮಾರಕಕ್ಕೆ ಕಾರ್ಗಿಲ್ ವಿಜಯ್ ದಿವಸ್ ಅಂಗವಾಗಿ ರೋಟರಿ ವುಡ್ಸ್ ವತಿಯಿಂದ ಪುಪ್ಪ ನಮನ ಸಲ್ಲಿಸಲಾಯಿತು. ಜಿಲ್ಲಾಧಿಕಾರಿ ಡಾ. ಬಿ.ಸಿ. ಸತೀಶ್ ಅವರು ಕೂಡ ಹಾಜರಿದ್ದು ಜಿಲ್ಲಾಡಳಿತದ ಪರವಾಗಿ ಹುತಾತ್ಮ ಯೋಧರಿಗೆ ಗೌರವ ಸಲ್ಲಿಸಿದರು.
ರೋಟರಿ ವುಡ್ಸ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ
(ಮೊದಲ ಪುಟದಿಂದ) ಪಾಲ್ಗೊಂಡು ಮಾತನಾಡಿದ ನಿವೃತ್ತ ಮೇಜರ್ ವೆಂಕಟಗಿರಿ, ಕಾರ್ಗಿಲ್ ಸಮರ ಎಂಬುದು ಇತಿಹಾಸದ ಪುಟಗಳಲ್ಲಿ ಭಾರತೀಯ ಯೋಧರ ತ್ಯಾಗ, ಬಲಿದಾನದ ಪ್ರತೀಕವಾಗಿ ಅಚ್ಚಳಿಯದೇ ದಾಖಲಾಗಿದೆ. ಭಾರತೀಯ ಸೈನ್ಯದ ಕೆಳಹಂತದ ಯೋಧರ ಧೈರ್ಯ, ಶ್ರಮದ ಫಲವೇ ಕಾರ್ಗಿಲ್ ವಿಜಯವಾಗಿದ್ದು ಅನೇಕ ಯೋಧರಿಗೆ ಕಠಿಣ ಹವಾಮಾನ ಪರಿಸ್ಥಿತಿಯಲ್ಲಿ ದ್ರಾಸ್, ಕಾರ್ಗಿಲ್ ವಲಯಗಳನ್ನು ವಶಪಡಿಸಿಕೊಳ್ಳುವುದು ಕಷ್ಟಸಾಧ್ಯ. ಈ ನಿಟ್ಟಿನಲ್ಲಿ ಮುಂದುವರೆದದ್ದೇ ಆದಲ್ಲಿ ಖಂಡಿತಾ ಎತ್ತರದ ಬೆಟ್ಟದ ಮೇಲೆ ಠಿಕಾಣಿ ಹೂಡಿದ್ದ ಪಾಕಿಸ್ತಾನ ಸೈನಿಕರ ಗುಂಡಿಗೆ ಬಲಿಯಾಗುತ್ತೇವೆ ಎಂದು ಚೆನ್ನಾಗಿಯೇ ತಿಳಿದಿತ್ತು. ಆದರೂ ಭಾರತಕ್ಕೆ ಮತ್ತೆ ಭೂಶಿಖರ ಮರಳಿ ಪಡೆಯುವ ಉದ್ದೇಶದಿಂದ ಅನೇಕ ಸೈನಿಕರು ಕೆಚ್ಚೆದೆಯಿಂದ ಮುಂದೆ ಸಾಗಿ ಪಾಕಿಸ್ತಾನ ಸೈನಿಕರನ್ನು ಬಗ್ಗು ಬಡಿದು ವಿಜಯವನ್ನು ಭಾರತೀಯ ಸೇನೆಗೆ ತಂದುಕೊಟ್ಟರು. ಈ ಹಂತದಲ್ಲಿ ಹಲವರು ಹುತಾತ್ಮರಾದದ್ದು ವಿಷಾದÀನೀಯ ಎಂದರು.
ಸಮಗ್ರ ತಯಾರಿಯೊಂದಿಗೆ ಅನೇಕ ತಿಂಗಳುಗಳಿಗೆ ಬೇಕಾದಷ್ಟು ಆಹಾರ ಪದಾರ್ಥಗಳನ್ನು ಪಾಕಿಸ್ತಾನ ಸೈನಿಕರು ಸಿದ್ಧವಾಗಿಸಿಕೊಂಡಿದ್ದರು. ನಾಲ್ಕು ವಲಯಗಳಲ್ಲಿ ಅದಾಗಲೇ ಪಾಕಿಸ್ತಾನ ಸೈನಿಕರು ಹಿಡಿತ ಸಾಧಿಸಿದ್ದರೂ. ಇಂಥ ಕಠಿಣ ಪರಿಸ್ಥಿತಿಯಲ್ಲಿ ಪಾಕಿಸ್ತಾನ ಸೈನಿಕರನ್ನು ಬಗ್ಗು ಬಡಿದು ಜಗತ್ತೇ ಮೆಚ್ಚುವಂತೆ ಭಾರತೀಯ ಸೈನಿಕರು ಕಾರ್ಯಾಚರಣೆ ನಡೆಸಿ ಕಾರ್ಗಿಲ್ ಶಿಖರ ಶ್ರೇಣಿ ಮರಳಿ ಪಡೆದದ್ದು ಊಹೆಗೂ ನಿಲುಕದ್ದು. ಇದಕ್ಕಾಗಿ ಹುತಾತ್ಮ ಸೈನಿಕರು, ಭಾರತೀಯ ಸೈನಿಕರನ್ನು ಎಷ್ಟು ಸ್ಮರಿಸಿಕೊಂಡರೂ ಸಾಲದು ಎಂದು ಮೇಜರ್ ವೆಂಕಟಗಿರಿ ಶ್ಲಾಘಿಸಿದರು. ಇದೇ ಸಂದರ್ಭ ಜಿಲ್ಲಾಧಿಕಾರಿ ಡಾ. ಬಿ.ಸಿ.ಸತೀಶ್, ಮೇಜರ್ ವೆಂಕಟಗಿರಿ ಅವರನ್ನು ರೋಟರಿ ವುಡ್ಸ್ ಪರವಾಗಿ ಸನ್ಮಾನಿಸಿ ಗೌರವಿಸಿದರು.
ರೋಟರಿ ಮಡಿಕೇರಿ ವುಡ್ಸ್ ಅಧ್ಯಕ್ಷ ಎಸ್.ಎಸ್. ಸಂಪತ್ ಕುಮಾರ್ ಸ್ವಾಗತಿಸಿ, ನಿರೂಪಿಸಿದರು. ಕಾರ್ಯದರ್ಶಿ ವಸಂತ್ ಕುಮಾರ್ ವಂದಿಸಿದರು. ಮಡಿಕೇರಿ ತಹಶೀಲ್ದಾರ್ ಮಹೇಶ್, ರೋಟರಿ ಉಪರಾಜ್ಯಪಾಲ ರತನ್ ತಮ್ಮಯ್ಯ, ರೋಟರಿ ಜಿಲ್ಲಾ ಪಬ್ಲಿಕ್ ಇಮೇಜ್ ಸಮಿತಿ ಅಧ್ಯಕ್ಷ ಅನಿಲ್ ಎಚ್.ಟಿ., ರೋಟರಿ ವುಡ್ಸ್ ಗೌರವ ಸಲಹೆಗಾರ ಮೋಹನ್ ಪ್ರಭು, ಜಿಲ್ಲಾ ಔಷಧಿ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಎ.ಕೆ. ಜೀವನ್, ಸರ್ವೋದಯ ಸಮಿತಿ ಅಧ್ಯಕ್ಷ ಅಂಬೆಕಲ್ ಕುಶಾಲಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಭಾರ ಸಹಾಯಕ ನಿರ್ದೇಶಕ ಚಿನ್ನಸ್ವಾಮಿ, ಅಧಿಕಾರಿ ಮಣಜೂರು ಮಂಜುನಾಥ್, ಸೇರಿದಂತೆ ರೋಟರಿ ವುಡ್ಸ್ ಸದಸ್ಯರು ಪಾಲ್ಗೊಂಡು ಹುತಾತ್ಮ ಸ್ಮಾರಕಕ್ಕೆ ಗೌರವ ನಮನ ಸಲ್ಲಿಸಿದರು.