ಚಿತ್ರ ವರದಿ: ವಾಸು.
ಸಿದ್ದಾಪುರ, ಜು. ೨೫: ವಿದ್ಯುತ್ ಸ್ಪರ್ಶಗೊಂಡು ಎರಡು ಕಾಡಾನೆಗಳು ಧಾರುಣವಾಗಿ ಸಾವನ್ನಪ್ಪಿರುವ ಘಟನೆ ನೆಲ್ಲಿಹುದಿಕೇರಿ ಗ್ರಾಮದಲ್ಲಿ ಸಂಭವಿಸಿದೆ. ಆಹಾರ ಅರಸಿಕೊಂಡು ಕಾಡಿನಿಂದ ನಾಡಿಗೆ ಲಗ್ಗೆಯಿಟ್ಟಿದ್ದ ಕಾಡಾನೆಗಳ ಹಿಂಡಿನ ಪೈಕಿ ಕಾಫಿ ತೋಟದ ಒಳಗೆ ಸುತ್ತಾಡುತ್ತಿದ್ದ ಒಂದು ಗಂಡಾನೆ ಹಾಗೂ ಮತ್ತೊಂದು ಹೆಣ್ಣಾನೆ ವಿದ್ಯುತ್ ಸ್ಪರ್ಶಗೊಂಡು ಸ್ಥಳದಲ್ಲೇ ಸಾವನ್ನಪ್ಪಿವೆ.
ನೆಲ್ಲಿಹುದಿಕೇರಿ ಗ್ರಾಮದ ಕೋಣೇರಿರ ಪ್ರಕಾಶ್ ಮಂದಣ್ಣ ಎಂಬವರಿಗೆ ಸೇರಿದ ಕಾಫಿ ತೋಟದ ಒಳಗೆ ಹಾಗೂ ಅವರ ತೋಟದ ಬದಿಯಲ್ಲಿರುವ ಮಂಡೇಪAಡ ಸುಮಂತ್ ಚಂಗಪ್ಪ ಎಂಬವರಿಗೆ ಸೇರಿದ ಕಾಫಿ ತೋಟದಲ್ಲಿ ಹಾದು ಹೋಗಿರುವ ೧೧ ಕೆ.ವಿ ವಿದ್ಯುತ್ ತಂತಿಯ ಮೇಲೆ ಮರದ ಕೊಂಬೆಗಳು ಬಿದ್ದ ಪರಿಣಾಮ ವಿದ್ಯುತ್ ತಂತಿಗಳು ಕೆಳಮಟ್ಟದಲ್ಲಿ ಇಳಿದಿದೆ. ಭಾನುವಾರ ತಡರಾತ್ರಿ ಕಾಡಾನೆಗಳು ಕಾಫಿ ತೋಟದ ಒಳಗೆ ಆಹಾರ ಅರಸಿಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಕೆಳಮಟ್ಟದಲ್ಲಿ ಹಾದುಹೋಗಿದ್ದ ವಿದ್ಯುತ್ ತಂತಿ ಸ್ಪರ್ಶಗೊಂಡು ಕೋಣೇರಿರ ಪ್ರಕಾಶ್ ರವರ ತೋಟದೊಳಗೆ ಅಂದಾಜು ೧೨ ವರ್ಷ ಪ್ರಾಯದ ಹೆಣ್ಣಾನೆಯ ಕುತ್ತಿಗೆ ಭಾಗಕ್ಕೆ ತಂತಿ ತಗುಲಿ ಸ್ಥಳದಲ್ಲೇ ಸಾವನ್ನಪ್ಪಿದೆ. ಇದರೊಂದಿಗಿದ್ದ ಮತ್ತೊಂದು ಗಂಡಾನೆ (ಅಂದಾಜು ೧೪ ವರ್ಷ ಪ್ರಾಯ) ಮಂಡೇಪAಡ ಸುಮಂತ್ ಚಂಗಪ್ಪನವರ ತೋಟದೊಳಗೆ ವಿದ್ಯುತ್ ಸ್ಪರ್ಶಗೊಂಡು ಹಣೆಗೆ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದೆ. ಈ ಘಟನೆಯು ಭಾನುವಾರ ತಡರಾತ್ರಿ ೨.೩೦ ರ ಸಮಯಕ್ಕೆ ನಡೆದಿರಬಹುದೆಂದು ಸೆಸ್ಕ್ ಸಿಬ್ಬಂದಿಗಳು ಅಂದಾಜಿಸಿದ್ದಾರೆ. ಸೋಮವಾರದಂದು ಪ್ರಕಾಶ್ ಅವರ ಕಾರ್ಮಿಕರು ಕೆಲಸಕ್ಕೆ ತೆರಳಿದ ಸಂದರ್ಭ ಕಾಡಾನೆಯೊಂದು ಸತ್ತಿರುವುದನ್ನು ಕಂಡು ಮಾಲೀಕರಿಗೆ ಮಾಹಿತಿ ನೀಡಿದ್ದಾರೆ. ನಂತರ ಮಾಲೀಕರು ಹಾಗೂ ಕಾರ್ಮಿಕರು ಸ್ಥಳಕ್ಕೆ ತೆರಳಿದಾಗ ಸಮೀಪದ ತೋಟದಲ್ಲಿ ಮತ್ತೊಂದು ಆನೆಯು ಸತ್ತಿರುವುದು ಕಂಡು ಬಂದಿದೆ. ಕೂಡಲೇ ಸ್ಥಳೀಯರು ಅರಣ್ಯ ಇಲಾಖಾಧಿಕಾರಿಗಳಿಗೆ ಮಾಹಿತಿ ನೀಡಿದ ಮೇರೆಗೆ ಅರಣ್ಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದರು. ಕಾಡಾನೆಗಳು ಕಾಫಿ ತೋಟದಲ್ಲಿ ಸತ್ತಿರುವ ವಿಚಾರ ತಿಳಿದು ಸಿದ್ದಾಪುರ ಸುತ್ತಮುತ್ತಲ ಸಾರ್ವಜನಿಕರು ತಂಡೋಪ ತಂಡವಾಗಿ ಆಗಮಿಸಿ ವೀಕ್ಷಿಸಿದರು. ಸಾರ್ವಜನಿಕರನ್ನು ನಿಯಂತ್ರಿಸಲು ಅರಣ್ಯ ಇಲಾಖಾ ಅಧಿಕಾರಿಗಳು ಹರಸಾಹಸಪಟ್ಟರು. ವನ್ಯಜೀವಿ ವೈದ್ಯಾಧಿಕಾರಿ ಡಾ. ಚಿಟ್ಟಿಯಪ್ಪ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಆರಣ್ಯದಲ್ಲಿ ಕಳೇಬರಗಳನ್ನು ಹೂತು ಹಾಕಲಾಯಿತು.
ಸ್ಥಳಕ್ಕೆ ಮಡಿಕೇರಿ ವಿಭಾಗದ ಡಿ.ಸಿ.ಎಫ್ ಪೂವಯ್ಯ, ಎ.ಸಿ.ಎಫ್ ಎ.ಎ ಗೋಪಾಲ್, ಕುಶಾಲನಗರ ವಲಯ ಅರಣ್ಯಾಧಿಕಾರಿ ಶಿವರಾಂ, ಉಪವಲಯ ಅರಣ್ಯಾಧಿಕಾರಿ ಕೂಡಕಂಡಿ ಸುಬ್ರಾಯ, ಸಿದ್ದಾಪುರ ಠಾಣಾಧಿಕಾರಿ ಮೋಹನ್‌ರಾಜ್ ಹಾಗೂ ಸೆಸ್ಕ್ ಚೆಟ್ಟಳ್ಳಿ ಶಾಖಾಧಿಕಾರಿ ಪ್ರಕಾಶ್ ಮತ್ತು ಅರಣ್ಯ ಇಲಾಖಾ ಸಿಬ್ಬಂದಿಗಳು ಮತ್ತು ಸೆಸ್ಕ್ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲಿಸಿದರು. ಕಳೆದ ಎರಡು ತಿಂಗಳ ಹಿಂದೆಯಷ್ಟೇ ವಿದ್ಯುತ್ ಸ್ಪರ್ಶಗೊಂಡು ಅರೆಕಾಡು ರಸ್ತೆಯ ವಿವೇಕ್ ಎಂಬವರ ಕಾಫಿ ತೋಟದೊಳಗೆ ಕಾಡಾನೆ ಸಾವನ್ನಪ್ಪಿತ್ತು. ಅದು ಮಾಸುವ ಮುನ್ನವೇ ಇದೀಗ ಎರಡು ಕಾಡಾನೆಗಳು ವಿದ್ಯುತ್ ಸ್ಪರ್ಶಗೊಂಡು ಸಾವನ್ನಪ್ಪಿರುವುದು ದುರಂತ.
ಅAತ್ಯಕ್ರಿಯೆಗೆ ವಿರೋಧ
ನೆಲ್ಲಿಹುದಿಕೇರಿಯ ಕಾಫಿ ತೋಟದೊಳಗೆ ಸತ್ತಿರುವ ಕಾಡಾನೆಗಳ ಕಳೇಬರಗಳನ್ನು ಕಾಫಿ ತೋಟದೊಳಗೆ ಹೂತು ಹಾಕಲು ಕರ್ನಾಟಕ ರೈತ ಸಂಘದ ಪದಾಧಿಕಾರಿಗಳು ಹಾಗೂ ಬೆಳೆಗಾರರು ವಿರೋಧ ವ್ಯಕ್ತಪಡಿಸಿದರು. ರೈತ ಸಂಘದ ಅಮ್ಮತ್ತಿ ಹೋಬಳಿಯ ಅಧ್ಯಕ್ಷ ಮಂಡೇಪAಡ ಪ್ರವೀಣ್ ಬೋಪಯ್ಯ ಮಾತನಾಡಿ, ತೋಟಗಳಲ್ಲಿ ಹೂತು ಹಾಕಿದ್ದಲ್ಲಿ ಮುಂದಿನ ದಿನಗಳಲ್ಲಿ ಅದರ ದುರ್ನಾತಕ್ಕೆ ಕಾರ್ಮಿಕರು ಕೆಲಸಕ್ಕೆ ಬರುವುದಿಲ್ಲ. ಕಾಡಾನೆ ಹಾವಳಿಯನ್ನು ನಿಯಂತ್ರಿಸಬೇಕಾದ ಅರಣ್ಯ ಇಲಾಖೆಗೆ ಸೇರಿದ ಕಾಡಾನೆಗಳ ಕಳೇಬರಗಳನ್ನು ಅರಣ್ಯ ಪ್ರದೇಶದೊಳಗೆ ಹೂತು ಹಾಕಬೇಕೆಂದು ಒತ್ತಾಯಿಸಿದರು. ಇದಕ್ಕೆ ಗ್ರಾಮಸ್ಥರು ಬೆಂಬಲಿಸಿದರು. ಗ್ರಾಮಸ್ಥರ ಒತ್ತಾಯದ ಮೇರೆಗೆ ಎರಡು ಕಾಡಾನೆಗಳನ್ನು ಕ್ರೇನ್ ಮೂಲಕ ಮೀನುಕೊಲ್ಲಿ ಅರಣ್ಯ ಪ್ರದೇಶಕ್ಕೆ ಸಾಗಿಸಿ ನಂತರ ಅಲ್ಲಿ ಗುಂಡಿ ತೆಗೆದು ಹೂತು ಹಾಕಲಾಯಿತು.
ವಿದ್ಯುತ್ ಸ್ಪರ್ಶದಿಂದ ಆನೆಗಳು ಸಾವಿಗೀಡಾಗಿರುವ ಹಿನ್ನೆಲೆಯಲ್ಲಿ ವನ್ಯಜೀವಿ ಕಾಯ್ದೆ ಅನ್ವಯ ಕ್ರಮಕೈಗೊಳ್ಳಲಾಗಿದೆ. ಸ್ಥಳೀಯ ಸಂಬAಧಿತ ಜೆಇ ವಿರುದ್ಧ ಮೊಕದ್ದಮೆ ದಾಖಲಿಸಿಕೊಂಡಿದ್ದು, ತನಿಖೆ ನಡೆಸಲಾಗುತ್ತದೆ ಎಂದು ಮಡಿಕೇರಿ ಅರಣ್ಯ ಉಪ
(ಮೊದಲ ಪುಟದಿಂದ) ಸಂರಕ್ಷಣಾಧಿಕಾರಿ ಎ.ಟಿ. ಪೂವಯ್ಯ ‘ಶಕ್ತಿ’ಗೆ ಮಾಹಿತಿಯಿತ್ತಿದ್ದಾರೆ.
‘ವರದಿ ನೀಡಲು ಸೂಚಿಸಿದ್ದೇನೆ’
ವಿದ್ಯುತ್ ಸ್ಪರ್ಶದಿಂದ ಎರಡು ಕಾಡಾನೆಗಳು ಸಾವನ್ನಪ್ಪಿರುವ ಸಂಬAಧ ಪರಿಶೀಲಿಸಿ ವರದಿ ನೀಡುವಂತೆ ಕುಶಾಲನಗರ ಸಹಾಯಕ ಕಾರ್ಯಪಾಲಕ ಅಭಿಯಂತರ ಅಶೋಕ್ ಅವರಿಗೆ ಸೂಚಿಸಿದ್ದೇನೆ. ವರದಿ ಬಂದ ನಂತರ ಮುಂದಿನ ಕ್ರಮಕೈಗೊಳ್ಳಲಾಗುತ್ತದೆ ಎಂದು ಸೆಸ್ಕ್ ಕಾರ್ಯಪಾಲಕ ಅಭಿಯಂತರರಾದ ಅನಿತಾಬಾಯಿ ‘ಶಕ್ತಿ’ಗೆ ತಿಳಿಸಿದ್ದಾರೆ.
ಸೆಸ್ಕ್ ನಿರ್ಲಕ್ಷö್ಯ - ರೈತ ಸಂಘ ಆರೋಪ
ವಿದ್ಯುತ್ ಸ್ಪರ್ಶಿಸಿ ಕಾಡಾನೆಗಳು ಸಾವನ್ನಪ್ಪಿರುವ ಘಟನೆಗೆ ಸೆಸ್ಕ್ ನಿರ್ಲಕ್ಷö್ಯವೇ ಕಾರಣ ಎಂದು ಆರೋಪಿಸಿರುವ ರೈತ ಸಂಘ ಈ ಪ್ರಕರಣಕ್ಕೆ ಸೆಸ್ಕ್ ಹಿರಿಯ ಅಧಿಕಾರಿಗಳನ್ನು ಹೊಣೆ ಮಾಡಬೇಕೆಂದು ಒತ್ತಾಯಿಸಿದೆ. ಗೋಣಿಕೊಪ್ಪಲುವಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರೈತ ಸಂಘದ ಜಿಲ್ಲಾಧÀ್ಯಕ್ಷ ಕಾಡ್ಯಮಾಡ ಮನುಸೋಮಯ್ಯ, ಸಿದ್ದಾಪುರ ವ್ಯಾಪ್ತಿ ಹಾಗೂ ಜಿಲ್ಲೆಯ ವಿವಿಧ ಭಾಗದ ರೈತರ ತೋಟದಲ್ಲಿ ೧೧ ಕೆ.ವಿ.ವಿದ್ಯುತ್ ತಂತಿಗಳು ಹಾದು ಹೋಗಿವೆ. ಆದರೆ, ಇದರ ನಿರ್ವಹಣೆ ಇಲ್ಲದೆ ತಂತಿಗಳು ಅತ್ಯಂತ ಕೆಳಮಟ್ಟದಲ್ಲಿ ಜೋತು ಬಿದ್ದಿವೆ. ಇದರಿಂದಾಗಿ ಪ್ರಾಣ ಹಾನಿಗಳು ಸಂಭವಿಸುತ್ತಿವೆ.
ಸರ್ಕಾರ ಹಾಗೂ ಜಿಲ್ಲೆಯ ಜನಪ್ರತಿನಿಧಿಗಳು ಈ ಬಗ್ಗೆ ತಕ್ಷಣ ಕ್ರಮಕ್ಕೆ ಮುಂದಾಗಬೇಕು, ರೈತರ ತೋಟದಲ್ಲಿ ಇರುವ ವಿದ್ಯುತ್ ತಂತಿಯನ್ನು ಅಪಾಯ ಮಟ್ಟದಿಂದ ಮೇಲಕ್ಕೆ ಎತ್ತರಿಸಬೇಕು. ಈ ಬಗ್ಗೆ ಕ್ರಮಕ್ಕೆ ಮುಂದಾಗದಿದ್ದಲಿ ರೈತ ಸಂಘ ಪ್ರತಿಭಟನೆ ಕೈಗೆತ್ತಿಕೊಳ್ಳಲಿದೆ ಎಂದು ಎಚ್ಚರಿಸಿದರು.
ಗೋಷ್ಠಿಯಲ್ಲಿ ರೈತ ಸಂಘ ಜಿಲ್ಲಾ ಸಂಚಾಲಕ ಪುಚ್ಚಿಮಾಡ ಸುಭಾಷ್ ಸುಬ್ಬಯ್ಯ, ಅಮ್ಮತ್ತಿ ಹೋಬಳಿ ಅಧ್ಯಕ್ಷ ಮಂಡೆಪAಡ ಪ್ರವೀಣ್ ಹಾಗೂ ಮಾಯಮುಡಿ ಅಧ್ಯಕ್ಷ ಪುಚ್ಚಿಮಾಡ ರಾಯ್ ಮಾದಪ್ಪ ಉಪಸ್ಥಿತರಿದ್ದರು.
ಮಿತಿಮೀರಿದ ಹಾವಳಿ: ನೆಲ್ಯಹುದಿಕೇರಿ ಹಾಗೂ ಅಭ್ಯತ್‌ಮಂಗಲ ಗ್ರಾಮದ ಅತ್ತಿಮಂಗಲ, ಬೆಟ್ಟದಕಾಡು, ನಲ್ವತ್ತೇಕರೆ ಭಾಗದಲ್ಲಿ ಕಾಡಾನೆಗಳ ಹಾವಳಿ ಮಿತಿಮೀರಿದೆ. ಕಾಫಿ ತೋಟದ ಒಳಗೆ ಕಾಡಾನೆಗಳ ಹಿಂಡು ಬೀಡುಬಿಟ್ಟು ದಾಂಧಲೆ ನಡೆಸುತ್ತಾ ಕೃಷಿ ಫಸಲುಗಳನ್ನು ನಾಶಗೊಳಿಸುತ್ತಿವೆೆ. ಜನವಸತಿ ಪ್ರದೇಶಗಳ ಮನೆಗಳ ಅಂಗಳದಲ್ಲಿ ದಾಂಧಲೆ ನಡೆಸುತ್ತಾ ಮನೆಗಳ ಸಾಮಗ್ರಿಗಳನ್ನು ಹಾಗೂ ಹೂ ಕುಂಡಗಳನ್ನು ಹಾನಿಗೊಳಿಸುತ್ತಿವೆ. ಇತ್ತೀಚೆಗೆ ಅತ್ತಿಮಂಗಲದ ಮೇರಿಲ್ಯಾಂಡ್ ಕಾಫಿ ತೋಟದ ಮಾಲೀಕರಿಗೆ ಸೇರಿದ ಎರಡು ಕಾರುಗಳ ಮೇಲೆ ಮನೆಯಂಗಳದಲ್ಲಿ ಧಾಳಿ ನಡೆಸಿ ಹಾನಿಗೊಳಿಸಿತ್ತು. ಈ ಘಟನೆಗಳು ಮನೆಯ ಸಿ.ಸಿ. ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಈ ಭಾಗದ ಕಾಫಿ ತೋಟಗಳಲ್ಲಿ ಮರಿಯಾನೆಗಳು ಸೇರಿದಂತೆ ೨೫ಕ್ಕೂ ಅಧಿಕ ಕಾಡಾನೆಗಳು ಬೀಡುಬಿಟ್ಟು ಆತಂಕ ಸೃಷ್ಟಿಸಿವೆÉ. ಕಾಫಿ ಬೆಳೆಗಾರರಿಗೆ ಹಾಗೂ ಕಾರ್ಮಿಕರಿಗೆ ನೆಮ್ಮದಿ ಇಲ್ಲದಂತಾಗಿದೆ. ಕಾಡಾನೆ ಹಾವಳಿಯನ್ನು ತಡೆಗಟ್ಟುವಂತೆ ಹಾಗೂ ಶಾಶ್ವತ ಯೋಜನೆಯನ್ನು ರೂಪಿಸುವಂತೆ ಗ್ರಾಮಸ್ಥರು ಅರಣ್ಯ ಇಲಾಖಾಧಿಕಾರಿಗಳನ್ನು ಒತ್ತಾಯಿಸಿದ್ದಾರೆ.
ಕಾಡಾನೆಗಳು ಘೀಳಿಡುತ್ತಿವೆ! : ಕಾಡಾನೆಗಳ ಹಿಂಡಿನ ಪೈಕಿ ಎರಡು ಕಾಡಾನೆಗಳು ಕಾಫಿ ತೋಟದ ಒಳಗೆ ವಿದ್ಯುತ್ ಸ್ಪರ್ಶಗೊಂಡು ಸಾವನ್ನಪ್ಪಿದ್ದು, ಜೊತೆಯಲ್ಲಿದ್ದ ಇತರ ಕಾಡಾನೆಗಳು ತಮ್ಮ ಸಹಪಾಠಿಗಳನ್ನು ಹುಡುಕಿಕೊಂಡು ಅತ್ತಿಮಂಗಲ, ಕಾಟಿಬಾಣೆ, ಅರೆಕಾಡು ಗ್ರಾಮದ ಕಾಫಿ ತೋಟಗಳಲ್ಲಿ ಹಾಗೂ ಗದ್ದೆಗಳಲ್ಲಿ ಘೀಳಿಡುತ್ತಾ ಸುತ್ತಾಡುತ್ತಿವೆ ಎಂದು ಸ್ಥಳೀಯರು ತಿಳಿಸಿದ್ದಾರೆ.