ಮಡಿಕೇರಿ, ಜು. ೨೫: ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಕೇಂದ್ರ ಪರಿಸರ ಖಾತೆ ಸಚಿವ ಭೂಪೇಂದ್ರ ಯಾದವ್ ಅವರನ್ನು ನವದೆಹಲಿಯಲ್ಲಿ ಭೇಟಿಯಾದ ಕರ್ನಾಟಕದ ಮಲೆನಾಡು ಜಿಲ್ಲೆಗಳ ಸಂಸದರ ತಂಡದ ನಿಯೋಗ ಕಸ್ತೂರಿರಂಗನ್ ವರದಿ ಜಾರಿಯ ಪ್ರತಿಕೂಲ ಪರಿಣಾಮಗಳ ಬಗ್ಗೆ ಮನವರಿಕೆ ಮಾಡಿತು.
ಮನವಿಗೆ ಸ್ಪಂದಿಸಿದ ಸಚಿವ ಭೂಪೇಂದ್ರ ಯಾದವ್, ನಿಯೋಗಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿ, ಅರಣ್ಯ ಇಲಾಖೆಯ ನಿವೃತ್ತ ಉನ್ನತಾಧಿಕಾರಿ ಸಂಜಯ್ ಕುಮಾರ್ ಅಧ್ಯಕ್ಷತೆಯಲ್ಲಿ ಐವರು ಉನ್ನತಾಧಿಕಾರಿಗಳ ಸಮಿತಿ ರಚನೆ ಮಾಡಿದ್ದಾರೆ. ರಾಜ್ಯಗಳಿಂದ ಕಸ್ತೂರಿರಂಗನ್ ವರದಿ ಬಗ್ಗೆ ಅಭಿಪ್ರಾಯ ಪಡೆಯಲು ಸಮಿತಿಗೆ ಸೂಚನೆ ನೀಡಿದ ಸಚಿವ ಭೂಪೇಂದ್ರ ಯಾದವ್, ಪ್ರತೀ ಗ್ರಾಮಮಟ್ಟ ದಲ್ಲಿಯೂ ಪ್ರತ್ಯೇಕ ಸಭೆ ನಡೆಸಿ ಗ್ರಾಮಸ್ಥರ ಅಭಿಪ್ರಾಯ ಪಡೆಯುವಂತೆ ಕೇಂದ್ರ ಸಮಿತಿಗೆ ಸೂಚನೆ ನೀಡಿದ್ದಾರೆ.
ಆಯಾ ಗ್ರಾಮಮಟ್ಟದಲ್ಲಿನ ಚಟುವಟಿಕೆಗಳ ಬಗ್ಗೆಯೂ ಮಾಹಿತಿ ಪಡೆದು ವರದಿ ಜಾರಿಯಾದಲ್ಲಿ ಉಂಟಾಗಬಹುದಾದ ಸಮಸ್ಯೆಯ ಬಗ್ಗೆ ಮಾಹಿತಿಗೆ ಸೂಚನೆ ನೀಡಲಾಗಿದ್ದು, ಗ್ರಾಮಮಟ್ಟದಿಂದ ಅಧಿಕಾರಿಗಳ ಸಮಿತಿ ವರದಿ ಪಡೆಯುವುದರೊಂದಿಗೆ ರಾಜ್ಯ ಸರ್ಕಾರ ಕೂಡ
(ಮೊದಲ ಪುಟದಿಂದ) ರಾಜ್ಯಮಟ್ಟದಲ್ಲಿ ಪ್ರತ್ಯೇಕ ಸಮಿತಿ ರಚಿಸಲಿದೆ. ಈ ಸಮಿತಿಯು ಕೇಂದ್ರದಿAದ ಬರುವ ಸಮಿತಿಗೆ ಕಾಲದಿಂದ ಕಾಲಕ್ಕೆ ವರದಿಯ ಪರಿಣಾಮಗಳ ಬಗ್ಗೆ ಮಾಹಿತಿ ನೀಡಲಿದೆ ಎಂದು ಸಚಿವರ ಸೂಚನೆ ಬಗ್ಗೆ ಸಂಸದ ಪ್ರತಾಪ್ ಸಿಂಹ ತಿಳಿಸಿದ್ದಾರೆ.
ಇಷ್ಟೊಂದು ನಡೆಯಲು ಹಲವು ತಿಂಗಳುಗಳು ಬೇಕಾಗಿದೆ ಹೀಗಾಗಿ ಯಾವುದೇ ಕಾರಣಕ್ಕೂ ಕೊಡಗೂ ಸೇರಿದಂತೆ ರಾಜ್ಯದ ಪಶ್ಚಿಮಘಟ್ಟ ಪ್ರದೇಶದ ಜನತೆ ಕಸ್ತೂರಿರಂಗನ್ ವರದಿ ಬಗ್ಗೆ ಆತಂಕಪಡುವುದು ಬೇಡ ಎಂದು ಸಂಸದ ಪ್ರತಾಪ್ ಸಿಂಹ ತಿಳಿಸಿದ್ದಾರೆ.
ಸಚಿವ ಭೂಪೇಂದ್ರ ಯಾದವ್ ಅವರಿಂದ ಕರ್ನಾಟಕದ ಮುಖ್ಯಮಂತ್ರಿ, ಸಂಸದರ ನಿಯೋಗಕ್ಕೆ ಸಕಾರಾತ್ಮಕ ಸ್ಪಂದನೆ ಲಭಿಸಿದೆ. ಯಾವುದೇ ಕಾರಣಕ್ಕೂ ಜನರು ಆತಂಕಗೊಳ್ಳುವ ಅಗತ್ಯ ಇಲ್ಲ. ಸಚಿವರ ಸಕಾರಾತ್ಮಕ ಸ್ಪಂದನೆ ಸಮಾಧಾನ ತಂದಿರುವುದಾಗಿ ಪ್ರತಾಪ್ ಸಿಂಹ ಹೇಳಿದ್ದಾರೆ.