ಗೋಣಿಕೊಪ್ಪಲು, ಜು. ೨೪: ಕಳೆದ ಇಪ್ಪತ್ತು ವರ್ಷಗಳಿಂದ ಗ್ರಾಮದ ಜನರಿಗೆ ಬಹು ಮುಖ್ಯವಾಗಿ ಬೇಕಾದ ರಸ್ತೆ ಹಾಗೂ ಕುಡಿಯುವ ನೀರಿಗಾಗಿ ನಿರಂತರ ಕಷ್ಟ ಎದುರಿಸುತ್ತಿದ್ದ ಸಾವಿರಾರು ಜನರಿಗೆ ನ್ಯಾಯಾಲಯದ ಮೂಲಕ ನ್ಯಾಯ ಒದಗಿಸಿಕೊಟ್ಟ ಕಾಂಗ್ರೆಸ್ ಹಿರಿಯ ಮುಖಂಡ, ಹೈಕೋರ್ಟ್ ವಕೀಲ ಎ.ಎಸ್. ಪೊನ್ನಣ್ಣ ಅವರನ್ನು ಚನ್ನಂಗೊಲ್ಲಿ ಗ್ರಾಮಸ್ಥರು ಸನ್ಮಾನಿಸಿ ಗೌರವಿಸಿದರು.

ಮಾಯಮುಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚನ್ನಂಗೊಲ್ಲಿ ಪೈಸಾರಿ ಜಾಗದಲ್ಲಿ ಸಾವಿರಾರು ಮಂದಿ ಹಲವಾರು ದಶಕಗಳಿಂದ ನೆಲೆ ಕಂಡುಕೊAಡಿದ್ದಾರೆ. ಆದರೆ ಈ ಜಾಗವು ದೇವರಕಾಡಿನಿಂದ ಕೂಡಿದೆ ಹೀಗಾಗಿ ಇಲ್ಲಿಗೆ ಯಾವುದೇ ರೀತಿಯಲ್ಲಿ ಕೆಲಸ ಮಾಡದಂತೆ ಕೆಲವು ಮಂದಿ ನ್ಯಾಯಾಲಯದ ಮೊರೆ ಹೊಗಿದ್ದರು.

ಇದರಿಂದಾಗಿ ಈ ಭಾಗದ ಜನರಿಗೆ ಬೇಕಾದ ಕುಡಿಯುವ ನೀರು ಹಾಗೂ ರಸ್ತೆ ಅಭಿವೃದ್ಧಿ ಮಾಡಲು ಕಾನೂನಿನ ತೊಡಕು ಉಂಟಾಗಿತ್ತು.

ಇದರ ಬಗ್ಗೆ ಅನೇಕ ರೀತಿಯ ಹೋರಾಟ ನಡೆಸಿದರೂ ಯಾವುದೇ ರೀತಿಯ ಪ್ರಯೋಜನವಾಗಿರಲಿಲ್ಲ. ಆದ್ದರಿಂದ ಈ ಸಮಸ್ಯೆಗಳನ್ನು ಬಗೆಹರಿಸಿಕೊಡುವಂತೆ ವಕೀಲ ಎ.ಎಸ್. ಪೊನ್ನಣ್ಣ ಅವರ ಬಳಿ ಗ್ರಾಮಸ್ಥರು ತಮ್ಮ ನೋವನ್ನು ತೋಡಿಕೊಂಡಿದ್ದರು.

ಗ್ರಾಮಸ್ಥರ ಮನವಿಯ ಮೇರೆ ಪೊನ್ನಣ್ಣ ಚನ್ನಂಗೊಲ್ಲಿ ಪೈಸಾರಿಗೆ ಭೇಟಿ ನೀಡಿ ಅಲ್ಲಿನ ನೈಜ ಪರಿಸ್ಥಿತಿ ಬಗ್ಗೆ ಅಲ್ಲಿನ ಸ್ಥಳೀಯ ನಾಗರಿಕರಿಂದ ಮಾಹಿತಿ ಪಡೆದು ನ್ಯಾಯ ಒದಗಿಸುವ ಭರವಸೆ ನೀಡಿದ್ದರು.

ಉಚ್ಚ ನ್ಯಾಯಾಲಯದಲ್ಲಿ ಗ್ರಾಮದ ಜನರ ಪರವಾಗಿ ವಾದ ಮಂಡಿಸಿದ್ದರು. ನ್ಯಾಯಾಲಯವು ಪೈಸಾರಿ ನಿವಾಸಿಗಳಿಗೆ ಕುಡಿಯುವ ನೀರು ಹಾಗೂ ರಸ್ತೆ ಅಭಿವೃದ್ಧಿಗೆ ಅಡ್ಡಿ ಪಡಿಸದಂತೆ ಆದೇಶಿಸಿತ್ತು.

ಇದರಿಂದ ಹರ್ಷಗೊಂಡ ಗ್ರಾಮಸ್ಥರು ಒಟ್ಟಾಗಿ ಸೇರಿ ನ್ಯಾಯಾಲಯದ ಮೂಲಕ ನ್ಯಾಯ ಒದಗಿಸಲು ಶ್ರಮಪಟ್ಟ ಎ.ಎಸ್. ಪೊನ್ನಣ್ಣ ಅವರನ್ನು ಗ್ರಾಮಕ್ಕೆ ಅದ್ಧೂರಿಯಾಗಿ ಬರಮಾಡಿಕೊಂಡು ಸನ್ಮಾನಿಸಿ ಗೌರವಿಸಿದರು.

ಗೌರವ ಸನ್ಮಾನ ಸ್ವೀಕರಿಸಿ ಮಾತನಾಡಿದ ಎ.ಎಸ್. ಪೊನ್ನಣ್ಣ ನ್ಯಾಯಾಲಯದ ಮುಂದೆ ಇಲ್ಲಿನ ವಸ್ತು ನಿಷ್ಠ ಪರಿಸ್ಥಿತಿಯನ್ನು ಇಡಲಾಗಿತ್ತು. ಇದರಿಂದಾಗಿ ನ್ಯಾಯಾಧೀಶರು ನ್ಯಾಯ ಒದಗಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಮಾಯಮುಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮೀನಾ ಅಧ್ಯಕ್ಷತೆ ವಹಿಸಿದ್ದರು. ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ತೀತಿರ ಧರ್ಮಜ, ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೀದೇರಿರ ನವೀನ್, ಕಾರ್ಯದರ್ಶಿ ಎ.ಜೆ. ಬಾಬು, ಗ್ರಾಮ ಪಂಚಾಯಿತಿ ಸದಸ್ಯರಾದ ಶಭರೀಶ್, ವಿನೋದ್ ಕುಮಾರ್, ಟಾಟು ಮೊಣ್ಣಪ್ಪ, ವಿನ್ಸೆಂಟ್ ಬಾಬು, ಚಿಣ್ಣಪ್ಪ, ಹಿತರಕ್ಷಣಾ ಸಮಿತಿ ಅಧ್ಯಕ್ಷ ಪುಷ್ಪಾ, ಜಿ.ಪಂ. ಮಾಜಿ ಸದಸ್ಯೆ ಪಿ.ಆರ್. ಪಂಕಜ, ಪಕ್ಷದ ಪ್ರಮುಖರಾದ ಚುಬ್ರು, ಶಾಜಿ ಅಚ್ಚುತ್ತನ್, ಪ್ರಮೋದ್ ಗಣಪತಿ, ಖಾಲಿದ್ ಸೇರಿದಂತೆ ಇನ್ನಿತರು ಹಾಜರಿದ್ದರು.

ವಿನ್ಸೆಂಟ್ ಬಾಬು ನಿರೂಪಿಸಿದರು. ತೀತಿರ ಧರ್ಮಜ ಪ್ರಾಸ್ತಾವಿಕ ಮಾತನಾಡಿದರು. ಟಾಟು ಮೊಣ್ಣಪ್ಪ ಸ್ವಾಗತಿಸಿ, ವಂದಿಸಿದರು.