ಕೇಶವ ಕಾಮತ್

ಕುಶಾಲನಗರ, ಜು. ೨೪: ಬಸವಾದಿ ಶರಣರ ವಿಚಾರಧಾರೆಗಳು ಸಾರ್ವಕಾಲಿಕ ಸತ್ಯವಾಗಿದ್ದು, ಅವುಗಳನ್ನು ಅರಿತು ಅದರಂತೆ ನಡೆದಲ್ಲಿ ಪ್ರತಿಯೊಬ್ಬರ ಜೀವನ ಸರ್ವ ಶ್ರೇಷ್ಠವಾಗಲಿದೆ ಎಂದು ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಎಂ.ಪಿ. ಕೇಶವ ಕಾಮತ್ ಹೇಳಿದರು.

ಕುಶಾಲನಗರದ ವಿವೇಕಾನಂದ ಪಿಯು ಕಾಲೇಜಿನಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಹಮ್ಮಿಕೊಂಡಿದ್ದ ದಾವಣಗೆರೆಯ ಆರೋಢ ದಾಸೋಹಿ ಧರ್ಮ ಚಿಂತಾಮಣಿ ಮಹಾಶರಣ ಲಿಂ. ಮಾಗನೂರು ಬಸಪ್ಪ ದತ್ತಿ ‘ಶರಣ ಸಂಸ್ಕೃತಿ’ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಅವರು, ಹನ್ನೆರಡನೇ ಶತಮಾನದಲ್ಲಿ ಜನರೆಡೆಗೆ ತಲುಪದೇ ಇದ್ದ ಸಾಹಿತ್ಯವನ್ನು ಸರಳ ಭಾಷೆಗೆ ಇಳಿಸಿ, ಅಂದು ಜನರಲ್ಲಿದ್ದ ಮೌಡ್ಯವನ್ನು ತೊಳೆಯಲು ಶ್ರಮಿಸಿದ ಬಸವಾದಿ ಶರಣರ ಜೀವನ ಪಥ ಇಂದು ನಮಗೆಲ್ಲರಿಗೂ ದಾರಿ ದೀಪವಾಗಿದೆ ಎಂದರು.

‘ಶರಣ ಸಂಸ್ಕೃತಿ’ ವಿಚಾರದ ಬಗ್ಗೆ ದತ್ತಿ ಉಪನ್ಯಾಸ ನೀಡಿದ ಹೆಬ್ಬಾಲೆ ವಿದ್ಯಾಸಂಸ್ಥೆಯ ಕನ್ನಡ ಪ್ರಾಧ್ಯಾಪಕ ಮೆ.ನಾ. ವೆಂಕಟನಾಯಕ್, ಹನ್ನೆರಡನೇ ಶತಮಾನದಲ್ಲಿ ಮೊದಲ ಬಾರಿಗೆ ಪ್ರಜಾಪ್ರಭುತ್ವದ ತತ್ವಗಳನ್ನು ಮನುಕುಲಕ್ಕೆ ಧಾರೆ ಎರೆದ ಶರಣ ಶ್ರೇಷ್ಟರ ಕೊಡುಗೆ ಅಪಾರವಾದುದು. ಅಂದು ಸಂಸ್ಕೃತ ಭಾಷೆಯಲ್ಲಿದ್ದ ವಚನಗಳನ್ನು ಸರಳೀಕರಿಸಿ ಜನಸಾಮಾನ್ಯರು ಆಡುವ ಭಾಷೆಗೆ ತರ್ಜುಮೆ ಮಾಡಿದ ಬಸವಾದಿ ಶರಣರ ಚಿಂತನೆಗಳನ್ನು ಇಂದಿನ ಮಕ್ಕಳು ತಮ್ಮಲ್ಲಿ ಅಳವಡಿಸಿಕೊಂಡರೆ ಜೀವನ ಪಾವನವಾಗುತ್ತದೆ ಎಂದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಕೊಡಗು ಜಿಲ್ಲಾ ವೀರಶೈವ ಮಹಾಸಭಾದ ಅಧ್ಯಕ್ಷ ಹೆಚ್.ವಿ. ಶಿವಪ್ಪ ಮಾತನಾಡಿ, ವಚನ ಸಾಹಿತ್ಯ ಪ್ರಾಕಾರಗಳು ಕನ್ನಡ ಸಾಹಿತ್ಯಕ್ಕೆ ಬಹು ದೊಡ್ಡ ಭಂಡಾರ ವಾಗಿವೆ. ಜನಹಿತಕ್ಕಾಗಿಯೇ ಜೀವಿಸಿದ ಬಸವಾದಿ ಶರಣರ ಬದುಕು ಮನುಷ್ಯಕುಲಕ್ಕೆ ಜೀವನದ ಮೌಲ್ಯಗಳನ್ನು ಕಲಿಸಿಕೊಡುತ್ತವೆ ಎಂದರು.

ಕುಶಾಲನಗರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೆ.ಎಸ್. ಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ಕುಶಾಲ ನಗರ ಸರ್ಕಾರಿ ಆಸ್ಪತ್ರೆಯ ಸ್ತಿçà ರೋಗ ತಜ್ಞೆ ಡಾ. ಆರ್. ಪ್ರತಿಭಾ, ಕದಳಿ ವೇದಿಕೆ ತಾಲೂಕು ಅಧ್ಯಕ್ಷೆ ಲೇಖನಾ ಧರ್ಮೇಂದ್ರ, ಮಹಾತ್ಮ ಗಾಂಧಿ ಪದವಿ ಕಾಲೇಜು ಪ್ರಾಂಶುಪಾಲೆ ಲಿಖಿತಾ, ವಿವೇಕಾ ನಂದ ಪಿಯು ಕಾಲೇಜು ಪ್ರಾಂಶು ಪಾಲೆ ಕ್ಲಾರಾ ರೇಷ್ಮಾ, ತಾಲೂಕು ಸಾಹಿತ್ಯ ಪರಿಷತ್ತಿನ ಕೋಶಾಧಿಕಾರಿ ಎಸ್. ನಾಗರಾಜು, ಗೌರವ ಕಾರ್ಯದರ್ಶಿ ಕೆ.ವಿ. ಉಮೇಶ್, ನಿರ್ದೇಶಕರಾದ ಎಂ.ಎನ್. ಕಾಳಪ್ಪ, ಸೂದನ ರತ್ನಾವತಿ, ಸುಬ್ರಮಣ್ಯ, ಹೇಮಲತಾ ಇದ್ದರು. ಕಾಲೇಜಿನ ಕನ್ನಡ ಪ್ರಾಧ್ಯಾಪಕ ಚಂದ್ರಶೇಖರ್ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿನಿ ಸಾಹಿತ್ಯ ಸ್ವಾಗತಿಸಿ, ಸ್ಮಿತಾ ವಂದಿಸಿದರು.