ಮಡಿಕೇರಿ, ಜು. ೨೪: ಕೊಡಗು ಜಿಲ್ಲೆಯಾದ್ಯಂತ ಪ್ರಸಕ್ತ ಸುರಿಯುತ್ತಿರುವ ಮಳೆಯಿಂದಾಗಿ ಕಾಫಿ ಬೆಳೆಗಾರರು ದಿನೇ ದಿನೇ ಆತಂಕ ಎದುರಿಸು ವಂತಾಗುತ್ತಿದೆ. ಬಹುತೇಕ ಜಿಲ್ಲೆಯ ಎಲ್ಲೆಡೆ ಕೊಡಗಿನ ಆರ್ಥಿಕತೆಯ ಬೆನ್ನೆಲುಬಾದ ಕಾಫಿ ಫಸಲಿನ ಮೇಲೆ ಈಗಿನ ವಾತಾವರಣ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಕಾಫಿ ಉದುರುವಿಕೆ ದಿನೇ ದಿನೇ ಹೆಚ್ಚಾಗುತ್ತಿರುವುದು ಒಂದೆಡೆಯಾದರೆ ಈಗಾಗಲೇ ಕಾಯಿಕಟ್ಟಿರುವ ಕಾಫಿ ಗಿಡದಲ್ಲೇ ಕೊಳೆತು ನಾಶವಾಗುತ್ತಿರುವುದು ಒಂದೆಡೆಯಾಗಿದೆ.
ಹಲವಾರು ತೋಟಗಳಲ್ಲಿ ಕಾಫಿ ಗಿಡಗಳಲ್ಲಿ ರೆಕ್ಕೆಗಳ ತುಂಬಾ ದಪ್ಪ ದಪ್ಪ ಗೊಂಚಲಿನ ಮೂಲಕ ಕಂಡು ಬರುತ್ತಿದ್ದ ಕಾಫಿ ಇದೀಗ ಬಹುತೇಕ ನೆಲಕಚ್ಚುತ್ತಿದೆ. ಕೊಳೆರೋಗವೂ ದಿನೇ ದಿನೇ ಹೆಚ್ಚುತ್ತಿದ್ದು, ಬೆಳೆಗಾರರು ಭವಿಷ್ಯದ ಬಗ್ಗೆ ಆತಂಕಪಡು ವಂತಾಗಿದೆ.
ಜಿಲ್ಲೆಯ ಹಲವಾರು ಗ್ರಾಮೀಣ ಪ್ರದೇಶಗಳಲ್ಲಿ ಈಗಾಗಲೇ ೧೦೦ ಇಂಚಿಗೂ ಅಧಿಕ ಮಳೆಯಾಗಿದೆ. ದಕ್ಷಿಣ ಕೊಡಗಿನ ಬಿರುನಾಣಿ, ಶ್ರೀಮಂಗಲ, ಹುದಿಕೇರಿ, ಬಿ.ಶೆಟ್ಟಿಗೇರಿ ಗ್ರಾ.ಪಂ. ವ್ಯಾಪ್ತಿಯ ಗ್ರಾಮಗಳು, ಇತ್ತ ನಾಪೋಕ್ಲು, ಕಕ್ಕಬ್ಬೆ, ನೆಲಜಿ, ಮುಕ್ಕೋಡ್ಲು, ಭಾಗಮಂಡಲ ವಿಭಾಗ ಮತ್ತಿತರ ಗ್ರಾಮೀಣ ಪ್ರದೇಶಗಳು, ಸೋಮವಾರಪೇಟೆ ತಾಲೂಕಿನ ಶಾಂತಳ್ಳಿ, ಶನಿವಾರಸಂತೆಯAತಹ ಪ್ರದೇಶಗಳಲ್ಲಿ ಈಗಾಗಲೇ ೧೦೦ ಇಂಚಿನಷ್ಟು ಮಳೆಯಾಗಿದೆ. ವಾರ್ಷಿಕವಾಗಿ ಇತರೆಡೆಗಳಿಗಿಂತ ಕಡಿಮೆ ಮಳೆ ಬೀಳುವ ಪ್ರದೇಶಗಳಾದ ಚೆಂಬೆಬೆಳ್ಳೂರು, ಅಮ್ಮತ್ತ್ತಿ, ಹಾಕತ್ತೂರು, ಮರಗೋಡುವಿನಂತಹ ಪ್ರದೇಶ ಗಳಲ್ಲೂ ಈ ಬಾರಿ ಹೆಚ್ಚು ಮಳೆಯಾಗಿದೆ. ವಾರ್ಷಿಕವಾಗಿ ೭೦-೮೦ ಇಂಚು ಮಾತ್ರ ಮಳೆಯಾಗುವ ಪ್ರದೇಶಗಳಲ್ಲಿ ಈಗಾಗಲೇ ೪೦-೫೦ ಇಂಚಿನಷ್ಟು ಮಳೆ ಬಿದ್ದಿದೆ. ಮಳೆಗಾಲದ ಅವಧಿ ಇನ್ನಷ್ಟು ಬಾಕಿ ಉಳಿದಿದ್ದು, ಈ ಸಂದರ್ಭದಲ್ಲಿ ಮತ್ತೆ ಮಳೆಯಾಗಲಿರುವುದರಿಂದ ಪ್ರಸಕ್ತ ವರ್ಷದ ಕಾಫಿ ಫಸಲಿಗೆ ಭಾರೀ ಧಕ್ಕೆಯಾಗಲಿದೆ. ಕಾಫಿ ಉದುರುವಿಕೆ, ಕೊಳೆರೋಗ ತಡೆಗೆ ಕಾಫಿ ಮಂಡಳಿ ಹಲವು ಸಲಹೆಗಳನ್ನು ನೀಡಿದೆ ಯಾದರೂ, ಈ ಮಾರ್ಗದರ್ಶನಗಳ ಪಾಲನೆಯೂ ಈಗಿನ ವಾತಾವರಣ ದಲ್ಲಿ ಬೆಳೆಗಾರರಿಗೆ ದುಸ್ತರವಾಗುತ್ತಿದೆ. ಇದೀಗ ಕೆಲ ದಿನಗಳಿಂದ ಮಳೆ ಕಡಿಮೆಯಾಗಿದ್ದರೂ, ಸಣ್ಣ ಪ್ರಮಾಣದ ಮಳೆ - ಬಿಸಿಲಿನ ಪರಿಸ್ಥಿತಿಯಿಂದಾಗಿ ಈಗಾಗಲೇ ಕಾಣಿಸಿಕೊಂಡಿರುವ ರೋಗಬಾಧೆ ಇನ್ನಷ್ಟು ಉಲ್ಭಣವಾಗು ತ್ತಿದೆ. ತೇವಾಂಶ ಹೆಚ್ಚಿರುವುದೂ ಸಮಸ್ಯೆಯಾಗುತ್ತಿದೆ. ಈ ಬಗ್ಗೆ ಕಾಫಿ ಮಂಡಳಿ, ಜಿಲ್ಲಾಡಳಿತ, ಸರಕಾರ ಗಮನ ಹರಿಸಿ ಕಾಫಿ ಸಮಸ್ಯೆಯ ಬಗ್ಗೆ ತಕ್ಷಣ ಸಮೀಕ್ಷೆ ನಡೆಸಬೇಕು. ಅತಿವೃಷ್ಟಿಪೀಡಿತ ಪ್ರದೇಶವಾಗಿ ಪರಿಗಣಿಸಿ ಪ್ರಸಕ್ತ ವರ್ಷವೂ ಬೆಳೆ ನಷ್ಟಕ್ಕೆ ಪರಿಹಾರ ಒದಗಿಸಲು ಕ್ರಮಕೈಗೊಳ್ಳುವಂತೆ ಬೆಳೆಗಾರರು ಒತ್ತಾಯಿಸಿದ್ದಾರೆ.