ಸೋಮವಾರಪೇಟೆ, ಜು.೨೩: ಹಚ್ಚಹಸಿರಿನ ಪ್ರಕೃತಿ ಸೌಂದರ್ಯದ ನಡುವೆ ಕೆಸರಿನ ಗದ್ದೆ..,ಅದರ ಮಧ್ಯೆ ವಾಲಿಬಾಲ್, ಥ್ರೋಬಾಲ್, ಹಗ್ಗ ಜಗ್ಗಾಟದ ಸೆಣಸಾಟ...ಪ್ರಾಕೃತಿಕ ಸೌಂದರ್ಯದ ನಡುವೆ ಒಕ್ಕಲಿಗ ಬಾಂಧವರ ಕ್ರೀಡಾ ಕಲರವ ಮಳೆಯನ್ನೂ ನಾಚಿಸಿ ಮೇಳೈಸಿತು.

ಸೋಮವಾರಪೇಟೆ ತಾಲೂಕು ಒಕ್ಕಲಿಗ ಯುವ ವೇದಿಕೆ ವತಿಯಿಂದ ಸಮೀಪದ ತೋಳೂರುಶೆಟ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುಗ್ಗಿಕಟ್ಟೆ ರಸ್ತೆಯಲ್ಲಿರುವ ಕೆ.ಎಂ. ದಿನೇಶ್ ಅವರ ಗದ್ದೆಯಲ್ಲಿ ಆಯೋಜಿಸಿದ್ದ ೭ನೇ ವರ್ಷದ ಕೆಸರುಗದ್ದೆ ಕ್ರೀಡಾಕೂಟ ಸಾವಿರಾರು ಒಕ್ಕಲಿಗ ಬಾಂಧವರ ಸಮ್ಮಿಲನದೊಂದಿಗೆ ಅದ್ದೂರಿಯಾಗಿ ಸಂಭ್ರಮದಿAದ ನೆರೆವೇರಿತು.

ಸದಾಕಾಲ ಕಾಫಿ ತೋಟ, ಏಲಕ್ಕಿ ಪ್ರದೇಶ, ಗದ್ದೆ ಕೆಲಸದಲ್ಲಿಯೇ ಮಗ್ನರಾಗುವ ಪುಷ್ಪಗಿರಿ ಬೆಟ್ಟಶ್ರೇಣಿ ಪ್ರದೇಶ, ಮಲೆನಾಡು ವ್ಯಾಪ್ತಿಯ ಗೌಡ ಸಮುದಾಯ ಬಾಂಧವರ ಕ್ರೀಡಾ ಕಲರವಕ್ಕೆ ಅರೆ ಮಲೆನಾಡು ವ್ಯಾಪ್ತಿಯ ಒಕ್ಕಲಿಗ ಬಾಂಧವರು ತಮ್ಮ ಹಾಜರಿಯನ್ನು ಹಾಕುವ ಮೂಲಕ ತೋಳೂರುಶೆಟ್ಟಳ್ಳಿಯ ಕೆಸರುಗದ್ದೆ ಕ್ರೀಡಾಕೂಟಕ್ಕೆ ಹೆಚ್ಚಿನ ಮೆರುಗು ಒದಗಿಸಿದ್ದರು.

ಕ್ರೀಡಾಕೂಟವನ್ನು ರಾಜ್ಯ ಒಕ್ಕಲಿಗರ ಸಂಘದ ಕಾರ್ಯಾಧ್ಯಕ್ಷ ಹಾಗೂ ದಾನಿಗಳಾದ ಹರಪಳ್ಳಿ ರವೀಂದ್ರ, ಉದ್ಯಮಿಗಳಾದ ಅರುಣ್ ಕೊತ್ನಳ್ಳಿ, ಗಿರೀಶ್ ಮಲ್ಲಪ್ಪ, ಮಂಜೂರು ತಮ್ಮಣ್ಣಿ ಅವರುಗಳು ಉದ್ಘಾಟಿಸಿದರು.

ಈ ಸಂದರ್ಭ ಮಾತನಾಡಿದ ಒಕ್ಕಲಿಗರ ಸಂಘದ ಕಾರ್ಯಾಧ್ಯಕ್ಷ ಹರಪಳ್ಳಿ ರವೀಂದ್ರ ಅವರು, ಕೃಷಿಯನ್ನೇ ಅವಲಂಬಿಸಿ ಜೀವನ ನಡೆಸುತ್ತಿರುವ ಒಕ್ಕಲಿಗ ಸಮುದಾಯ ದವರು ಸಾಮಾಜಿಕ, ಆರ್ಥಿಕ, ರಾಜಕೀಯ ಸೇರಿದಂತೆ ಕ್ರೀಡಾ ಕ್ಷೇತ್ರದಲ್ಲಿ ಛಾಪು ಮೂಡಿಸಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಒಕ್ಕಲಿಗರ ಯುವ ವೇದಿಕೆ ಅಧ್ಯಕ್ಷ ಬಿ.ಜೆ. ದೀಪಕ್ ಅವರು, ಸಮುದಾಯ ಬಾಂಧವರಲ್ಲಿ ಪರಸ್ಪರ ಬಾಂಧವ್ಯ ವೃದ್ದಿಸುವ ನಿಟ್ಟಿನಲ್ಲಿ ಕಳೆದ ೭ ವರ್ಷಗಳಿಂದ ಕೆಸರುಗದ್ದೆ ಕ್ರೀಡಾಕೂಟವನ್ನು ಆಯೋಜಿಸಿ ಕೊಂಡು ಬರಲಾಗುತ್ತಿದೆ ಎಂದರು.

ಕ್ರೀಡಾಕೂಟವನ್ನು ಗೌಡ ಸಮುದಾಯದ ಸಾಂಪ್ರದಾಯಿಕ ಆಚರಣೆಯಂತೆ ಕೋವಿಯಿಂದ ಗಾಳಿಯಲ್ಲಿ ಗುಂಡು ಹಾರಿಸುವ ಮೂಲಕ ಉದ್ಘಾಟಿಸಲಾಯಿತು. ಕಾರ್ಯಕ್ರಮದಲ್ಲಿ ಕೊಡಗು ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಎಸ್.ಎಂ. ಚಂಗಪ್ಪ, ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಎ.ಆರ್. ಮುತ್ತಣ್ಣ, ಪ್ರಗತಿಪರ ಮಹಿಳಾ ವೇದಿಕೆ ಅಧ್ಯಕ್ಷೆ ಲೋಕೇಶ್ವರಿ ಗೋಪಾಲ್, ಅಖಿಲ ಕರ್ನಾಟಕ ಒಕ್ಕಲಿಗರ ಒಕ್ಕೂಟದ ಜಿಲ್ಲಾಧ್ಯಕ್ಷ ಪಿ.ಕೆ. ರವಿ, ತೋಳೂರು ಶೆಟ್ಟಳ್ಳಿ ಗ್ರಾ.ಪಂ. ಅಧ್ಯಕ್ಷ ರುದ್ರಪ್ಪ, ಸದಸ್ಯ ನವೀನ್, ಮೋಹಿತ್, ದಿವ್ಯ, ಗ್ರಾಮಾಧ್ಯಕ್ಷ ರಾಜಗೋಪಾಲ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಪುರುಷರಿಗೆ ಹಗ್ಗಜಗ್ಗಾಟ, ವಾಲಿಬಾಲ್, ಗದ್ದೆ ಓಟ, ಮಹಿಳೆ ಯರಿಗೆ ಥ್ರೋಬಾಲ್, ಗದ್ದೆ ಓಟ, ಹಗ್ಗಜಗ್ಗಾಟ, ದಂಪತಿಗಳ ಓಟ ಸ್ಪರ್ಧೆಗಳು ನಡೆದವು. ಕಾರ್ಯಕ್ರಮ ದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಒಕ್ಕಲಿಗ ಸಮುದಾಯ ಬಾಂಧವರು ಭಾಗವಹಿಸಿದ್ದರು.