ಸಿದ್ದಾಪುರ, ಜು. ೨೩: ನೆಲ್ಲಿಹುದಿಕೇರಿಯ ಶ್ರೀ ಮುತ್ತಪ್ಪ ಯುವಕಲಾ ಸಂಘದ ವತಿಯಿಂದ ಕಾರ್ಗಿಲ್ ವಿಜಯೋತ್ಸವದ ಪ್ರಯುಕ್ತ ತಾ. ೨೬ ರಂದು ನೆಲ್ಲಿಹುದಿಕೇರಿಯ ಸರಕಾರಿ ಪದವಿ ಪೂರ್ವ ಕಾಲೇಜು ಸಭಾಂಗಣದಲ್ಲಿ ಯೋಧ ನಮನ ಕಾರ್ಯಕ್ರಮ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಶರಣ್ ಪ್ರಕಾಶ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಾರ್ಯಕ್ರಮವು ಅಪರಾಹ್ನ ೧ ಗಂಟೆಗೆ ಪ್ರಾರಂಭಗೊಳ್ಳಲಿದ್ದು, ಕಾರ್ಯಕ್ರಮವನ್ನು ನಿವೃತ್ತ ಯೋಧರ ಸಂಘದ ಜಿಲ್ಲಾಧ್ಯಕ್ಷ ಮೇ. ಸೋಮಣ್ಣ ಉದ್ಘಾಟಿಸಲಿದ್ದಾರೆ. ಕಾರ್ಗಿಲ್ ವಿಜಯೋತ್ಸವದ ಪ್ರಯುಕ್ತ ನೆಲ್ಲಿಹುದಿಕೇರಿ ಗ್ರಾಮದ ನಿವಾಸಿಗಳಾಗಿರುವ ದೇಶ ಸೇವೆಯಲ್ಲಿ ತಮ್ಮನ್ನು ತೊಡಗಿಸಿದ್ದ ನಿವೃತ್ತ ಯೋಧರು ಹಾಗೂ ಪ್ರಸ್ತುತ ಸೈನ್ಯದಲ್ಲಿ ಸೇವೆ ಸಲ್ಲಿಸುತ್ತಿರುವ ಸೈನಿಕರು ಸೇರಿ ಒಟ್ಟು ೨೯ ಮಂದಿ ವೀರ ಯೋಧರನ್ನು ಗೌರವಿಸಿ ಸನ್ಮಾನಿಸಲಾಗುವುದು ಎಂದು ಶರಣ್ ಪ್ರಕಾಶ್ ತಿಳಿಸಿದ್ದಾರೆ.