ಪೊನ್ನಂಪೇಟೆ, ಜು.೨೩: ಗ್ರಾಹಕರ ಸೋಗಿನಲ್ಲಿ ಬಂದ ಕಳ್ಳರು ಹಾಡಹಗಲೇ ಪೊನ್ನಂಪೇಟೆಯ ಮುಖ್ಯ ರಸ್ತೆಯಲ್ಲಿರುವ ಕೌಶಲ್ಯ ಟ್ರೇಡರ್ಸ್ ಸಿಮೆಂಟ್ ಅಂಗಡಿಯಿAದ ೧೦ ಸಾವಿರ ರೂಪಾಯಿ ಹಣ ಕಳ್ಳತನ ಮಾಡಿರುವ ಘಟನೆ ನಡೆದಿದೆ.

ತಾ.೨೨ ರಂದು ಮಧ್ಯಾಹ್ನ ೨.೪೫ ರ ಸಮಯದಲ್ಲಿ ಸಿಮೆಂಟ್ ಅಂಗಡಿಗೆ ಸಿಮೆಂಟ್ ಖರೀದಿಸುವ ನೆಪದಲ್ಲಿ ಮೂವರು ಬಂದಿದ್ದಾರೆ. ಈ ಸಂದರ್ಭ ಅಂಗಡಿಯಲ್ಲಿದ್ದ ಸಿಬ್ಬಂದಿ ತನ್ನ ಪತಿಯನ್ನು ಅಂಗಡಿಯನ್ನು ನೋಡಿಕೊಳ್ಳುವಂತೆ ಹೇಳಿ ಬ್ಯಾಂಕಿಗೆ ತೆರಳಿದ್ದರು. ಅದೇ ಸಂದರ್ಭ ಗ್ರಾಹಕರ ಸೋಗಿನಲ್ಲಿ ಸಿಮೆಂಟ್ ಖರೀದಿಗೆ ಬಂದ ಮೂವರು ಕಳ್ಳರಲ್ಲಿ ಒಬ್ಬ ನಮಗೆ ೩೦ ಚೀಲ ಸಿಮೆಂಟ್ ಬೇಕಾಗಿದೆ. ಸಿಮೆಂಟ್ ಚೀಲ ತೋರಿಸಿ ಬನ್ನಿ ಎಂದು ವೆಂಕಟೇಶ್ ಅವರನ್ನು ಸಿಮೆಂಟ್ ಇರಿಸಿದ್ದ ಗೋಡೌನ್ ಒಳಗೆ ಕರೆದುಕೊಂಡು ಹೋಗಿದ್ದಾನೆ. ಒಬ್ಬನನ್ನು ಹೊರಗೆ ನೋಡಿಕೊಳ್ಳಲು ತಿಳಿಸಿದ ಮತ್ತೊಬ್ಬ ವ್ಯಕ್ತಿ ಡ್ರಾಯರ್ ಅನ್ನು ಬೀಗದ ಕೀ ರೀತಿಯ ವಸ್ತುವಿನಿಂದ ತೆರೆದು ಅದರೊಳಗೆ ಇದ್ದ ೧೦ ಸಾವಿರ ರೂಪಾಯಿಯೊಂದಿಗೆ ಸ್ವಲ್ಪ ಚಿಲ್ಲರೆ ಹಣವನ್ನು ಎಗರಿಸಿ, ಸಿಮೆಂಟ್ ಖರೀದಿಗೆ ಮತ್ತೆ ಬರುತ್ತೇವೆ ಎಂದು ತಿಳಿಸಿ ಮೂವರು ಅಲ್ಲಿಂದ ಕಾಲ್ಕಿತ್ತಿದ್ದಾರೆ. ಸುನಿತಾ ಬ್ಯಾಂಕ್‌ನಿAದ ಬಂದು ನೋಡಿದಾಗ ಹಣ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ಪೊನ್ನಂಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಠಾಣಾಧಿಕಾರಿ ಡಿ. ಕುಮಾರ್ ನೇತೃತ್ವದ ಪೊಲೀಸರ ತಂಡ ಕಳ್ಳತನ ನಡೆದ ಅಂಗಡಿಯ ಸಮೀಪದಲ್ಲಿರುವ ಸಿಸಿ ಕ್ಯಾಮರಾ ಪರಿಶೀಲನೆ ನಡೆಸುತ್ತಿದ್ದು, ಮೂವರು ವ್ಯಕ್ತಿಗಳು ಸಿಮೆಂಟ್ ಅಂಗಡಿಗೆ ಬರುವ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಪೊಲೀಸರು ಆರೋಪಿಗಳ ಪತ್ತೆಗಾಗಿ ತನಿಖೆ ಮುಂದುವರಿಸಿದ್ದಾರೆ.

ಇತ್ತೀಚಿಗೆ ಅಂಗಡಿ ಮಾಲೀಕರ ಕಣ್ಣು ತಪ್ಪಿಸಿ ಹಾಡಹಗಲೇ ಕಳ್ಳತನ ಮಾಡುವ ಪ್ರಕರಣ ಹೆಚ್ಚಾಗುತ್ತಿದ್ದು, ಪೊನ್ನಂಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯ ಎಲ್ಲಾ ಅಂಗಡಿ ಮಾಲೀಕರು ಅಂಗಡಿಯಲ್ಲಿ ಸಿಸಿ ಕ್ಯಾಮರಾವನ್ನು ಅಳವಡಿಸಿಕೊಳ್ಳುವಂತೆ ಠಾಣಾಧಿಕಾರಿ ಮನವಿ ಮಾಡಿಕೊಂಡಿದ್ದಾರೆ.

-ಚನ್ನನಾಯಕ