ಬೆಂಗಳೂರು, ಜು. ೨೩: ಕಸ್ತೂರಿ ರಂಗನ್ ವರದಿ ಆಧಾರದ ಮೇಲೆ ಪಶ್ಚಿಮ ಘಟ್ಟ ಪ್ರದೇಶವನ್ನು ಪರಿಸರ ಸೂಕ್ಷö್ಮ ವಲಯವೆಂದು ಘೋಷಿಸುವ ಕೇಂದ್ರ ಸರ್ಕಾರದ ಅಧಿಸೂಚನೆಯನ್ನು ರಾಜ್ಯ ಸಚಿವ ಸಂಪುಟ ತೀವ್ರವಾಗಿ ವಿರೋಧಿಸಿದೆ.

ಸಚಿವ ಸಂಪುಟ ಸಭೆ ನಂತರ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧುಸ್ವಾಮಿ, ಕಸ್ತೂರಿ ರಂಗನ್ ವರದಿ ಜಾರಿಯಿಂದ ಈ ಭಾಗದ ಜನರಿಗೆ ಅನ್ಯಾಯವಾಗಲಿದೆ. ಈ ವಿಚಾರದಲ್ಲಿ ಹೊಂದಾಣಿಕೆ ಸಾಧ್ಯವಿಲ್ಲ ಎಂದು ಹೇಳಿದ್ದೆವು. ನಮ್ಮ ನಿಲುವನ್ನು ಈಗಾಗಲೇ ಎರಡು ಬಾರಿ ಹೇಳಿದ್ದೇವೆ. ಸಂಪುಟದ ಅನುಮೋದನೆಯಿಂದ ಮೂರನೇ ಬಾರಿಗೆ ಹೀಗೆ ಹೇಳುತ್ತಿರುವುದಾಗಿ ಅವರು ತಿಳಿಸಿದರು.

ರಾಜ್ಯ ಸರ್ಕಾರ ವರದಿ ಒಪ್ಪಿಕೊಂಡು ಪಶ್ಚಿಮ ಘಟ್ಟಗಳ ಪರಿಸರ ಸೂಕ್ಷö್ಮ ವಲಯಗಳಿಂದ ಜನರನ್ನು ಸ್ಥಳಾಂತರಿಸಲು ಸಾಧ್ಯವಿಲ್ಲ. ನಾವು ಕೇಂದ್ರಕ್ಕೆ ಪತ್ರ ಬರೆಯುತ್ತೇವೆ ಮತ್ತು ಚರ್ಚೆಯ ನಂತರ ಮನವಿಯೊಂದನ್ನು ನೀಡುತ್ತೇವೆ ಎಂದು ಅವರು ಹೇಳಿದರು. ಮುಂದಿನ ದಿನಗಳಲ್ಲಿ ರಾಜ್ಯದ ನಿರ್ಧಾರವನ್ನು ತಿಳಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ರಾಜ್ಯದಿಂದ ನಿಯೋಗ ದೆಹಲಿಗೆ ಹೋಗಲಿದೆ ಎಂದು ಹೇಳಿದರು.

ವರದಿ ಅನುಷ್ಠಾನಕ್ಕೆ ಮೊದಲಿನಿಂದಲೂ ರಾಜ್ಯ ವಿರೋಧ ವ್ಯಕ್ತಪಡಿಸುತ್ತಿದೆ. ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯವು ತಾ. ೬ ರಂದು ಐದನೇ ಅಧಿಸೂಚನೆಯನ್ನು ಹೊರಡಿಸಿತು, ಅದು ಈ ಹಿಂದೆ ಹೊರಡಿಸಿದ ಇತರ ನಾಲ್ಕು ಪ್ರಕಟಣೆಗಳಿಗೆ ಹೋಲುತ್ತದೆ. ವರದಿ ಜಾರಿಯಾದರೆ ೧,೫೫೩ ಗ್ರಾಮಗಳ ಜನರ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ. ಸೂಕ್ತ ಸಮೀಕ್ಷೆ ನಡೆಸದೆ ವರದಿ ಸಿದ್ಧಪಡಿಸಲಾಗಿದ್ದು, ರಾಜ್ಯದಿಂದ ವ್ಯಕ್ತವಾದ ೧,೦೦೦ ಕ್ಕೂ ಹೆಚ್ಚು ಆಕ್ಷೇಪಣೆಗಳನ್ನು ಪರಿಗಣಿಸಿಲ್ಲ ಎಂದು ಮಾಹಿತಿ ನೀಡಿದರು.