ಮಡಿಕೇರಿ, ಜು. ೨೩: ಆಗಿಂದಾಗ್ಗೆ ಬಿಡುವು ನೀಡುತ್ತಾ ಸುರಿಯುವ ಮಳೆ..., ಮಳೆಯ ನಡುವೆಯೆ ಗದ್ದೆಯಲ್ಲಿ ಕೆಸರಿನ ನಡುವೆ ಕ್ರೀಡಾಪಟುಗಳ ಪೈಪೋಟಿ... ಎದ್ದು - ಬಿದ್ದು ಕೆಸರಿನಲ್ಲಿ ಮುಳುಗೆದ್ದರೂ ಬತ್ತದ ಉತ್ಸಾಹ..., ಕ್ರೀಡಾಭಿಮಾನಿಗಳಿಂದ ಚಪ್ಪಾಳೆ - ಶಿಳ್ಳೆಯ ಪ್ರೋತ್ಸಾಹ..., ಇದು ಕಗ್ಗೋಡ್ಲುವಿನಲ್ಲಿ ಜಿಲ್ಲಾ ಪಂಚಾಯತ್, ಜಿಲ್ಲಾಡಳಿತ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ನೆಹರು ಯುವ ಕೇಂದ್ರ ಮಡಿಕೇರಿ, ಜಿಲ್ಲಾ ಹಾಗೂ ತಾಲೂಕು ಯುವ ಒಕ್ಕೂಟಗಳು, ಯೂತ್ ಹಾಸ್ಟೆಲ್ ಅಸೋಸಿಯೇಷನ್ ಆಫ್ ಇಂಡಿಯಾ ಹಾಗೂ ಕಗ್ಗೋಡ್ಲುವಿನ ಕಾವೇರಿ ಯುವಕ ಸಂಘದ ಸಂಯುಕ್ತಾಶ್ರಯದಲ್ಲಿ ಕಗ್ಗೋಡ್ಲುವಿನಲ್ಲಿ ಆಯೋಜಿಸಲಾಗಿದ್ದ ೩೦ನೇ ವರ್ಷದ ರಾಜ್ಯಮಟ್ಟದ ಕೆಸರುಗದ್ದೆ ಕ್ರೀಡಾಕೂಟದಲ್ಲಿ ಕಂಡುಬAದ ಚಿತ್ರಣ. ಪ್ರಾಕೃತಿಕ ವಿಕೋಪ ಹಾಗೂ ಕೊರೊನಾದಿಂದಾಗಿ ಕಳೆದ ೩ ವರ್ಷಗಳಿಂದ ಸ್ಥಗಿತಗೊಂಡಿದ್ದ ಈ ಕ್ರೀಡಾಕೂಟ ಈ ಬಾರಿ ನಡೆಯಿತು. ಸಿ.ಡಿ. ಬೋಪಯ್ಯ ಅವರ ಗದ್ದೆಯಲ್ಲಿ ನಡೆಯುತ್ತಿದ್ದ ಕ್ರೀಡಾಕೂಟವನ್ನು ಈ ಬಾರಿ ಸಿ.ಡಿ. ಬೋಪಯ್ಯ ಅವರ ನಿಧನದ ಹಿನ್ನೆಲೆಯಲ್ಲಿ ಸೂತಕದ ಕಾರಣದಿಂದಾಗಿ ಪೊಡನೋಳಂಡ ಬೋಪಣ್ಣ ಕುಶಾಲಪ್ಪ ಅವರಿಗೆ ಸೇರಿದ ಗದ್ದೆಯಲ್ಲಿ ನಡೆಸಲಾಯಿತು. ಸಮಾರಂಭದಲ್ಲಿ ಸಿ.ಡಿ. ಬೋಪಯ್ಯ ಅವರ ನಿಧನಕ್ಕೆ ಮೌನಾಚರಣೆ ಮೂಲಕ ಸಂತಾಪ ಸೂಚಿಸಲಾಯಿತು.ಶಾಸಕ ಅಪ್ಪಚ್ಚುರಂಜನ್ ಅವರು ವಾಲಿಬಾಲ್ ಸರ್ವಿಸ್ ಮಾಡುವ ಮೂಲಕ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಕೆಸರುಗದ್ದೆ ಕ್ರೀಡಾಕೂಟದಂತಹ ಸಾಂಪ್ರದಾಯಿಕ ಆಚರಣೆಗಳನ್ನು ಉಳಿಸಿ ಬೆಳೆಸುವಂತಾಗಬೇಕೆAದು ಹೇಳಿದರು. ಥ್ರೋಬಾಲ್ ಪಂದ್ಯಾಟಕ್ಕೆ ಕಾಂಗ್ರೆಸ್ ಕಾನೂನು ಘಟಕದ ಅಧ್ಯಕ್ಷ ಎ.ಎಸ್. ಪೊನ್ನಣ್ಣ, ಯುವ ಮುಖಂಡ ಡಾ. ಮಂಥರ್ ಗೌಡ ಚಾಲನೆ ನೀಡಿದರು. ಸಾರ್ವಜನಿಕ ಪುರುಷ ಮತ್ತು ಮಹಿಳೆಯರಿಗೆ ಮುಕ್ತ ಓಟದ ಸ್ಪರ್ಧೆ, ಹಗ್ಗಜಗ್ಗಾಟ, ವಾಲಿಬಾಲ್, ಥ್ರೋಬಾಲ್ ಪಂದ್ಯಾವಳಿಗಳು ನಡೆದವು. ಶಾಲಾ - ಕಾಲೇಜು ಮಕ್ಕಳಿಗೂ ಓಟದ ಸ್ಪರ್ಧೆ ನಡೆಯಿತು. ಜಿಲ್ಲೆಯ ವಿವಿಧೆಡೆ ಹಾಗೂ ಹೊರಭಾಗಗಳಿಂದಲೂ ಕ್ರೀಡಾಪಟುಗಳು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು. ಕೆಸರಿನ ನಡುವೆ ತೀವ್ರ ಪೈಪೋಟಿಯೊಂದಿಗೆ ನಡೆದ ಹಗ್ಗಜಗ್ಗಾಟ, ವಾಲಿಬಾಲ್, ಓಟದ ಸ್ಪರ್ಧೆ ಕ್ರೀಡಾಭಿಮಾನಿಗಳ ಮನರಂಜಿಸಿತು. ಉದ್ಘಾಟನಾ ಸಮಾರಂಭದಲ್ಲಿ ಜಿಲ್ಲಾ ಯುವ ಒಕ್ಕೂಟದ ಅಧ್ಯಕ್ಷ ಸುಕುಮಾರ್, ಗ್ರಾ.ಪಂ. ಸದಸ್ಯ ಪೊನ್ನಚ್ಚನ ಲೋಕೇಶ್, ಕಾವೇರಿ ಯುವಕ ಸಂಘದ ಉಪಾಧ್ಯಕ್ಷ ಚಿದಾನಂದ, ಮಡಿಕೇರಿ ತಾಲೂಕು ಯುವ ಒಕ್ಕೂಟದ ಅಧ್ಯಕ್ಷ ಬಾಳಾಡಿ ದಿಲೀಪ್ ಮತ್ತಿತರರು ಉಪಸ್ಥಿತರಿದ್ದರು. ಇಂದುಮತಿ ಹಾಗೂ ನೇತ್ರಾವತಿ ಪ್ರಾರ್ಥಿಸಿ, ಮಡಿಕೇರಿ ತಾಲೂಕು ಯುವ ಒಕ್ಕೂಟ ಮಾಜಿ ಅಧ್ಯಕ್ಷ ಕೂಡಂಡ ಸಾಬ ಸುಬ್ರಮಣಿ ನಿರೂಪಿಸಿ, ವಂದಿಸಿದರು.