ಸೋಮವಾರಪೇಟೆ, ಜು. ೨೨: ಸಂಸ್ಕಾರಯುತ ಶಿಕ್ಷಣವೇ ದೇಶದ ಶಕ್ತಿಗೆ ಅಡಿಗಲ್ಲಾಗಿದ್ದು, ಈ ನಿಟ್ಟಿನಲ್ಲಿ ಶಿಕ್ಷಕರು ತಮ್ಮ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಬೇಕು. ತಮ್ಮ ಮಕ್ಕಳ ಶೈಕ್ಷಣಿಕ ಪ್ರಗತಿಯ ಬಗ್ಗೆ ಪೋಷಕರು ಹೆಚ್ಚಿನ ಕಾಳಜಿ ವಹಿಸಬೇಕೆಂದು ಒಕ್ಕಲಿಗರ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಹರಪಳ್ಳಿ ರವೀಂದ್ರ ಅಭಿಪ್ರಾಯಿಸಿದರು.

ತಾಲೂಕಿನ ಕೊಡ್ಲಿಪೇಟೆ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಎಲ್‌ಕೆಜಿಯಿಂದ ೮ನೇ ತರಗತಿವರೆಗಿನ ೨೨೦ ವಿದ್ಯಾರ್ಥಿಗಳಿಗೆ ಉಚಿತವಾಗಿ ನೋಟ್ ಪುಸ್ತಕಗಳನ್ನು ವಿತರಿಸಿ ಅವರು ಮಾತನಾಡಿದರು.

ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಇಳಿಮುಖವಾಗುತ್ತಿದೆ. ಇದಕ್ಕೆ ಪ್ರಮುಖ ಕಾರಣ ಆಂಗ್ಲ ಮಾಧ್ಯಮವಾಗಿದೆ. ತಾಂತ್ರಿಕ ಯುಗದಲ್ಲಿ ಇಂಗ್ಲೀಷ್ ಭಾಷೆಯ ಜ್ಞಾನ ಅನಿವಾರ್ಯವಾಗಿದೆ. ಈ ನಿಟ್ಟಿನಲ್ಲಿ ಸರ್ಕಾರವೂ ಆಂಗ್ಲ ಮಾಧ್ಯಮ ಶಿಕ್ಷಣಕ್ಕೆ ಒತ್ತು ನೀಡುತ್ತಿದೆ. ಬಡ ಪೋಷಕರಿಗೆ ತಮ್ಮ ಮಕ್ಕಳ ಶಿಕ್ಷಣ ಹೊರೆಯಾಗಬಾರದು ಎಂಬ ಉದ್ದೇಶದಿಂದ ಕಳೆದ ೨೨ ವರ್ಷಗಳಿಂದ ನಿರಂತರವಾಗಿ ಪುಸ್ತಕಗಳನ್ನು ವಿತರಿಸುತ್ತಾ ಬರಲಾಗುತ್ತಿದೆ ಎಂದರು.

ಶಿಕ್ಷಣವೇ ದೇಶದ ಶಕ್ತಿಯಾಗಿದ್ದು, ಯುವ ಜನಾಂಗ ದೇಶದ ಆಸ್ತಿಯಾಗಿದೆ. ಯಾವೊಬ್ಬ ಮಗುವೂ ಸಹ ಶಿಕ್ಷಣದಿಂದ ವಂಚಿತವಾಗದAತೆ ನೋಡಿಕೊಳ್ಳಬೇಕು. ಒಕ್ಕಲಿಗರ ಸಂಘದಿAದ ನಡೆಯುತ್ತಿರುವ ಶಾಲಾ ಕಾಲೇಜು, ವಿದ್ಯಾರ್ಥಿ ವಸತಿ ನಿಲಯದಲ್ಲಿ ಕೊಡಗಿನ ವಿದ್ಯಾರ್ಥಿಗಳಿಗೆ ಶೇ. ೧೦೦ ರಷ್ಟು ಆದ್ಯತೆ ನೀಡಲಾಗುತ್ತಿದೆ ಎಂದು ಹರಪಳ್ಳಿ ರವೀಂದ್ರ ತಿಳಿಸಿದರು.

ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಕೊಡ್ಲಿಪೇಟೆ ಗ್ರಾ.ಪಂ. ಮಾಜಿ ಅಧ್ಯಕ್ಷ ಚಂದ್ರಶೇಖರ್, ಅಕ್ಷರ ದಾಸೋಹ ಇಲಾಖೆಯ ನೋಡಲ್ ಅಧಿಕಾರಿ ಸಿದ್ದೇಶ್ ಮಾತನಾಡಿದರು. ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಮಂಜುನಾಥ್, ಕಾರ್ಯದರ್ಶಿ ಕವಿತ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ಮಮತ, ಮುಖ್ಯೋಪಾಧ್ಯಾಯ ಗಣೇಶ್, ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ರವೀಶ್, ಪ್ರಮುಖರಾದ ವಸಂತ್, ಗೌರಮ್ಮ, ಕೆಂಚೇಶ್ವರ್, ಭಗವಾನ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಇದೇ ಸಂದರ್ಭ ಶಾಲೆಗೆ ನಲಿಕಲಿ ಪೀಠೋಪಕರಣ ಹಾಗೂ ಶುದ್ಧ ಕುಡಿಯುವ ನೀರಿನ ಫಿಲ್ಟರ್‌ಗಳನ್ನು ಒದಗಿಸುವಂತೆ ಶಾಲಾಡಳಿತ ಮಂಡಳಿ ಮೂಲಕ ಹರಪಳ್ಳಿ ರವೀಂದ್ರ ಅವರಿಗೆ ಮನವಿ ಸಲ್ಲಿಸಲಾಯಿತು.