ಕೂಡಿಗೆ, ಜು. ೨೨: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಹಿರಿಯ ಸರಕಾರಿ ಪ್ರಾಥಮಿಕ ಶಾಲೆ ಹಾಗೂ ಕೂಡ್ಲೂರು ಶಾಲೆ ಸೇರಿದಂತೆ ಅಂಗನವಾಡಿ ಕೇಂದ್ರಗಳಿಗೆ ಲೋಕಾಯುಕ್ತ ಅಧಿಕಾರಿಗಳು ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಕೂಡಿಗೆ, ಕೂಡುಮಂಗಳೂರು ಸರಕಾರಿ ಪ್ರೌಢಶಾಲೆ ಹಾಗೂ ಗುಮ್ಮನಕೊಲ್ಲಿ ಮತ್ತು ಮುಳ್ಳುಸೊಗೆ ಸರ್ಕಾರಿ ಶಾಲೆಗಳಿಗೆ ಹಾಗೂ ಅಂಗನವಾಡಿಗಳಿಗೆ ಲೋಕಾಯುಕ್ತ ಅಧಿಕಾರಿ ಲೋಕೇಶ್ ಅವರು ದಿಢೀರ್ ಭೇಟಿ ನೀಡಿ ಅಲ್ಲಿನ ಕುಂದುಕೊರತೆ ಆಲಿಸಿದರು. ಶಾಲೆಯ ಸುತ್ತಲೂ ಹಾಗೂ ಒಳ ಆವರಣ ಸ್ವಚ್ಛತೆ ಮತ್ತು ಮೂಲಭೂತ ಸೌಲಭ್ಯಗಳ ಬಗ್ಗೆ ಪರಿಶೀಲನೆ ನಡೆಸಿದರು. ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕೆ ಹೆಚ್ಚು ಒತ್ತು ನೀಡುವಂತೆ ಲೋಕೇಶ್ ತಿಳಿಸಿದರು. ಕೂಡುಮಂಗಳೂರು, ಮುಳ್ಳುಸೋಗೆ, ಗುಮ್ಮನಕೊಲ್ಲಿ ವ್ಯಾಪ್ತಿಯ ಸರ್ಕಾರಿ ಶಾಲೆ, ಅಂಗನವಾಡಿಗಳಿಗೆ ಭೇಟಿ ನೀಡಿದ ಸಂದರ್ಭ ಮಧ್ಯಾಹ್ನದ ಬಿಸಿಯೂಟದ ಗುಣಮಟ್ಟ ಪರಿಶೀಲಿಸಿದರು.
ಈ ಸಂದರ್ಭದಲ್ಲಿ ಶಶಿಕುಮಾರ್ ಹಾಗೂ ಶಾಲಾ ಮುಖ್ಯ ಶಿಕ್ಷಕರು ಹಾಗೂ ಸಹ ಶಿಕ್ಷಕಿಯರು ಹಾಜರಿದ್ದರು.