ಕಣಿವೆ, ಜು. ೨೨: ಕಳೆದ ಅನೇಕ ವರ್ಷಗಳಿಂದ ತಮಗಾಗುತ್ತಿರುವ ವೇತನ ತಾರತಮ್ಯ ಹಾಗೂ ಮತ್ತಿತರೇ ಬೇಡಿಕೆಗಳಿಗೆ ಆಗ್ರಹಿಸಿ ಮೈಸೂರು ದಸರಾದ ಜಂಬೂಸವಾರಿ ಬಹಿಷ್ಕರಿಸಲು ಚಿಂತನೆ ನಡೆಸಿರುವ ಆನೆಗಳ ಮಾವುತರು ಹಾಗೂ ಕಾವಾಡಿಗಳು ತಮ್ಮ ಹೋರಾಟವನ್ನು ತೀವ್ರಗೊಳಿಸುವ ಸಂಬAಧ ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳನ್ನು ಬುಧವಾರ ಮಡಿಕೇರಿಯಲ್ಲಿ ಭೇಟಿ ಮಾಡಿ ಮನವಿ ಮಾಡಿದರು.
ಆನೆ ಮಾವುತರ ಮನವಿಗೆ ಸ್ಪಂದಿಸಿರುವ ಪೊಲೀಸ್ ವರಿಷ್ಠಾಧಿಕಾರಿಗಳು, ಕಾಡಾನೆಗಳನ್ನು ಸೆರೆ ಹಿಡಿದು ತಂದು ಪಳಗಿಸಿ ತಮ್ಮದೇ ಆದ ಸಂಸ್ಕಾರದ ಭಾಷೆಯಲ್ಲಿ ಹೇಳುವ ಮೂಲಕ ಪ್ರಾಣಿಯನ್ನು ಲಾಲನೆ - ಪಾಲನೆ ಮಾಡುವ ಮಾವುತರು ಹಾಗೂ ಕಾವಾಡಿಗಳ ಸೇವೆ ಅನನ್ಯವಾದುದು.
ಇಂತಹ ಸಮಾಜದ ಕೆಳಸ್ತರದ ಮಂದಿಯ ಹೋರಾಟಕ್ಕೆ ಪೊಲೀಸ್ ಇಲಾಖೆ ಸೂಕ್ತ ರಕ್ಷಣೆ ನೀಡಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಹಾಗೆಯೇ ಜಿಲ್ಲಾಧಿಕಾರಿಗಳ ಕಾರ್ಯಾಲಯಕ್ಕೂ ತೆರಳಿ ಮನವಿ ಪತ್ರ ನೀಡಿರುವ ಮಾವುತರು, ವೀರಾಜಪೇಟೆ ಶಾಸಕ ಕೆ.ಜಿ. ಬೋಪಯ್ಯ ಅವರನ್ನು ಖುದ್ದು ಭೇಟಿಯಾದರು.
ಹಾಗೆಯೇ ಅರಣ್ಯ ಭವನಕ್ಕೂ ಭೇಟಿ ನೀಡಿದ ಮಾವುತರ ತಂಡ ಅಲ್ಲಿನ ಇಲಾಖೆಯ ಹಿರಿಯ ಅಧಿಕಾರಿಗಳನ್ನು ಕೂಡ ಭೇಟಿ ಮಾಡಿ ತಮ್ಮ ಅಳಲು ಹೇಳಿಕೊಂಡರು.
ಈ ಸಂದರ್ಭ "ಶಕ್ತಿ"ಯೊಂದಿಗೆ ಮಾತನಾಡಿದ ಮಾವುತರ ಸಂಘಟನೆಯ ಮುಖಂಡ ಜೆ.ಕೆ. ಡೋಬಿ ಹಾಗೂ ಮೇಘರಾಜು, ಮಾವುತರಾದ ನಾವುಗಳು ಯಾವುದೇ ವಿದ್ಯಾವಂತರಲ್ಲದಿದ್ದರೂ ಕಾಡಾನೆಗಳನ್ನು ತಂದು ಪಳಗಿಸಿ ಅವುಗಳಿಂದ ಕೃಷಿಕರಿಗೆ ಅಥವಾ ಜನಸಾಮಾನ್ಯರಿಗೆ ತೊಂದರೆಯಾಗದAತೆ ಶಿಸ್ತು ಬದ್ಧವಾಗಿ ನಿರ್ವಹಿಸುತ್ತಿದ್ದೇವೆ.
ನಮ್ಮಗಳ ಸೇವೆಯನ್ನು ಬಹಳ ವರ್ಷಗಳಿಂದ ಸರ್ಕಾರ ಪರಿಗಣಿಸದೇ ಇರುವುದು ವಿಪರ್ಯಾಸ. ಆದ್ದರಿಂದ ಕೂಡಲೇ ಸರ್ಕಾರ ನಮ್ಮ ಬೇಡಿಕೆಗಳಿಗೆ ಸ್ಪಂದಿಸುವ ತನಕ ನಾವುಗಳು ಮೈಸೂರು ದಸರಾಕ್ಕೆ ಆನೆಗಳನ್ನು ಒಯ್ಯದೇ ಇರಲು ತೀರ್ಮಾನಿಸಿದ್ದೇವೆ.
ಒಂದು ವೇಳೆ ಇಲಾಖಾ ಅಧಿಕಾರಿಗಳು ನಮ್ಮ ಮೇಲೆ ಶಿಸ್ತು ಕ್ರಮ ಕೈಗೊಳ್ಳುವುದಾದರೆ ಇಡೀ ರಾಜ್ಯದಲ್ಲಿ ಇರುವ ೧೩೩ ಮಂದಿ ಮಾವುತರು ಹಾಗೂ ಕಾವಾಡಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಹಾಗಾಗಿ ಅಧಿಕಾರಿಗಳು ನಮ್ಮ ಈ ಹೋರಾಟವನ್ನು ಹತ್ತಿಕ್ಕುವ ಕೆಲಸ ಮಾಡದಿರಲು ಪ್ರತಿಭಟನೆ ಸಂದರ್ಭ ಪೊಲೀಸರು ನಮಗೆ ರಕ್ಷಣೆ ನೀಡಬೇಕೆಂದು ಪೊಲೀಸ್ ಅಧಿಕಾರಿಗಳಲ್ಲಿ ಮಾವುತರು ಕೋರಿಕೆ ಸಲ್ಲಿಸಿದ್ದಾರೆ.
-ವರದಿ : ಕೆ.ಎಸ್. ಮೂರ್ತಿ