ಸುಂಟಿಕೊಪ್ಪ, ಜು. ೨೧: ಸುಂಟಿಕೊಪ್ಪ ಮಾದಾಪುರ ರಸ್ತೆಯಲ್ಲಿರುವ ಮಧುರಮ್ಮ ಬಡಾವಣೆಯ ನಿವಾಸಿ ಲೋಕೋಪಯೋಗಿ ಗುತ್ತಿಗೆದಾರ ಕೆ.ಸುರೇಶ್ ಮತ್ತು ಉಪನ್ಯಾಸಕಿ ಪುಷ್ಪಲತಾ ಅವರ ಪುತ್ರಿ ಸ್ಪಂದನ ಸುರೇಶ್ ಅವರು ಭಾರತೀಯ ನೌಕಾಪಡೆಗೆ ಆಯ್ಕೆಯಾಗಿದ್ದಾರೆ.
೨೦೨೨ರ ಮಾರ್ಚ್ ತಿಂಗಳಲ್ಲಿ ಮಧ್ಯಪ್ರದೇಶದ ಭೋಪಾಲ್‌ನಲ್ಲಿ ನಡೆದ ಭಾರತೀಯ ನೌಕಾಪಡೆಯ ಅರ್ಹತಾ ಪರೀಕ್ಷೆಯನ್ನು ಮೊದಲ ಪ್ರಯತ್ನದಲ್ಲಿಯೇ ಪೂರ್ತಿಗೊಳಿಸಿ ಇಂಡಿಯನ್ ನೌಕಾಪಡೆಯ ಆರ್ಕಿಟೆಕ್ಟ್ ಇಂಜಿನಿಯರಿAಗ್ ವಿಭಾಗದಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಇವರು ಸುಂಟಿಕೊಪ್ಪದ ಸಂತ ಮೇರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣವನ್ನು ಪೂರೈಸಿದ್ದಾರೆ. ಕಾಲೇಜು ಶಿಕ್ಷಣವನ್ನು ಗೋಣಿಕೊಪ್ಪದ ಕಾಪ್ಸ್ ಮತ್ತು ಮಂಗಳೂರಿನ ಎಕ್ಸ್ಪರ್ಟ್ ಕಾಲೇಜಿನಲ್ಲಿ ಪಡೆದಿದ್ದಾರೆ.
ನಂತರ ಎನ್‌ಸಿಸಿ ಮೂಲಕ ವಿವಿಧ ಕಾರ್ಯಕ್ರಮ ಗಳಲ್ಲಿ ಪೆರೇಡ್ ಮೂಲಕ ತಮ್ಮನ್ನು ತೊಡಗಿಸಿಕೊಂಡಿದ್ದ ಅವರು ಬೆಂಗಳೂರಿನ ನಿಟ್ಟೆ ಮೀನಾಕ್ಷಿ ಇನ್ಸಿ÷್ಟಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಸಿವಿಲ್ ಇಂಜಿನಿಯರಿAಗ್ ವ್ಯಾಸಂಗ ಮಾಡುತ್ತಿದ್ದ ಸಂದರ್ಭ ೨೦೧೮ ರಲ್ಲಿ ದೆಹಲಿಯಲ್ಲಿ ನಡೆದ ಗಣರಾಜ್ಯೋತ್ಸವ ಪೆರೆಡ್‌ನಲ್ಲಿ ಭಾಗವಹಿಸಲು ಅವಕಾಶ ದೊರೆಯಿತು.
ಈ ಪೆರೆಡ್‌ನಲ್ಲಿ ರಾಜ್ಯವನ್ನು ಪ್ರತಿನಿಧಿಸಿದ ಸ್ಪಂದನ ಸುರೇಶ್ ಅವರ ಚುರುಕುತನವನ್ನು ಕಂಡ ಅಂದಿನ ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿ ಅವರು ಪ್ರಶಂಸನಾ ಪತ್ರ ನೀಡಿ ಗೌರವಿಸಿದ್ದರು. ಆ ಮೂಲಕ ಮಾಲ್ಡಿವ್ಸ್ನಲ್ಲಿ ನಡೆದ ಯೂತ್ ಎಕ್ಸ್ ಚೇಂಜ್ ಪ್ರೋಗ್ರಾಂ (ವೈ.ಇ.ಪಿ)ನಲ್ಲಿ ಭಾರತದ ಎನ್.ಸಿ.ಸಿ. ರಾಯಭಾರಿಯಾಗಿ ಕೂಡ ಪ್ರತಿನಿಧಿಸಿದ್ದರು.
ಎನ್.ಸಿ.ಸಿ. ಮೂಲಕ ತನ್ನ ಸಾಧನೆಯ ಮೂಲಕ ಮುನ್ನುಗ್ಗಿದ್ದ ಅವರು ಹಿಂತಿರುಗಿ ನೋಡದೇ ಕೊಡಗು ಮಾತ್ರವಲ್ಲ ರಾಜ್ಯಕ್ಕೂ ತನ್ನ ಸಾಧನೆಯ ಮುನ್ನುಡಿಯನ್ನು ಬರೆದರು. ನೌಕಾಪಡೆಗೆ ಆಯ್ಕೆಯಾಗಿರುವ ಸ್ಪಂದನ ಸುರೇಶ್ ಅವರು ಇದೀಗ ಕೇರಳ ರಾಜ್ಯದ ಭಾರತೀಯ ನೌಕಾಪಡೆಯ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿದ್ದಾರೆ.