ಮಡಿಕೇರಿ, ಜು. ೨೧: ಜಿಲ್ಲಾಸ್ಪತ್ರೆಯಲ್ಲಿ ಎಕ್ಸ್ರೇ ಮಾಡಿಸಲೆಂದು ಬಂದಿದ್ದ ಮಹಿಳೆಯೊಬ್ಬರ ಚಿನ್ನದ ಸರ ಕಳುವಾಗಿರುವ ಘಟನೆ ನಡೆದಿದೆ. ಎರಡು ದಿನಗಳ ಹಿಂದೆ ಚಿಕ್ಲಿಹೊಳೆ ಸಮೀಪ ಕಂಬಿಬಾಣೆಯ ಮಹಿಳೆಯೊಬ್ಬರು ಅನಾರೋಗ್ಯದ ಹಿನ್ನೆಲೆ ಜಿಲ್ಲಾಸ್ಪತ್ರೆಗೆ ಬಂದಿದ್ದು, ಎಕ್ಸ್ರೇ ಮಾಡಿಸಲು ಮುಂದಾಗಿದ್ದಾರೆ.

ಈ ವೇಳೆ ಅವರ ಬಳಿ ಇದ್ದ ಚಿನ್ನದ ಸರವನ್ನು ಕಳಚಿಡುವಂತೆ ಎಕ್ಸ್ರೇ ಕೇಂದ್ರ ಸಿಬ್ಬಂದಿ ತಿಳಿಸಿದ ಹಿನ್ನೆಲೆಯಲ್ಲಿ ಸರವನ್ನು ಕಳಚಿ ಬ್ಯಾಗ್‌ನಲ್ಲಿಟ್ಟಿದ್ದರು ಎನ್ನಲಾಗಿದೆ. ಬಳಿಕ ಎಕ್ಸ್ರೇ ಮಾಡಿಸಿ ಹಿಂತಿರುಗಿ ಬಂದು ಬ್ಯಾಗ್‌ನಲ್ಲಿ ಪರಿಶೀಲಿಸಿದಾಗ ಬ್ಯಾಗ್‌ನಲ್ಲಿ ಇಡಲಾಗಿದ್ದ ಸುಮಾರು ಒಂದೂವರೆ ಲಕ್ಷ ಮೌಲ್ಯದ ಚಿನ್ನದ ಸರ ಕಳುವಾಗಿರುವುದು ತಿಳಿದು ಬಂದಿದ್ದು, ಮಡಿಕೇರಿ ನಗರ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.