ಗೋಣಿಕೊಪ್ಪಲು, ಜು.೨೧: ಚನ್ನಯ್ಯನಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚನ್ನಂಗಿ ದೈಯ್ಯದಡ್ಲು ಗ್ರಾಮದಲ್ಲಿ ಹುಲಿ ಸಂಚಾರ ಮಾಡಿರುವ ಬಗ್ಗೆ ಹೆಜ್ಜೆ ಗುರುತುಗಳು ಕಂಡು ಬಂದಿದ್ದು ಈ ಭಾಗದ ಆದಿವಾಸಿಗಳಲ್ಲಿ ಆತಂಕಕ್ಕೆ ಕಾರಣವಾಗಿದೆ.
ಸುತ್ತಮುತ್ತಲಿನ ಅರಣ್ಯ ಪ್ರದೇಶದಿಂದ ಹುಲಿಯು ಈ ಭಾಗದಲ್ಲಿ ಸುತ್ತಾಡುತ್ತಿರುವ ಬಗ್ಗೆ ಗ್ರಾಮಸ್ಥರು ಮಾಹಿತಿ ನೀಡಿದ್ದಾರೆ. ಇದರಿಂದಾಗಿ ಹಾಡಿಯ ನಿವಾಸಿಗಳು,ಶಾಲಾ ಮಕ್ಕಳು ತೆರಳಲು ಭಯಪಡುವ ವಾತಾವರಣ ಕಂಡು ಬಂದಿದೆ ಎಂದು ಗ್ರಾಮಸ್ಥರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಇತ್ತೀಚೆಗೆ ಸಮೀಪದ ಚನ್ನಂಗಿ ಶಾಲಾ ಆವರಣದಲ್ಲಿ ಹುಲಿಯು ಬಂದು ಹೋಗಿರುವ ಬಗ್ಗೆ ಅಲ್ಲಿನ ಹೆಜ್ಜೆ ಗುರುತುಗಳು ಸಾಕ್ಷಿ ನೀಡಿದ್ದವು. ಇದೀಗ ಇದೇ ಭಾಗದ ಆದಿವಾಸಿಗಳು ಹೆಚ್ಚಾಗಿ ವಾಸಿಸುತ್ತಿರುವ ಪ್ರದೇಶದಲ್ಲಿ ಹುಲಿಯ ಸಂಚಾರವಿರುವುದು ಹೆಜ್ಜೆ ಗುರುತುಗಳಿಂದ ದೃಢಪಟ್ಟಿವೆ.