ವೀರಾಜಪೇಟೆ, ಜು. ೨೧: ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ಮೂವರು ಆರೋಪಿಗಳನ್ನು ವೀರಾಜಪೇಟೆ ನಗರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಅಂಬಟ್ಟಿ ಗ್ರಾಮದ ನಿವಾಸಿ ಕೆ.ಹೆಚ್. ನಿಜಾಮುದ್ದೀನ್ (೩೧), ಬಿಟ್ಟಂಗಾಲ ಗ್ರಾಮದ ನಿವಾಸಿ ಪಿ.ಡಿ. ಸೋಮಯ್ಯ (೨೫) ಅಲಿಯಾಸ್ ರೋಷನ್ ಮತ್ತು ಪಿ.ಸಿ. ಕವನ್ ಮಾದಯ್ಯ (೨೨) ಗಾಂಜಾ ಮಾರಾಟ ಪ್ರಕರಣದಲ್ಲಿ ಬಂಧಿತ ಆರೋಪಿಗಳು.

ತಾ. ೨೦ ರಂದು ನಗರದ ಪಂಜರುಪೇಟೆ ಗಣಪತಿ ಬೀದಿ ಕಡೆಯಿಂದ ನಿಸರ್ಗ ಬಡಾವಣೆಗೆ ತೆರಳುವ ರಸ್ತೆ ಸಮೀಪದಲ್ಲಿ ಆರೋಪಿಗಳು ಕಾರಿನಲ್ಲಿ ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದರು ಎಂಬ ಖಚಿತ ಮಾಹಿತಿ ಆಧರಿಸಿ ಸ್ಥಳಕ್ಕೆ ನಗರ ಪೊಲೀಸರು ದಾಳಿ ನಡೆಸಿ ವಾಹನವನ್ನು ಪರಿಶೀಲಿಸಿದಾಗ ವಾಹನದಲ್ಲಿ ಒಟ್ಟು ೧ ಕೆ.ಜಿ. ೬೫೦ ಗ್ರಾಂ. ಗಾಂಜಾ ಪತ್ತೆಯಾಗಿದೆ.

ಆರೋಪಿತರನ್ನು ತನಿಖೆಗೆ ಒಳಪಡಿಸಿದಾಗ ರಾಜ್ಯದ ಇತರ ಭಾಗದಿಂದ ಗಾಂಜಾವನ್ನು ತರಿಸಿ ಮಾರಾಟ ಮಾಡುತ್ತಿದ್ದದ್ದು ತಿಳಿದು ಬಂದಿದೆ. ವೀರಾಜಪೇಟೆ ನಗರ ಠಾಣೆಯಲ್ಲಿ ಕಲಂ ೨೦ (ಬಿ) ಎನ್.ಡಿ.ಪಿ.ಎಸ್. ಕಾಯ್ದೆ ಅನ್ವಯ ಪ್ರಕರಣ ದಾಖಲಾಗಿದ್ದು, ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಮುಂದಿನ ಕಾನೂನು ಕ್ರಮಕೈಗೊಂಡಿದ್ದಾರೆ.

ಕೊಡಗು ಜಿಲ್ಲಾ ಪೊಲೀಸ್ ಅಧೀಕ್ಷಕರು ಮತ್ತು ವೀರಾಜಪೇಟೆ ಉಪವಿಭಾಗ ಪೊಲೀಸ್ ಉಪಧೀಕ್ಷಕರ ಮಾರ್ಗದರ್ಶನದಲ್ಲಿ ವೀರಾಜಪೇಟೆ ವೃತ್ತ ನಿರೀಕ್ಷಕರಾದ ಶಿವರುದ್ರ ಅವರ ನಿದೆೆÃðಶನದ ಮೇರೆಗೆ ವೀರಾಜಪೇಟೆ ನಗರ ಪೊಲೀಸ್ ಠಾಣೆಯ ಪಿ.ಎಸ್.ಐ. ಸಿ.ವಿ. ಶ್ರೀಧರ್, ಸಿಬ್ಬಂದಿಗಳಾದ ಗಿರೀಶ್, ಮುಸ್ತಾಫ, ಧರ್ಮ, ರಜನ್ ಕುಮಾರ್ ಸುಬ್ರಮಣಿ, ಮಧು ಸತೀಶ, ಸಾಗರ್, ಶೆಟ್ಟಪ್ಪ ಗೀತಾ, ಗೋವಿಂದ ಲಮಾಣಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

-ಕಿಶೋರ್ ಕುಮಾರ್ ಶೆಟ್ಟಿ