ಮಡಿಕೇರಿ, ಜು. ೨೧ : ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ಕೊಡಗು ಘಟಕದ ವಾರ್ಷಿಕ ಸಭೆ ತಾ. ೨೪ರಂದು ನಡೆಯಲಿದೆ ಎಂದು ಸಂಘದ ಉಪಾಧ್ಯಕ್ಷ ಸುಧೀರ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಅಂದು ಬೆಳಿಗ್ಗೆ ೧೦.೩೦ ಗಂಟೆಗೆ ನಗರದ ಕಾವೇರಿ ಹಾಲ್‌ನಲ್ಲಿ ಸಂಘದ ಅಧ್ಯಕ್ಷ ಕೆ.ಪಿ. ಸೋಮಣ್ಣ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದೆ. ಇದೇ ಸಂದರ್ಭ ಸೇವೆಯಿಂದ ನಿವೃತ್ತಿ ಹೊಂದಿ ಸಾಧನೆ ಮಾಡಿದ ಐವರು ಸಾಧಕರಿಗೆ ‘ಜನರಲ್ ತಿಮ್ಮಯ್ಯ ಪ್ರಶಸ್ತಿ‘ ನೀಡಿ ಗೌರವಿಸಲು ಸಂಘ ತೀರ್ಮಾನಿಸಿದ್ದು, ವೈದ್ಯರಾದ ಡಾ. ಕುಶ್ವಂತ್ ಕೋಳಿಬೈಲು, ಪೊಲೀಸ್ ವರಿಷ್ಠಾಧಿಕಾರಿ ಎಂ.ಎ. ಅಯ್ಯಪ್ಪ, ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಗಣೇಶ್ ತಿಮ್ಮಯ್ಯ, ಬಳ್ಳಾರಿ ಹಾಗೂ ಕೊಡಗಿನ ವಿವಿಧೆಡೆ ಸಿವಿಲ್ ಅಭಿಯಂತರರಾಗಿ ಸೇವೆ ಸಲ್ಲಿಸಿರುವ ಎನ್.ಪಿ. ಹೇಮಕುಮಾರ್ ಹಾಗೂ ಹಾಕಿ ಕ್ರೀಡೆಯಲ್ಲಿನ ಸಾಧನೆಗೆ ಪೋರೆಯಂಡ ರಾಜ ತಿಮ್ಮಯ್ಯ ಅವರ ಪುತ್ರ ಸಾನ್ ಮಂದಣ್ಣ ಇವರುಗಳಿಗೆ ಜನರಲ್ ತಿಮ್ಮಯ್ಯ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ ಎಂದು ಸುಧೀರ್ ಮಾಹಿತಿಯಿತ್ತರು.

ಗೋಷ್ಠಿಯಲ್ಲಿ ಸಂಘದ ಸಂಯೋಜಕ ವಾಸು, ಸಹಕಾರ್ಯದರ್ಶಿ ಪ್ರಭಾಕರ್, ವೀರನಾರಿ ಸಂಚಾಲಕಿ ಕೆ.ಕೆ. ಚಂದನ, ಪೊನ್ನಂಪೇಟೆ ತಾಲೂಕು ಸಂಚಾಲಕ ಬಿ.ಎಸ್. ಜಪ್ಪು, ಮಡಿಕೇರಿ ತಾಲೂಕು ಸಹಸಂಚಾಲಕ ಟಿ.ಕೆ. ಕಾಳಪ್ಪ ಉಪಸ್ಥಿತರಿದ್ದರು.