ಶ್ರೀಮಂಗಲ, ಜು. ೨೧: ಮಡಿಕೇರಿಯಲ್ಲಿ ಬುಧವಾರ ಪೊಲೀಸ್ ವರಿಷ್ಠಾಧಿಕಾರಿ ಎಂ.ಎ. ಅಯ್ಯಪ್ಪ ಅವರನ್ನು ಭೇಟಿ ಮಾಡಿದ ಜಬ್ಭೂಮಿ ಸಂಘಟನೆ ಪ್ರಮುಖರು ಕುಲಮಾತೆ ಕಾವೇರಿ ಮತ್ತು ಕೊಡವ ಜನಾಂಗವನ್ನು ನಿಂದನೆ ಮಾಡಿರುವ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು. ಈ ಪ್ರಕರಣದಲ್ಲಿ ಬಂಧಿತ ಆರೋಪಿ ದಿವಿನ್ ದೇವಯ್ಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಇನ್ನು ಮುಂದೆ ಈ ರೀತಿಯಲ್ಲಿ ಯಾವುದೇ ಧರ್ಮ, ಜಾತಿ, ಧಾರ್ಮಿಕ ವಿಚಾರಗಳನ್ನು ನಿಂದಿಸುವ, ಪ್ರಚೋದಿಸುವ ದುಷ್ಕರ್ಮಿಗಳಿಗೆ ಇದೊಂದು ಪಾಠವಾಗಬೇಕು. ಮುಂದೆ ಇಂತಹ ಪ್ರಕರಣಗಳು ಮರುಕಳಿಸದಂತೆ ಪೊಲೀಸ್ ಇಲಾಖೆ ಸಾಮಾಜಿಕ ಜಾಲತಾಣದಲ್ಲಿ ನಿಗಾ ಇಡಬೇಕೆಂದು ಮನವಿ ಮಾಡಿದರು.

ನೈಜ ಆರೋಪಿಯನ್ನು ಬಂಧಿಸಬೇಕಾದರೆ ಹಲವಾರು ಆಯಾಮಗಳಲ್ಲಿ ತನಿಖೆ ನಡೆಸಬೇಕಾಗುತ್ತದೆ. ಈ ಸಂದರ್ಭ ಕೆಲವರ ವಿಚಾರಣೆ ಪೊಲೀಸ್ ಇಲಾಖೆ ನಡೆಸಿದ್ದು ಅದು ಯಾವುದೇ ತನಿಖೆಯಲ್ಲಿ ನಡೆಯುವ ಪ್ರಕ್ರಿಯೆಯಾಗಿದೆ. ತನಿಖೆ-ವಿಚಾರಣೆ ನಡೆಸದೇ ಅಪರಾಧಿ ಹಾಗೂ ನಿರಪರಾಧಿಗಳನ್ನು ಪತ್ತೆಹಚ್ಚಲು ಹೇಗೆ ಸಾಧ್ಯವಾಗುತ್ತದೆ ಎಂದು ಪ್ರಶ್ನಿಸಿದ ಅವರುಗಳು ಇದನ್ನು ಬೇರೆ ರೀತಿಯಲ್ಲಿ ಅರ್ಥೈಸಿಕೊಳ್ಳಬಾರದು ಎಂದು ಮನವಿ ಮಾಡಿದರು. ಅಗತ್ಯವಾದರೆ ಈ ದುಷ್ಕೃತ್ಯದ ಉದ್ದೇಶ ಹಾಗೂ ಇಂತಹ ಪ್ರಕರಣಗಳು ಮರುಕಳಿಸದಂತೆ ಅಂತಹ ಬೇರುಗಳನ್ನು ಮಟ್ಟ ಹಾಕುವಂತೆ ಮನವಿ ಮಾಡಿದರು.

ಇದೇ ಸಂದರ್ಭ ಮಾತನಾಡಿದ ಪ್ರಮುಖರು ಜಿಲ್ಲೆಯ ಕೆಲವು ಶಾಲಾ ಕಾಲೇಜುಗಳಲ್ಲಿ ಮಾದಕ ವಸ್ತುಗಳ ಸರಬರಾಜು ಹಾಗೂ ಸೇವನೆ ನಡೆಯುತ್ತಿದ್ದು ವಿಶೇಷವಾಗಿ ಗಾಂಜಾ ಸೇವನೆ ನಡೆಯುತ್ತಿದೆ.ಇದನ್ನು ಸಂಪೂರ್ಣವಾಗಿ ನಿಗ್ರಹಿಸಲು ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು. ಈ ಬಗ್ಗೆ ಪ್ರತಿಕ್ರಿಯಿಸಿದ ಪೊಲೀಸ್ ವರಿಷ್ಠಾಧಿಕಾರಿ ಎಂ.ಎ. ಅಯ್ಯಪ್ಪ ಅವರು ಮಾದಕ ವಸ್ತು ಸೇವನೆಯಿಂದ ಯುವ ಸಮುದಾಯದ ಭವಿಷ್ಯ ಹಾಳಾಗುತ್ತದೆ. ಆದ್ದರಿಂದ ಪೋಲಿಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿದೆ. ಈಗಾಗಲೇ ಈ ಬಗ್ಗೆ ಎಲ್ಲಾ ಪೊಲೀಸ್ ಠಾಣಾಧಿಕಾರಿಗಳ ವ್ಯಾಪ್ತಿಯಲ್ಲಿ ಇಂತಹ ಯಾವುದೇ ಪ್ರಕರಣ ಕಂಡು ಬಂದರೆ ನಿರ್ದಾಕ್ಷೀಣ್ಯವಾಗಿ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ. ಈಗಾಗಲೇ ಹಲವು ಗಾಂಜಾ ಮಾರಾಟಗಾರರನ್ನು ಬಂಧಿಸಿ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.

ಇದೇ ಸಂದರ್ಭ ಡಿವೈಎಸ್ಪಿ ಗಜೇಂದ್ರ ಪ್ರಸಾದ್ ,ವೃತ್ತ ನಿರೀಕ್ಷಕರಾದ ಮೇದಪ್ಪ ಹಾಗೂ ಅನುಪ್ ಮಾದಪ್ಪ ಅವರನ್ನು ಪ್ರತ್ಯೇಕವಾಗಿ ಭೇಟಿ ಮಾಡಿ,ಸಮಾಲೋಚನೆ ನಡೆಸಿ ಹೂಗುಚ್ಛ ನೀಡಿ ಅಭಿನಂದಿಸಿದರು .ಈ ಸಂದರ್ಭ ಜಬ್ಭೂಮಿ ಸಂಘಟನೆಯ ಪ್ರಮುಖರಾದ ಚೊಟ್ಟೆಕ್‌ಮಾಡ ರಾಜೀವ್ ಬೋಪಯ್ಯ, ಮಾಚಿಮಾಡ ರವೀಂದ್ರ, ಮಲ್ಲಮಾಡ ಪ್ರಭುಪೂಣಚ್ಚ, ಅಣ್ಣೀರ ಹರೀಶ್ ಮಾದಪ್ಪ, ಅಪ್ಪಂಡೇರAಡ ಯಶವಂತ್, ಪಾಲೇಂಗಡ ಅಮಿತ್, ಮಾಳೇಟಿರ ಶ್ರೀನಿವಾಸ್, ಉಳುವಂಗಡ ಲೋಹಿತ್ ಭೀಮಯ್ಯ, ಚೆಯ್ಯಂಡ ಸತ್ಯ, ಚೋಕಂಡ ಸೂರಜ್ ಸೋಮಯ್ಯ, ಶಾಂತೇಯAಡ ನಿರನ್, ಕೊಕ್ಕಲೇರ ಶ್ಯಾಮ್, ಮೂಡೇರ ರಾಯ್ ಹಾಜರಿದ್ದರು.