ಸಿದ್ದಾಪುರ, ಜು. ೧೯: ಕಾಡಾನೆಗಳು ಮನೆಯ ಮುಂಭಾಗದ ಅಂಗಳದಲ್ಲಿ ದಾಂಧಲೆ ನಡೆಸಿ ನೀರಿನ ಪೈಪ್‌ಗಳನ್ನು ಹಾಗೂ ಹೂ-ಕುಂಡಗಳನ್ನು ತುಳಿದು ಧ್ವಂಸಗೊಳಿಸಿರುವ ಘಟನೆ ನೆಲ್ಲಿಹುದಿಕೇರಿ ಗ್ರಾಮದಲ್ಲಿ ನಡೆದಿದೆ.

ನೆಲ್ಲಿಹುದಿಕೇರಿ ಗ್ರಾಮದ ನೆಲ್ಯ ಎಸ್ಟೇಟ್‌ನಲ್ಲಿರುವ ಮನೆ ಅಂಗಳಕ್ಕೆ ಸೋಮವಾರ ರಾತ್ರಿ ಕಾಡಾನೆಗಳು ದಾಂಧಲೆ ನಡೆಸಿ, ಕುಡಿಯುವ ನೀರಿನ ಟ್ಯಾಂಕ್‌ಗಳಿಗೆ ಅಳವಡಿಸಿದ್ದ ಪೈಪ್‌ಗಳನ್ನು ಹಾನಿಗೊಳಿಸಿದೆ. ಈ ಘಟನೆಯು ಅವರ ಮನೆಯ ಸಿ.ಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಆನೆಗಳ ಪುಂಡಾಟಿಕೆಯಿAದ ಮನೆಯವರು ಭಯಭೀತರಾಗಿದ್ದಾರೆ. ಇದಲ್ಲದೇ ಕಾಫಿ ತೋಟಗಳಲ್ಲಿ ಕೂಡ ಕಾಡಾನೆಗಳು ದಾಂಧಲೆ ನಡೆಸಿ ಕೃಷಿ ಫಸಲುಗಳನ್ನು ನಾಶಗೊಳಿಸಿದೆ.

ನೆಲ್ಲಿಹುದಿಕೇರಿ ಗ್ರಾಮ ವ್ಯಾಪ್ತಿಯ ಅತ್ತಿಮಂಗಲ, ಬೆಟ್ಟದಕಾಡು, ನಲ್ವತ್ತೇಕರೆ ಹಾಗೂ ನೆಲ್ಲಿಹುದಿಕೇರಿ ಶಾಲಾ ರಸ್ತೆಯ ಕೆಳ ಭಾಗದ ಕಾಫಿ ತೋಟಗಳಲ್ಲಿ ಕಾಡಾನೆಗಳ ಹಿಂಡು ಬೀಡುಬಿಟ್ಟು ದಿನನಿತ್ಯ ದಾಂಧಲೆ ನಡೆಸುತ್ತಿದೆ. ರಾತ್ರಿ ಸಮಯದಲ್ಲಿ ಮಿತಿಮೀರಿದ ಕಾಡಾನೆಗಳ ಹಾವಳಿಯಿಂದಾಗಿ ಗ್ರಾಮಸ್ಥರಿಗೆ ನೆಮ್ಮದಿ ಇಲ್ಲದಂತಾಗಿದೆ. ಈ ಭಾಗದಲ್ಲಿ ಉಪಟಳ ನೀಡುತ್ತಿರುವ ಕಾಡಾನೆಗಳನ್ನು ಸೆರೆ ಹಿಡಿಯಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.