ಸಿದ್ದಾಪುರ, ಜು. ೧೯: ಮಾಲ್ದಾರೆ ಸರ್ಕಾರಿ ಶಾಲೆಯ ಆವರಣದೊಳಗೆ ಹುಲಿಯು ಪ್ರತ್ಯಕ್ಷಗೊಂಡಿದ್ದು, ಗ್ರಾಮಸ್ಥರು ಹಾಗೂ ಶಾಲಾ ವಿದ್ಯಾರ್ಥಿಗಳು ಆತಂಕಕ್ಕೆ ಸಿಲುಕಿಕೊಂಡಿದ್ದಾರೆ. ಕಳೆದ ಕೆಲವು ದಿನಗಳ ಹಿಂದೆ ಮಾಲ್ದಾರೆ ಸಮೀಪದ ಬಾಡಗ-ಬಾಣಂಗಾಲ ಗ್ರಾಮದ ಮಾರ್ಗೊಲ್ಲಿ ಕಾಫಿ ತೋಟದಲ್ಲಿ ಹುಲಿಯೊಂದು ಗೋಚರಿಸಿತ್ತು. ಅಲ್ಲದೇ ಹಾಡಹಗಲೇ ಜಾನುವಾರು ಗಳ ಮೇಲೆ ಧಾಳಿ ನಡೆಸಿತ್ತು.

ನಂತರ ಹುಲಿಯು ಪರಾರಿ ಯಾಗಿತ್ತು. ಇದೀಗ ಮತ್ತೆ ಮಂಗಳವಾರದAದು ಮಾಲ್ದಾರೆಯ ಸರ್ಕಾರಿ ಶಾಲೆಯ ಮೈದಾನದಲ್ಲಿ ಹುಲಿಯು ಓಡಾಡಿರುವ ಹೆಜ್ಜೆ ಗುರುತುಗಳು ಪತ್ತೆಯಾಗಿರುವುದು ಮತ್ತಷ್ಟು ಆತಂಕಕ್ಕೆ ಎಡೆಮಾಡಿಕೊಟ್ಟಿದೆ. ಮಂಗಳವಾರದAದು ಶಾಲೆಗೆ ಮಕ್ಕಳು ಆಗಮಿಸುತ್ತಿರುವ ಸಂದರ್ಭದಲ್ಲಿ ಶಾಲೆಯ ಆವರಣದ ಒಳಗಿರುವ ಮೈದಾನದಲ್ಲಿ ಹುಲಿಯು ಸಂಚರಿಸಿರುವ ಹೆಜ್ಜೆ ಗುರುತು ಗೋಚರಿಸಿದೆ. ಇದನ್ನು ಕಂಡ ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ ಮೇರೆಗೆ ಸ್ಥಳಕ್ಕೆ ಕುಶಾಲನಗರ ವಲಯ ಅರಣ್ಯ ಇಲಾಖೆಯ ಸಿಬ್ಬಂದಿಗಳಾದ ಮಣಿಕಂಠ ಹಾಗೂ ಶಶಿ, ಮಾಲ್ದಾರೆ ಗ್ರಾ.ಪಂ. ಉಪಾಧ್ಯಕ್ಷೆ ಪುಷ್ಪಾ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಹುಲಿ ಶಾಲೆಯ ಒಳಗಿನ ಆವರಣದ ಮೈದಾನದಲ್ಲಿ ಸುತ್ತಾಡಿ ನಂತರ ಸಮೀಪದ ಅರಣ್ಯ ಪ್ರದೇಶದತ್ತ ತೆರಳಿರುವ ಹೆಜ್ಜೆ ಗುರುತುಗಳು ಪತ್ತೆಯಾಗಿವೆ. ಈ ಹಿಂದೆ ಕೂಡ ಮಾಲ್ದಾರೆಯ ಜನವಸತಿ ಪ್ರದೇಶದಲ್ಲಿ ಹುಲಿಯು ಸುತ್ತಾಡಿದ ಘಟನೆಗಳು ನಡೆದಿತ್ತು.

ಕಳೆದ ಕೆಲವು ದಿನಗಳ ಹಿಂದೆ ಬಾಡಗ-ಬಾಣಂಗಾಲ ಗ್ರಾಮದ ಮಾರ್ಗೊಲ್ಲಿ ಕಾಫಿ ತೋಟಗಳಲ್ಲಿ ಹುಲಿಯು ಜಾನುವಾರುಗಳನ್ನು ಬಲಿ ಪಡೆದುಕೊಂಡಿತ್ತು. ಈ ಘಟನೆಯಿಂದ ಕಾರ್ಮಿಕರು ಹಾಗೂ ಸ್ಥಳೀಯರು ಭಯಭೀತರಾಗಿದ್ದರು. ಈ ಹಿನ್ನೆಲೆಯಲ್ಲಿ ಹುಲಿಯನ್ನು ಸೆರೆ ಹಿಡಿಯಲು ಅರಣ್ಯ ಇಲಾಖಾಧಿಕಾರಿ ಗಳು ವನ್ಯಜೀವಿ ವೈದ್ಯಾಧಿಕಾರಿಗಳು ಕೂಂಬಿAಗ್ ನಡೆಸಿದ್ದರು. ಅಲ್ಲದೇ ಬಾಡಗ-ಬಾಣಂಗಾಲ ಗ್ರಾಮದ ವ್ಯಾಪ್ತಿಯ ಸುತ್ತಮುತ್ತಲ ಪ್ರದೇಶಗಳಲ್ಲಿ ಕಾರ್ಯಾಚರಣೆಯನ್ನು ನಡೆಸಿದರು. ಇದಲ್ಲದೇ ಹುಲಿಯನ್ನು ಸೆರೆ ಹಿಡಿಯಲು ಕಾಫಿ ತೋಟದ ಒಳಗೆ ೩ ಬೋನ್‌ಗಳನ್ನು ಇರಿಸಲಾಗಿದ್ದು, ಇದುವರೆಗೂ ಹುಲಿಯ ಚಲನ-ವಲನ ಪತ್ತೆಯಾಗಿಲ್ಲ.

-ವರದಿ: ವಾಸು ಎ.ಎನ್.