ಜಿಲ್ಲಾಧಿಕಾರಿ ಬಿ.ಸಿ. ಸತೀಶ ಮಾಹಿತಿ
ಮಡಿಕೇರಿ, ಜು. ೧೯: ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾಗಿರುವ ಅಬ್ಬಿ ಜಲಪಾತದಲ್ಲಿ ಹಾನಿಗೀಡಾಗಿರುವ ತೂಗು ಸೇತುವೆಯನ್ನು ಪುನರ್ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಕ್ರಮಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಡಾ. ಬಿ.ಸಿ. ಸತೀಶ ತಿಳಿಸಿದ್ದಾರೆ.
‘ಶಕ್ತಿ’ಯೊಂದಿಗೆ ಮಾತನಾಡಿದ ಅವರು, ಅಬ್ಬಿ ಜಲಪಾತಕ್ಕೆ ಭೇಟಿ ನೀಡಿ ಪರಿಶೀಲಿಸಲಾಗಿದ್ದು, ಅಲ್ಲಿನ ತೂಗು ಸೇತುವೆಯನ್ನು ಪುನರ್ ನಿರ್ಮಾಣ ಮಾಡುವ ಸಂಬAಧ ಸೇತುವೆ ನಿರ್ಮಾಣ ತಜ್ಞರಾದ ಗಿರೀಶ್ ಭಾರಧ್ವಜ್ ಅವರ ಪುತ್ರ ಪತಂಜಲಿ ಭಾರಧ್ವಜ್ ಅವರನ್ನು ಕರೆಯಿಸಿ ಚರ್ಚಿಸಿ ಅವರ ಮೂಲಕ ಕ್ರಿಯಾಯೋಜನೆ ತಯಾರಿಸಿ ಸರ್ಕಾರಕ್ಕೆ ಸಲ್ಲಿಸುವ ಬಗ್ಗೆ ಚಿಂತನೆಯಿದೆ.
ಇದರೊಂದಿಗೆ ಚೇಲಾವರ ಜಲಪಾತದಲ್ಲಿ ತೂಗುಸೇತುವೆ ನಿರ್ಮಿಸಿ ವ್ಯೂಪಾಯಿಂಟ್ ಮಾಡಬೇಕೆನ್ನುವ ಚಿಂತನೆಯೂ ಇದ್ದು, ಚೇಲಾವರ ಹಾಗೂ ಅಬ್ಬಿಜಲಪಾತದ ಎರಡೂ ಯೋಜನೆಗಳ ಸಂಬAಧ ಪತಂಜಲಿ ಭಾರಧ್ವಜ್ ಅವರನ್ನು ಕರೆಯಿಸಿ ಕ್ರಿಯಾ ಯೋಜನೆ ತಯಾರಿಸಿ ಸರ್ಕಾರಕ್ಕೆ ಕಳುಹಿಸಲಾಗುವುದು. ಸರ್ಕಾರದಿಂದ ಹಣ ಬಿಡುಗಡೆಯಾದರೆ ಕಾಮಗಾರಿಗೆ ಕ್ರಮಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು.