ಸೋಮವಾರಪೇಟೆ,ಜು.೧೯: ನಿನ್ನೆಯವರೆಗೂ ಎಡೆಬಿಡದೇ ಸುರಿದ ಮಳೆ ಇಂದು ಸಂಪೂರ್ಣ ಸ್ಥಗಿತಗೊಂಡಿದ್ದು, ಬಿಸಿಲಿನ ವಾತಾವರಣ ಮೂಡಿದೆ. ನಿನ್ನೆ ದಿನ ಸುರಿದ ಮನೆಗೆ ತಾಲೂಕಿನ ವಿವಿಧೆಡೆ ಮನೆಗಳಿಗೆ ಹಾನಿ ಸಂಭವಿಸಿದೆ.

ಸಮೀಪದ ಯಡುಂಡೆ ಗ್ರಾಮದ ಸಾವಿತ್ರಮ್ಮ ಅವರ ವಾಸದ ಮನೆಯು ಕುಸಿದು ಶೇ.೪೦ರಷ್ಟು ನಷ್ಟವಾಗಿದೆ. ಮನೆಯು ವಾಸಕ್ಕೆ ಅಯೋಗ್ಯವಾಗಿ ಪರಿಣಮಿಸಿದ್ದು, ಸಾವಿತ್ರಮ್ಮ ಅವರು ಸಂಬAಧಿಕರ ಮನೆಯಲ್ಲಿ ಆಶ್ರಯ ಪಡೆದಿದ್ದಾರೆ. ಸ್ಥಳಕ್ಕೆ ಕಂದಾಯ ಅಧಿಕಾರಿ ಕುಮಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಕೊಡ್ಲಿಪೇಟೆ ಹೋಬಳಿ ಮಾವಿನಹಳ್ಳಿ ಗ್ರಾಮದ ನರಸಮ್ಮ ಅವರ ವಾಸದ ಮನೆಯ ಗೋಡೆ ಕುಸಿದು ಬಿದ್ದಿದೆ. ಇದರಿಂದಾಗಿ ಶೇ.೫೦ರಷ್ಟು ನಷ್ಟ ಸಂಭವಿಸಿದೆ ಎಂದು ಕಂದಾಯ ಅಧಿಕಾರಿಗಳು ವರದಿ ಮಾಡಿದ್ದಾರೆ. ಕೊಡ್ಲಿಪೇಟೆ ಹೋಬಳಿಯ ಸಂಪಿಗೆದಾಳು ಗ್ರಾಮದ ಧರ್ಮಪ್ಪ ಅವರ ಮಾಸದ ಮನೆಯ ಗೋಡೆ ಕುಸಿದು ಹಾನಿಯಾಗಿದೆ.

ಸೋಮವಾರಪೇಟೆ ಹೋಬಳಿ ವ್ಯಾಪ್ತಿಯ ಬೇಳೂರು-ಬಳಗುಂದ ಗ್ರಾಮದಲ್ಲಿ ಎನ್.ಎಸ್. ರಾಜೀವ್ ಅವರಿಗೆ ಸೇರಿದ ವಾಸದ ಮನೆಯ ಗೋಡೆ ಕುಸಿದು ನಷ್ಟವಾಗಿದೆ. ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಶಂಕರ್ ಅವರ ಮನೆಗೆ ಶೇ.೧೮ರಷ್ಟು ಹಾನಿಯಾಗಿದೆ ಎಂದು ತಾಲೂಕು ಕಚೇರಿಗೆ ವರದಿ ಸಲ್ಲಿಕೆಯಾಗಿದೆ.

ಕಳೆದ ೨೪ ಗಂಟೆಗಳಲ್ಲಿ ಕೊಡ್ಲಿಪೇಟೆಗೆ ೫, ಶನಿವಾರಸಂತೆಗೆ ೬.೪, ಶಾಂತಳ್ಳಿಗೆ ೩೦.೨, ಸೋಮವಾರಪೇಟೆಗೆ ೩.೪ ಮಿ.ಮೀ. ಮಳೆಯಾದ ಬಗ್ಗೆ ವರದಿಯಾಗಿದೆ.