ಮಡಿಕೇರಿ, ಜು. ೨೦ : ಜಿಲ್ಲಾ ಪಂಚಾಯಿತಿ, ಜಿಲ್ಲಾಡಳಿತ, ಯುವ ಸಬಲೀಕರಣ ಮತ್ತು ಕ್ರಿಡಾ ಇಲಾಖೆ, ನೆಹರೂ ಯುವ ಕೇಂದ್ರ, ಮಡಿಕೇರಿ, ಜಿಲ್ಲಾ ಹಾಗೂ ತಾಲೂಕು ಯುವ ಒಕ್ಕೂಟಗಳು, ಯೂತ್ ಹಾಸ್ಟೆಲ್ ಅಸೋಸಿಯೇಶನ್ ಆಫ್ ಇಂಡಿಯಾ, ಹಾಗೂ ಕಗ್ಗೋಡ್ಲುವಿನ ಕಾವೇರಿ ಯುವಕ ಸಂಘದ ಸಂಯುಕ್ತಾಶ್ರ ಯದಲ್ಲಿ ಏರ್ಪಡಿಸಲಾಗಿರುವ ೩೦ನೇ ವರ್ಷದ ರಾಜ್ಯಮಟ್ಟದ ಕೆಸರುಗದ್ದೆ ಕ್ರಿಡಾಕೂಟ ತಾ. ೨೩ರಂದು ನಡೆಯಲಿದೆ.

ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಜಿಲ್ಲಾ ಯುವ ಒಕ್ಕೂಟದ ಅಧ್ಯಕ್ಷ ಪಿ.ಪಿ.ಸುಕುಮಾರ್; ಪ್ರಕೃತಿ ವಿಕೋಪ ಹಾಗೂ ಕೊರೊನಾದಿಂದಾಗಿ ಕಳೆದ ಮೂರು ವರ್ಷಗಳಿಂದ ಕ್ರೀಡಾಕೂಟ ಆಯೋಜನೆ ಮಾಡಲು ಸಾಧ್ಯವಾಗಿಲ್ಲ, ಹಾಗಾಗಿ ಈ ಬಾರಿ ಅದ್ದೂರಿಯಾಗಿ ನಡೆಸಲು ತೀರ್ಮಾನಿಸಲಾಗಿದೆ. ಕಗ್ಗೋಡ್ಲುವಿನ ಪೊಡನೋಳಂಡ ಬೋಪಣ್ಣ ಕುಶಾಲಪ್ಪ ಅವರಿಗೆ ಸೇರಿದ ಗದ್ದೆಯಲ್ಲಿ ಕ್ರೀಡಾಕೂಟ ನಡೆಯಲಿದೆ ಎಂದು ತಿಳಿಸಿದರು. ಹಿರಿಯ ಪ್ರಾಥಮಿಕ ಶಾಲಾ ಬಾಲಕ ಮತ್ತು ಬಾಲಕಿಯರಿಗೆ, ಪ್ರೌಢಶಾಲಾ ಬಾಲಕ, ಬಾಲಕಿಯರಿಗೆ, ಪದವಿ ಪೂರ್ವ ಕಾಲೇಜು, ಪದವಿ ಕಾಲೇಜು ಹಾಗೂ ೪೦ ವರ್ಷ ಮೇಲ್ಪಟ್ಟ ಪುರುಷ ಹಾಗೂ ಮಹಿಳೆಯರಿಗೆ ಪ್ರತ್ಯೇಕ ವಿಭಾಗಗಳಲ್ಲಿ ಓಟದ ಸ್ಪರ್ಧೆ ನಡೆಯಲಿದೆ. ಸಾರ್ವಜನಿಕ ಪುರುಷ ಮತ್ತು ಮಹಿಳೆಯರಿಗೆ ಮುಕ್ತ ಓಟದ ಸ್ಪರ್ಧೆ ಏರ್ಪಡಿಸಲಾಗಿದೆ ಎಂದು ತಿಳಿಸಿದರು. ಇದಲ್ಲದೆ, ಸಾರ್ವಜನಿಕ ಪುರುಷ ಹಾಗೂ ಮಹಿಳೆಯರಿಗೆ ಹಗ್ಗ ಜಗ್ಗಾಟ, ವಾಲಿಬಾಲ್ ಪಂದ್ಯಾವಳಿ, ಮಹಿಳೆಯರಿಗೆ ಥ್ರೋಬಾಲ್ ಪಂದ್ಯಾವಳಿ ಏರ್ಪಡಿಸಲಾಗಿದೆ ಎಂದು ಮಾಹಿತಿ ನೀಡಿದರು.

ವಿಜೇತರಿಗೆ ಪಾರಿತೋಷಕ ದೊಂದಿಗೆ ನಗದು ಬಹುಮಾನ ನೀಡಲಾಗುವದು ಎಂದು ತಿಳಿಸಿದ ಅವರು, ಜಿಲ್ಲೆಯಲ್ಲಿ ೨೦೦ ರಿಂದ ೩೦೦ ಯುವಕ, ಯುವತಿ ಮಂಡಳಿಗಳಿದ್ದು, ನವೀಕರಣ ಮಾಡದೇ ಇರುವ ಸಂಘಟನೆಗಳು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯನ್ನು ಸಂಪರ್ಕಿಸಿ ನವೀಕರಣ ಮಾಡಿಕೊಳ್ಳ ಬೇಕಾಗಿ ಮನವಿ ಮಾಡಿದರು.

ಉದ್ಘಾಟನೆ-ಸಮಾರೋಪ

ಮಡಿಕೇರಿ ತಾಲೂಕು ಯುವ ಒಕ್ಕೂಟದ ಅಧ್ಯಕ್ಷ ಬಾಳಾಡಿ ದಿಲೀಪ್ ಮಾತನಾಡಿ; ತಾ. ೨೩ರಂದು ಬೆಳಿಗ್ಗೆ ೯.೩೦ ಗಂಟೆಗೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ. ನಾಗೇಶ್ ಉದ್ಘಾಟಿಸುವರು. ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಸಂಸದ ಪ್ರತಾಪ್ ಸಿಂಹ, ವಿಧಾನ ಪರಿಷತ್ ಸದಸ್ಯ ಸುಜಾ ಕುಶಾಲಪ್ಪ, ಮಾಜಿ ಅಡ್ವೋಕೇಟ್ ಜನರಲ್ ಅಜ್ಜಿಕುಟ್ಟಿರ ಪೊನ್ನಣ್ಣ, ಮೇಕೇರಿ ಗ್ರಾ.ಪಂ. ಅಧ್ಯಕ್ಷ ದಿನೇಶ್, ಪೊಲೀಸ್ ವರಿಷ್ಠಾಧಿಕಾರಿ ಎಂ.ಎ. ಅಯ್ಯಪ್ಪ, ಉದ್ಯಮಿ ಡಾ. ಮಂಥರ್ ಗೌಡ, ರಾಜ್ಯ ಯುವ ಸಂಘಗಳ ಒಕ್ಕೂಟದ ಅಧ್ಯಕ್ಷ ಡಾ. ಎಸ್. ಬಾಲಾಜಿ, ಬೆಳೆಗಾರ ಪೊಡನೋಳಂಡ ಬೋಪಣ್ಣ ಕುಶಾಲಪ್ಪ ಉಪಸ್ಥಿತರಿರುವರೆಂದು ತಿಳಿಸಿದರು.

ಸಮಾರೋಪ ಸಮಾರಂಭ ಸಂಜೆ ೬ ಗಂಟೆಗೆ ನಡೆಯಲಿದ್ದು, ಹಾಕತ್ತೂರು ಗ್ರಾ.ಪಂ. ಅಧ್ಯಕ್ಷೆ ಸವಿತ ಅಧ್ಯಕ್ಷತೆ ವಹಿಸುವರು. ಶಾಸಕ ಕೆ.ಜಿ. ಬೋಪಯ್ಯ ಬಹುಮಾನ ವಿತರಣೆ ಮಾಡಲಿದ್ದು, ಮುಖ್ಯ ಅತಿಥಿಗಳಾಗಿ ಹಾಕತ್ತೂರು ಗ್ರಾ.ಪಂ. ಸದಸ್ಯರುಗಳಾದ ಪೊನ್ನಚನ ಲೋಕೇಶ್, ವಿಜಯಲಕ್ಷಿö್ಮ, ಜಿಲ್ಲಾಧಿಕಾರಿ ಡಾ. ಬಿ.ಸಿ. ಸತೀಶ, ಕೊಡವ ಸಾಹಿತ್ಯ ಅಕಾಡೆಮಿ ಸದಸ್ಯ ಡಾ. ಮೇಚೀರ ಸುಭಾಶ್ ನಾಣಯ್ಯ, ಕೃಷಿಕ ಮಂದ್ರಿರ ತೇಜಸ್ ನಾಣಯ್ಯ, ಯುವ ಒಕ್ಕೂಟ ಸ್ಥಾಪಕಾಧ್ಯಕ್ಷ ಗಿರೀಶ್ ತಾಳತ್‌ಮನೆ, ಯೂತ್ ಹಾಸ್ಟೇಲ್‌ನ ರಾಜಶೇಖರ್ ಅವರುಗಳು ಉಪಸ್ಥಿತರಿ ರುವರೆಂದು ತಿಳಿಸಿದರು. ಕ್ರಿಡಾಕೂಟದ ಬಗ್ಗೆ ಹೆಚ್ಚಿನ ಮಾಹಿತಿ ಹಾಗೂ ನೋಂದಣಿಗಾಗಿ ದೂ. ೯೪೮೧೨೧೩೯೨೦, ೯೪೮೦೬೭೪೫೪೬, ೯೮೪೫೫೭೧೨೯೦ ಸಂಪರ್ಕಿಸ ಬಹುದೆಂದು ತಿಳಿಸಿದರು.

ಗೋಷ್ಠಿಯಲ್ಲಿ ಮಡಿಕೇರಿ ತಾಲೂಕು ಒಕ್ಕೂಟದ ಕಾರ್ಯದರ್ಶಿ ಅರೆಯಂಡ ನೇತ್ರಾವತಿ, ಖಜಾಂಚಿ ಕುಂಜಿಲನ ಮಧು ಮೋಹನ್, ತಾಲೂಕು ಒಕ್ಕೂಟದ ಮಾಜಿ ಅಧ್ಯಕ್ಷ - ಸದಸ್ಯ ಕೂಡಂಡ ಸಾಬ ಸುಬ್ರಮಣಿ, ಕಾವೇರಿ ಯುವಕ ಸಂಘದ ಅಧ್ಯಕ್ಷ ದಿಶಾಂತ್ ಪೂಜಾರಿ ಇದ್ದರು.