ಮಡಿಕೇರಿ, ಜು. ೨೦: ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ತಾ. ೨೩ರಂದು ಪೆರಾಜೆ ಅನ್ನಪೂರ್ಣೇಶ್ವರಿ ಕಲಾ ಮಂದಿರದಲ್ಲಿ ಅರೆಭಾಷೆ ಪಾರಂಪರಿಕ ವಸ್ತುಕೋಶ, ಅರೆಭಾಷೆ ನಾಟಕ, ಯಕ್ಷಗಾನ, ಕಥೆ, ಪ್ರವಾಸ ಕಥನ ಪುಸ್ತಕಗಳ ಬಿಡುಗಡೆ ಸಮಾರಂಭ ಏರ್ಪಡಿಸಲಾಗಿದೆ ಎಂದು ಅಕಾಡೆಮಿ ಅಧ್ಯಕ್ಷ ಲಕ್ಷಿö್ಮನಾರಾಯಣ ಕಜೆಗದ್ದೆ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಅರೆಭಾಷೆ ಅಕಾಡೆಮಿ ಸಂಗ್ರಹಿಸಿರುವ ಪಾರಂಪರಿಕ ವಿಶ್ವಕೋಶ, ಜಯಪ್ರಕಾಶ್ ಕುಕ್ಕೇಟಿ ಅವರು ಅರೆಭಾಷೆಗೆ ಅನುವಾದಿಸಿರುವ ಸಾಹೇಬ್ರು ಬಂದವೇ, ದೇವಜನ ಗೀತಾ ಮೋಂಟಡ್ಕ ಅರೆಭಾಷೆಗೆ ಅನುವಾದಿಸಿರುವ ಕಿರಗೂರಿನ ಗಯ್ಯಾಳಿಗ, ಭವ್ಯಶ್ರೀ ಕಲ್ಕುಂದ ಅರೆಭಾಷೆಗೆ ಅನುವಾದಿಸಿರುವ ಯಕ್ಷಜೊಂಪೆ ಯಕ್ಷಗಾನ ಪ್ರಸಂಗ, ಡಾ. ಮಾಧವ ಪೆರಾಜೆ ಅವರು ಅರೆಭಾಷೆಗೆ ಅನುವಾದಿಸಿರುವ ವೀರಮಣಿ ಕಾಳಗ ಯಕ್ಷಗಾನ ಪ್ರಸಂಗ, ದಾಮೋದರ ಕುಯಿಂತೋಡು ಅವರ ನೆಂಪುನ ರ‍್ತೆ, ಪಿ.ಜಿ. ಅಂಬೆಕಲ್ ಅವರ ಗೂಡೆ ಬೇಕಾಗುಟ್ಟು ನಾಟಕಗಳ ಜೊಂಗೆ, ಭವಾನಿ ಶಂಕರ ಅಡ್ತಲೆ ಅವರ ಕತೆಗಳ ಅಟ್ಟುಳಿ ಪುಸ್ತಕಗಳು ಬಿಡುಗಡೆಯಾಗಲಿವೆ ಎಂದು ಲಕ್ಷಿö್ಮನಾರಾಯಣ ಕಜೆಗದ್ದೆ ಮಾಹಿತಿಯಿತ್ತರು. ತಾ.೨೩ರಂದು ಬೆಳಿಗ್ಗೆ ೧೧ ಗಂಟೆಗೆ ತನ್ನ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಮಾರಂಭದಲ್ಲಿ ಶಿಗ್ಗಾವಿಯ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳಾದ ಡಾ. ಅಂಬಳಿಕೆ ಹಿರಿಯಣ್ಣ ಅವರು ಪುಸ್ತಕಗಳನ್ನು ಬಿಡುಗಡೆ ಮಾಡಲಿದ್ದಾರೆ. ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಡಾ. ಮಾಧವ ಪೆರಾಜೆ ಅವರು ಕೃತಿ ಪರಿಚಯ ಮಾಡಲಿದ್ದು, ಅತಿಥಿಗಳಾಗಿ ಮಡಿಕೇರಿ ತಾಲೂಕು ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷ ನಾಗೇಶ್ ಕುಂದಲ್ಪಾಡಿ, ಪೆರಾಜೆ ಗ್ರಾ.ಪಂ. ಅಧ್ಯಕ್ಷೆ ಚಂದ್ರಕಲಾ ಬಳ್ಳಡ್ಕ, ಪೆರಾಜೆ ಗೌಡ ಗ್ರಾಮ ಸಮಿತಿ ಅಧ್ಯಕ್ಷ ಪದ್ಮಯ್ಯ ಕುಂಬಳಚೇರಿ ಪಾಲ್ಗೊಳ್ಳಲಿದ್ದಾರೆ ಎಂದು ಲಕ್ಷಿö್ಮನಾರಾಯಣ ಕಜೆಗದ್ದೆ ವಿವರಿಸಿದರು.
ಗೋಷ್ಠಿಯಲ್ಲಿ ಅಕಾಡೆಮಿ ಸದಸ್ಯರಾದ ಅಗೋಳಿಕಜೆ ಧನಂಜಯ, ಬೈತಡ್ಕ ಜಾನಕಿ, ಚೊಕ್ಕಾಡಿ ಪ್ರೇಮಾ ರಾಘವಯ್ಯ ಉಪಸ್ಥಿತರಿದ್ದರು.