ಮಡಿಕೇರಿ, ಜು. ೧೯: ಜಿಲ್ಲಾಧಿಕಾರಿ ಕಚೇರಿ ತಡೆಗೋಡೆ ಮಳೆಯಿಂದ ಹಾನಿಗೊಳಗಾಗಿರುವ ಸಂಬAಧ ಇಂದು ಸ್ಥಳಕ್ಕೆ ಭೇಟಿ ನೀಡಿದ್ದ ಶಾಸಕರುಗಳಾದ ಅಪ್ಪಚ್ಚು ರಂಜನ್ ಹಾಗೂ ಕೆ.ಜಿ. ಬೋಪಯ್ಯ ಲೋಕೋಪಯೋಗಿ ಇಲಾಖಾ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರಲ್ಲದೆ ಕಾಮಗಾರಿ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಅಪ್ಪಚ್ಚು ರಂಜನ್ ತಡೆಗೋಡೆ ಕಾಮಗಾರಿ ನಡೆಯುತ್ತಿದ್ದ ವೇಳೆಯಲ್ಲೇ ತಾನು ಈ ತಂತ್ರಜ್ಞಾನ ಕೊಡಗಿನ ಮಟ್ಟಿಗೆ ಸರಿಹೊಂದುವುದಿಲ್ಲ ಎಂದು ಹೇಳಿದ್ದೆ. ಆದರೆ ಅಧಿಕಾರಿಗಳು ಏನೂ ತೊಂದರೆ ಆಗುವುದಿಲ್ಲ ಎಂದು ಹೇಳುತ್ತಿದ್ದರು. ಇದೀಗ ತಡೆಗೋಡೆಗೆ ಹಾನಿ ಆಗಿದೆ ಈ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಈ ಕಾಮಗಾರಿಯನ್ನು ಯಾವ ರೀತಿ ಮಾಡಲಾಗಿದೆ; ಯಾರು ಮಾಡಿದ್ದಾರೆ ಎಂಬಿತ್ಯಾದಿ ಬಗ್ಗೆ ಪಿಟಿಷನ್ ಕಮಿಟಿಯಲ್ಲಿ ವಿಚಾರಣೆ ನಡೆಸಲು ಕ್ರಮ ಕೈಗೊಳ್ಳಲಾಗುವುದು. ಗುತ್ತಿಗೆದಾರನ ತಪ್ಪಿದ್ದರೆ ಅವರನ್ನು ಕಪ್ಪು ಪಟ್ಟಿಗೆ ಸೇರಿಸಲಾಗುವುದು. ಅಭಿಯಂತರ ತಪ್ಪಿದ್ದರೆ ಅವರ ಮೇಲೆ ಕ್ರಮಕೈಗೊಳ್ಳಲಾಗುವುದು ಎಂದರು. ಶಾಸಕನಾಗಿ ತನ್ನ ೨೫ ವರ್ಷದ ಅನುಭವದಲ್ಲಿ ಕೊಡಗಿನಲ್ಲಿ ಯಾವ ಕಾಮಗಾರಿಗಳನ್ನು ಯಾವ ರೀತಿಯಲ್ಲಿ ಕೈಗೊಂಡರೆ ಒಳಿತು ಎಂಬ ಬಗ್ಗೆ ತನಗೆ ಅರಿವಿದೆ.

(ಮೊದಲ ಪುಟದಿಂದ) ಅದರಂತೆ ಜಿಲ್ಲಾಧಿಕಾರಿ ಕಚೇರಿ ತಡೆಗೋಡೆ ಕಾಮಗಾರಿ ವಿಚಾರದಲ್ಲಿ ತಾನು ಕಾಮಗಾರಿ ನಡೆಸುವ ಬಗ್ಗೆ ಸಲಹೆಗಳನ್ನು ನೀಡಿದ್ದೆ. ಆದರೆ ಅಧಿಕಾರಿಗಳು ಕೇಳಲಿಲ್ಲ. ಈ ಹಿನ್ನೆಲೆಯಲ್ಲಿ ವಿಚಾರಣೆ ಕೈಗೊಳ್ಳಲಾಗುತ್ತದೆ ಎಂದು ಅಪ್ಪಚ್ಚು ರಂಜನ್ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಶಾಸಕ ಕೆ.ಜಿ. ಬೋಪಯ್ಯ ಅವರು ಮಾತನಾಡಿ ತಡೆಗೋಡೆ ನಿರ್ಮಾಣ ಸಂಬAಧ ಮಣ್ಣು ಪರೀಕ್ಷೆ ಮಾಡಬೇಕಿತ್ತಾದರೂ ಅದನ್ನ ಅಧಿಕಾರಿಗಳು ಮಾಡಿಲ್ಲ. ಈ ಹಿಂದೆ ಮಂಗಳೂರು ರಸ್ತೆ ಕಾಮಗಾರಿ ಮಾಡಿದ ಡಿಆರ್‌ಎನ್ ಕಂಪೆನಿಯ ತಜ್ಞರು ಜಿಲ್ಲಾಧಿಕಾರಿ ಕಚೇರಿ ತಡೆಗೋಡೆ ಕಾಮಗಾರಿ ವೀಕ್ಷಿಸಿ ಈ ತಂತ್ರಜ್ಞಾನದ ಕಾಮಗಾರಿ ಕೊಡಗಿನ ಮಳೆಗಾಲದಲ್ಲಿ ನಿಲ್ಲುವುದಿಲ್ಲ ಎಂದು ಹೇಳಿದರು. ತಾನು ಈ ವಿಚಾರವನ್ನು ಈ ಹಿಂದೆ ಜಿಲ್ಲಾಮಟ್ಟದ ಸಭೆಯಲ್ಲಿ ಕಾಂಗ್ರೆಸ್‌ನ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲೂ ಪ್ರಸ್ತಾಪ ಮಾಡಿದ್ದೆ ಎಂದು ತಿಳಿಸಿದರು. ಸಾಮಾನ್ಯ ಜ್ಞಾನವಿಲ್ಲದೆ ತಜ್ಞರಿಂದ ಇದೀಗ ತಪ್ಪಾಗಿದೆ. ಈ ಬಗ್ಗೆ ಉನ್ನತಮಟ್ಟದ ತನಿಖೆ ಆಗಬೇಕಿದೆ. ಕೋಟಿಗಟ್ಟಲೆ ಹಣವನ್ನು ನೀರಿಗೆ ಹಾಕಲು ಯಾರು ಕಾರಣರು ಎಂಬ ಬಗ್ಗೆ ತನಿಖೆ ನಡೆಸಿ ಸಂಬAಧಪಟ್ಟವರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಸಂಬAಧಿಸಿದವರ ಗಮನಕ್ಕೆ ತರಲಾಗಿದೆ ಎಂದು ಬೋಪಯ್ಯ ಹೇಳಿದರು.

ಈ ಸಂದರ್ಭ ಜಿಲ್ಲಾಧಿಕಾರಿ ಡಾ. ಬಿ.ಸಿ. ಸತೀಶ, ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಅಭಿಯಂತರ ನಾಗರಾಜು ಇನ್ನಿತರ ಅಧಿಕಾರಿಗಳು ಇದ್ದರು.