ಮಡಿಕೇರಿ, ಜು. ೧೭: ಕೊಡವ ಜನಾಂಗದ ಮಹಿಳೆಯರು ಹಾಗೂ ಕಾವೇರಿ ಮಾತೆಯ ಕುರಿತಾಗಿ ಸಾಮಾಜಿಕ ಜಾಲತಾಣದಲ್ಲಿ ಅವಹೇಳ ನಕಾರಿ ಸಂದೇಶ ಹರಿಯಬಿಟ್ಟು ವಿವಾದ ಸೃಷ್ಟಿಯಾಗಿದ್ದ ಪ್ರಕರಣವನ್ನು ಬಯಲಿಗೆಳೆಯುವಲ್ಲಿ ಪೊಲೀಸ್ ಇಲಾಖೆ ಯಶಸ್ವಿಯಾಗಿದೆ.ಮಾಹಿತಿ ತಂತ್ರಜ್ಞಾನದ ಸಹಕಾರದೊಂದಿಗೆ ಹಲವು ದಿನಗಳ ಕಾಲ ನಡೆದ ಪೊಲೀಸ್ ಕಾರ್ಯಾಚರಣೆ ಮೂಲಕ ಪ್ರಕರಣ ಬಹಿರಂಗಗೊAಡಿದೆ. ಅಚ್ಚರಿಯೆಂದರೆ ಕೊಡವ ಜನಾಂಗಕ್ಕೇ ಸೇರಿರುವ ೨೯ ವರ್ಷ ಪ್ರಾಯದ ಯುವಕನೋರ್ವ ಈ ಕೃತ್ಯದಲ್ಲಿ ಭಾಗಿಯಾಗಿರುವುದು ತನಿಖೆ ಮೂಲಕ ಹೊರಬಿದ್ದಿದ್ದು, ಇದೀಗ ಆತನನ್ನು ಬಂಧಿಸಲಾಗಿದೆ.ಪಾಲAಗಾಲ ಗ್ರಾಮದ ಕರಿನೆರವಂಡ ಪಿ. ದಿವಿನ್ ದೇವಯ್ಯ ಎಂಬ ಯುವಕ
ಇದೀಗ ಸಿಕ್ಕಿಬಿದ್ದಿ ದ್ದಾನೆ.ಈತ ಪೊನ್ನಣ್ಣ ಎಂಬವರ ಪುತ್ರನಾಗಿದ್ದಾನೆ.
ಈ ಅವಹೇಳನಕಾರಿ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ಬಳಿಕ ಜಿಲ್ಲೆಯಲ್ಲಿ ಭಾರೀ ವಿವಾದ ಸೃಷ್ಟಿಯಾಗಿತ್ತು. ಅನ್ಯ ಮತೀಯ ಯುವಕನೋರ್ವನ ಹೆಸರಿನಲ್ಲಿ ಈ ಸಂದೇಶ ರವಾನೆಯಾಗಿತ್ತು.
ಇದು ಬೆಳಕಿಗೆ ಬಂದೊಡನೆ ಈ ಬಗ್ಗೆ ತೀವ್ರ ಪ್ರತಿರೋಧ ವ್ಯಕ್ತಗೊಂಡಿತ್ತು. ಬಹುತೇಕ ಇಡೀ ಕೊಡವ ಸಮುದಾಯ, ಸಮಾಜ, ಸಂಘಟನೆಗಳು ಸೇರಿದಂತೆ ಜಿಲ್ಲೆಯ ಇತರ ಜಾತಿ ಜನಾಂಗದವರು, ರಾಜಕೀಯ ಪಕ್ಷಗಳು, ಪ್ರಮುಖರು, ಹಿಂದೂ ಸಂಘಟನೆಗಳು ಕೂಡ ಇದನ್ನು ಖಂಡಿಸಿದ್ದರು.
ಈ ಬಗ್ಗೆ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದೂರು ಸಲ್ಲಿಕೆಯಾಗಿತ್ತು. ಮಡಿಕೇರಿ ನಗರ ಠಾಣೆಯಲ್ಲಿ ಮೊದಲು ದಾಖಲಾಗಿದ್ದ ದೂರಿನಂತೆ ಎಫ್.ಐ.ಆರ್. ದಾಖಲಾಗಿತ್ತು. ಪ್ರಕರಣದ ತನಿಖೆ ಹಾಗೂ ಆರೋಪಿಯ ಬಂಧನ ವಿಳಂಬವಾಗುತ್ತಿದೆ ಎಂಬ ಆಕ್ಷೇಪದೊಂದಿಗೆ ಇದರ ವಿರುದ್ಧವಾಗಿ ಪ್ರತಿಭಟನೆಗೂ ನಿರ್ಧರಿಸಲಾಗಿತ್ತು.
ಇದೀಗ ಈ ವಿಚಾರವನ್ನು ಪೊಲೀಸ್ ಇಲಾಖೆ ಮಾಹಿತಿ ತಂತ್ರಜ್ಞಾನದ ಆಧಾರದಲ್ಲಿ ಸಮಗ್ರವಾದ ತನಿಖೆಯ ಮೂಲಕ ಹೊರಗೆಳೆಯುವಲ್ಲಿ ಯಶಸ್ವಿಯಾಗಿದೆ.
ಇದು ಸೈಬರ್ ಅಪರಾಧವಾಗಿದ್ದ ಹಿನ್ನೆಲೆಯಲ್ಲಿ ಅಂತರರಾಷ್ಟಿçÃಯ ಮಟ್ಟದ ಮೂಲಕ ತನಿಖೆ ನಡೆಸುವ ಅನಿವಾರ್ಯತೆ ಪೊಲೀಸ್ ಇಲಾಖೆಗೆ ಎದುರಾಗಿತ್ತು. ಈ ಸವಾಲಿನ ಕೆಲಸವನ್ನು ಕೊನೆಗೂ ಇಲಾಖೆ ಭೇದಿಸಿದ್ದು, ಇಲಾಖೆಯ ಬಗ್ಗೆ ಶ್ಲಾಘನೆ ವ್ಯಕ್ತಗೊಂಡಿದೆ.
ಕೊಡವ ಜನಾಂಗದವರೂ ಸೇರಿದಂತೆ ಹಲವರು ಪೊಲೀಸ್ ಇಲಾಖೆಯನ್ನು ಅಭಿನಂದಿಸಿದ್ದಾರೆ.
(ಮೊದಲ ಪುಟದಿಂದ) ಆರೋಪಿಯನ್ನು ಬಂಧಿಸಿರುವ ಪೊಲೀಸರು ಆತನಿಂದ ಕೃತ್ಯಕ್ಕೆ ಬಳಸಿರುವ ಮೊಬೈಲ್ ಅನ್ನು ವಶಕ್ಕೆ ಪಡೆದಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಆರೋಪಿ ದಿವಿನ್ ದೇವಯ್ಯನನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.
ಗೊಂದಲ ಸೃಷ್ಟಿಸಿದ್ದ ಪ್ರಕರಣ
ಈ ಪ್ರಕರಣ ಜಿಲ್ಲೆಯಲ್ಲಿ ಒಂದು ರೀತಿಯ ಗೊಂದಲಗಳಿಗೂ ಕಾರಣವಾಗಿತ್ತಲ್ಲದೆ ಹಲವಾರು ಸಂಶಯಗಳಿಗೂ ಎಡೆಯಾಗಿತ್ತು. ಈ ಬಗ್ಗೆ ತಾ. ೧೮ ರಂದು (ಇಂದು) ವೀರಾಜಪೇಟೆಯಲ್ಲಿ ಹಿಂದೂ ಸಂಘಟನೆಗಳು ಪ್ರತಿಭಟನಾ ಮೆರವಣಿಗೆಯನ್ನು ನಡೆಸಲು ನಿರ್ಧರಿಸಿದ್ದು, ಇದೀಗ ಇದನ್ನು ಕೈಬಿಡಲಾಗಿದೆ. ಕೊಡವ ಸಮಾಜ-ಸಂಘಟನೆಗಳು ತಾ. ೨೯ ರಂದು ಮಡಿಕೇರಿಯಲ್ಲಿ ಬೃಹತ್ ಪ್ರತಿಭಟನೆಗೆ ನಿರ್ಧರಿಸಿದ್ದು, ಈ ಬಗ್ಗೆ ಮುಂದೆ ಯಾವ ನಿಲುವು ಕೈಗೊಳ್ಳಲಿದ್ದಾರೆ ಎಂದು ಕಾದುನೋಡಬೇಕಿದೆ.