ಗೋಣಿಕೊಪ್ಪಲು, ಜು.೧೭: ತನ್ನ ಸ್ನೇಹಿತೆಯ ವ್ಯಾನಿಟಿ ಬ್ಯಾಗ್ನಲ್ಲಿದ್ದ ಮನೆಯ ಬೀಗದ ಕೀಯನ್ನು ಅವರಿಗೆ ಅರಿವು ಬಾರದ ರೀತಿಯಲ್ಲಿ ಕದ್ದು ನಂತರ ಆಕೆಯ ಮನೆಗೆ ತೆರಳಿ ಮನೆಯ ಬೀಗವನ್ನು ತೆಗೆದು ಮನೆಯ ಬೀರುವಿನಲ್ಲಿದ್ದ ೩೨ ಗ್ರಾಂ ಚಿನ್ನಾಭರಣ, ೧ ಲಕ್ಷ ನಗದು, ೧ ಲ್ಯಾಪ್ ಟಾಪ್ ಅನ್ನು ಕಳ್ಳತನ ಮಾಡಿ ಚಿನ್ನವನ್ನು ಮಾರಾಟ ಮಾಡುವ ವೇಳೆ ಪೊಲೀಸರಿಗೆ ಸಿಕ್ಕಿಬಿದ್ದ ಘಟನೆ ಪೊನ್ನಂಪೇಟೆಯಲ್ಲಿ ನಡೆದಿದೆ.
ಕಳ್ಳತನ ಮಾಡಿದ ದ.ಕೊಡಗಿನ ಬಾಳೆಲೆ ಹೋಬಳಿಯ ಕೈನಾಟಿ ಗ್ರಾಮದ ನಿವಾಸಿ ಎಂದು ತಿಳಿದುಬಂದಿದೆ.
ಶನಿವಾರ ಮಧ್ಯಾಹ್ನ ವೇಳೆ ಜೋಡುಬೀಟಿಯ ತನ್ನ ಆತ್ಮೀಯ ಸ್ನೇಹಿತಳ ಶಾಪ್ಗೆ ಬಂದ ಈ ಮಹಿಳೆ ಸ್ನೇಹಿತಳ ವ್ಯಾನಿಟಿ ಬ್ಯಾಗ್ಗೆ ಕೈ ಹಾಕಿ ಅದರಲ್ಲಿದ್ದ ಮನೆಯ ಬೀಗದ ಕೀಯನ್ನು ಎಗರಿಸಿ ನಂತರ ಪೊನ್ನಂಪೇಟೆ ಬಳಿ ಇರುವ ಸ್ನೇಹಿತಳ ಮನೆಗೆ ಕಾರಿನಲ್ಲಿ ತೆರಳಿ ಬಾಗಿಲು ತೆಗೆದು ಅಲ್ಲಿದ್ದ ಚಿನ್ನ ಹಾಗೂ ನಗದು ಹಣವನ್ನು ತೆಗೆದುಕೊಂಡು ಹೋಗಿದ್ದಾಳೆ.
ಇತ್ತ ಸ್ನೇಹಿತೆ ಸಹಜವಾಗಿಯೇ ಬ್ಯಾಗಿನಲ್ಲಿರುವ ಕೀಯನ್ನು ಪರಿಶೀಲಿಸಿದಾಗ ಮನೆಯ ಕೀ ವ್ಯಾನಿಟಿ ಬ್ಯಾಗ್ನಲ್ಲಿ ಇರಲಿಲ್ಲ. ಕೂಡಲೇ ಶಾಪ್ನಲ್ಲಿ ಅಳವಡಿಸಿದ್ದ ಸಿಸಿ ಕ್ಯಾಮರ ಪರಿಶೀಲನೆ ಮಾಡಿದಾಗ ಕೀ ಕಳ್ಳತನ ಮಾಡಿರುವ ಬಗ್ಗೆ ಮಾಹಿತಿ ದೊರೆತಿದೆೆ.ಕೂಡಲೇ ಮನೆಗೆ ಹೋಗಿ ನೋಡಿದಾಗ ಮನೆಯಲ್ಲಿ ಕಳ್ಳತನವಾಗಿರುವುದು ತಿಳಿದಿದೆ.
ಪೊನ್ನಂಪೇಟೆ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ದೂರು ದಾಖಲಿಸಿಕೊಂಡ ಠಾಣಾಧಿಕಾರಿ ಡಿ.ಕುಮಾರ್ ತನ್ನ ಸಹ ಸಿಬ್ಬಂದಿಗಳಿಗೆ ಆರೋಪಿ ಮಹಿಳೆಯ ಶೋಧ ಕಾರ್ಯ ನಡೆಸುವಂತೆ ಸೂಚನೆ ನೀಡಿದ್ದಾರೆ.
ಕಾರ್ಯಪ್ರವೃತ್ತರಾದ ಪೊಲೀಸರು ಸಿಸಿ ಕ್ಯಾಮರಾಗಳ ಮಾಹಿತಿ ಪಡೆದು ಕಾರ್ಯಾಚರಣೆ ಆರಂಭಿಸಿದರು.
ಚಿನ್ನ ಹಾಗೂ ನಗದು ಕದ್ದ ಮಹಿಳೆ ಚಿನ್ನವನ್ನು ಮಾರಾಟ ಮಾಡುವ ಸಲುವಾಗಿ ವೀರಾಜಪೇಟೆ ಪಟ್ಟಣಕ್ಕೆ ತೆರಳಿದ್ದಾಳೆ.
ಈ ಬಗ್ಗೆ ಮಾಹಿತಿ ತಿಳಿದ ಪೊಲೀಸರು ಈಕೆಯ ಇರುವಿಕೆಯನ್ನು ಖಚಿತಪಡಿಸಿಕೊಂಡು ವೀರಾಜಪೇಟೆ ಪಟ್ಟಣಕ್ಕೆ ತೆರಳಿದರು. ಈ ವೇಳೆ ಮಹಿಳೆಯನ್ನು ಪೊಲೀಸರು ಬಂಧಿಸಿದರು.
ಈಕೆಯನ್ನು ಪೋಲಿಸರು ವಶಕ್ಕೆ ಪಡೆಯುತ್ತಿದ್ದಂತೆಯೇ ಪೊಲೀಸರ ಮೇಲೆ ತನ್ನ ದರ್ಪ ತೋರಿದ್ದಾಳೆ. ಆದರೂ ಪೊಲೀಸರು ಠಾಣೆಗೆ ಕರೆತಂದು ವಿಚಾರ ಮಾಡಿದಾಗ ಆಕೆ ತಪ್ಪನ್ನು ಒಪ್ಪಿಕೊಂಡಿದ್ದಾಳೆ.
(ಮೊದಲ ಪುಟದಿಂದ) ತನ್ನ ಬಳಿ ಕಳ್ಳತನ ಮಾಡಿದ್ದ ೧ ಲಕ್ಷ ಹಣ, ೧ ಲ್ಯಾಪ್ ಟಾಪ್ ಹಾಗೂ ಕಳವು ಮಾಡಿದ್ದ ಸ್ವಲ್ಪ ಚಿನ್ನವನ್ನು ಮರಳಿಸಿದ್ದಾಳೆ. ಕೆಲವು ಆಭರಣಗಳನ್ನು ವಶಪಡಿಸಿಕೊಳ್ಳುವ ನಿಟ್ಟಿನಲ್ಲಿ ತನಿಖೆ ನಡೆಯುತ್ತಿದೆ.
ಡಿವೈಎಸ್ಪಿ ಮಾರ್ಗದರ್ಶನ, ಸಿಪಿಐ ಗೋವಿಂದ ರಾಜ್ ನಿರ್ದೇಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಠಾಣಾಧಿಕಾರಿಗಳಾದ ಡಿ.ಕುಮಾರ್, ಮನು, ಸ್ವಾಮಿ ಮುಂತಾದವರು ಹಾಜರಿದ್ದರು. - ಹೆಚ್.ಕೆ. ಜಗದೀಶ್