ಮಡಿಕೇರಿ, ಜು. ೧೭: ಜಿಲ್ಲೆಯಲ್ಲಿ ಕಳೆದ ಹಲವು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆ ಮುಂದುವರೆದಿದೆ. ವ್ಯಾಪಕ ಮಳೆಯಿಂದಾಗಿ ಹಲವಾರು ಕಡೆಗಳಲ್ಲಿ ಅನಾಹುತಗಳು - ಹಾನಿಗಳುಂಟಾ ಗುತ್ತಿದ್ದು, ಸಂಬAಧಿಸಿದ ಇಲಾಖೆಗಳು ಇದನ್ನು ಸರಿಪಡಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದೆ. ವಿದ್ಯುತ್ ಇಲಾಖೆಗೆ ಭಾರೀ ಸಮಸ್ಯೆ ಎದುರಾಗಿದ್ದು, ವಿದ್ಯುತ್ ವ್ಯವಸ್ಥೆ ಸರಿಪಡಿಸಲು ಸೆಸ್ಕ್ ಸಿಬ್ಬಂದಿಗಳು ಅವಿರತÀ ಶ್ರಮ ವಹಿಸಿದ್ದಾರೆ. ಸೆಸ್ಕ್ ಸಿಬ್ಬಂದಿಗಳಿಗೆ ಜಿಲ್ಲೆಯಲ್ಲಿ ಬೀಡುಬಿಟ್ಟಿರುವ ಎನ್ಡಿಆರ್ಎಫ್ನ ತಂಡದವರು ಸಹಕಾರ ನೀಡುತ್ತಿದ್ದಾರೆ. ನಿನ್ನೆ ಈ ತಂಡದ ಸಹಕಾರದೊಂದಿಗೆ ವೀರಾಜಪೇಟೆಯ ಸನಿಹದ ಬೇಟೋಳಿಯಲ್ಲಿ ಕಾರ್ಯಾಚರಣೆ ನಡೆದಿದೆ.
ಇನ್ನು ಹಲವಾರು ಕಡೆ ಬರೆಜರಿತ - ಮನೆಗಳು ಜಖಂಗೊಳ್ಳುತ್ತಿರು ವಂತಹ ಪ್ರಕರಣಗಳು ನಡೆಯುತ್ತಿದ್ದು, ಸ್ಥಳಕ್ಕೆ ವಿವಿಧ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ - ಪರಿಹಾರ ಕಾರ್ಯಕೈಗೊಳ್ಳುತ್ತಿದ್ದಾರೆ. ಪ್ರಸ್ತುತ ಸುರಿಯುತ್ತಿರುವ ಪುನರ್ವಸು ಮಳೆ ನಕ್ಷತ್ರ ಇನ್ನೂ ಎರಡು ದಿನಗಳ ಕಾಲ ಮುಂದುವರಿಯಲಿದ್ದು, ಈ ದಿನಗಳಲ್ಲೂ ಮಳೆ ಇದೇ ರೀತಿ ಮುಂದುವರಿಯುವ ಸಾಧ್ಯತೆಯಿದೆ. ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಮಳೆ - ಗಾಳಿಯ ಸನ್ನಿವೇಶ ಯಥಾಸ್ಥಿತಿ ಯಲ್ಲಿಯೇ ಮುಂದುವರಿದಿದೆ.
ಬಿದ್ದ ಮರ : ಮಹಿಳೆಗೆ ಗಾಯ
ಸಿದ್ದಾಪುರ : ಮರವೊಂದು ಮನೆಯ ಮೇಲೆ ಬಿದ್ದ ಪರಿಣಾಮ ಮಹಿಳೆಯ ತಲೆಗೆ ಗಾಯ ಗೊಂಡು ಪ್ರಾಣಾಪಾಯದಿಂದ ಪಾರಾದ ಘಟನೆ ಘಟ್ಟದಳ್ಳದಲ್ಲಿ ನಡೆದಿದೆ. ಬಾಡಗ ಬಾಣಂಗಾಲ ಗ್ರಾಮದ ಎಂ.ಸಿ. ಮುತ್ತಣ್ಣ ಅವರ ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿರುವ ರೈಟರ್ ನಂಜಪ್ಪ ಎಂಬವರ ವಾಸದ ಮನೆ ಮೇಲೆ ನಿನ್ನೆ ಬೃಹತ್ ಗಾತ್ರದ ಮರ ಬಿದ್ದ ಪರಿಣಾಮ ಮನೆ ಒಳಗಿದ್ದ ನಂಜಪ್ಪ ಅವರ ಪತ್ನಿ ಮೋಹಿನಿ ಎಂಬವರ ತಲೆಗೆ ಗಾಯವಾಗಿದೆ. ಗಾಯ ಗೊಂಡಿದ್ದ ಮೋಹಿನಿ ಅವರನ್ನು ಮಡಿಕೇರಿಯ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲಾಯಿತು. ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಸುಂಟಿಕೊಪ್ಪ ವ್ಯಾಪ್ತಿಯಲ್ಲಿ ಮನೆಗಳಿಗೆ ಹಾನಿ
ಸುಂಟಿಕೊಪ್ಪ: ಗಾಳಿ ಮಳೆಯ ರಭಸದಿಂದ ಸುಂಟಿಕೊಪ್ಪ ಹೋಬಳಿಯಲ್ಲಿ ಮರ, ವಿದ್ಯುತ್ ಕಂಬ ಧರೆಗೆ ಉರುಳುತ್ತಿದ್ದು, ಮನೆ, ರಸ್ತೆ, ಸೇತುವೆಗೆ ಹಾನಿಯಾದ ಘಟನೆ ನಡೆದಿದೆ. ಮಳೆಯಿಂದ ನದಿ, ಹೊಳೆ, ತೊರೆ, ಕಾಲುವೆ ತುಂಬಿ ಹರಿಯುತ್ತಿವೆ. ಮನೆ - ಗದ್ದೆಯ ಪ್ರದೇಶದಲ್ಲಿ ಜಲ ಉಕ್ಕಿ ಬರುತ್ತಿದ್ದು, ಚಳಿ, ಶೀತ, ಗಾಳಿಯಿಂದ ದನ, ಕರುಗಳು, ಸಾಕು ಪ್ರಾಣಿಗಳು ಅಸ್ವಸ್ಥಗೊಂಡಿವೆ.
ಗ್ರಾಮೀಣ ಪ್ರದೇಶದ ರಸ್ತೆಗಳು ಮಳೆಯಿಂದ
(ಮೊದಲ ಪುಟದಿಂದ) ಗುಂಡಿ ಬಿದ್ದಿದ್ದು ವಾಹನ ಸಂಚಾರ ಹಾಗೂ ಜನರು ನಡೆದಾಡಲು ಸಾಧ್ಯವಾಗದ ಪರಿಸ್ಥಿತಿ ಸೃಷ್ಟಿಯಾಗಿದೆ. ಕಾಫಿ ತೋಟ, ರಸ್ತೆ ಬದಿಯಲ್ಲಿ, ಸ್ವಸ್ಥಶಾಲೆ, ಕೆಂಚೆಟ್ಟಿ, ಗುಂಡುಗುಟ್ಟಿ, ಮಾದಾಪುರ, ಹರದೂರು, ನಾಕೂರು ಶಿರಂಗಾಲ, ಕೊಡಗರಹಳ್ಳಿ, ಕಂಬಿಬಾಣೆ, ಕೆದಕಲ್, ಹೊರೂರು, ಚೆಟ್ಟಳ್ಳಿ, ಭೂತನಕಾಡು, ಮತ್ತಿಕಾಡು, ತೊಂಡೂರು, ಹೊಸಕೋಟೆ ವಿಭಾಗದಲ್ಲಿ ಮರಗಳು ಧರೆಗೆ ಉರುಳಿ ಬಿದ್ದಿವೆ. ವಿದ್ಯುತ್ ಕಂಬ, ತಂತಿಗಳು, ಟ್ರಾನ್ಸ್ಫಾರಂಗಳ ಮೇಲೆ ಮರ ಬಿದ್ದು ಹಾನಿಯಾಗಿದೆ. ಸೆಸ್ಕ್ ಇಲಾಖಾ ಸಿಬ್ಬಂದಿಗಳು ಹಗಲು ರಾತ್ರಿ ವಿದ್ಯುತ್ ಕಂಬ, ತಂತಿಯನ್ನು ಸರಿಪಡಿಸಿ ಜನಸಾಮಾನ್ಯರಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಹರಸಾಹಸ ಪಡುತ್ತಿರುವುದು ಕಾಣಬಹುದಾಗಿದೆ. ಕೊಡಗರಹಳ್ಳಿ ಗ್ರಾಮದ ಬೋಜಮ್ಮ ಎಂಬವರ ಮನೆಗೆ ಮರ ಬಿದ್ದು ಹಾನಿಯಾಗಿದ್ದು, ೩೦,೦೦೦ ರೂ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ. ಸ್ಥಳಕ್ಕೆ ಕಂದಾಯ ಪರಿವೀಕ್ಷಕ ಪ್ರಶಾಂತ್ ಹಾಗೂ ಗ್ರಾಮ ಲೆಕ್ಕಿಗರಾದ ರೂಪಶ್ರೀ ಕಂದಾಯ ಸಹಾಯಕರು ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಸುಂಟಿಕೊಪ್ಪ ನಾರ್ಗಾಣೆ ಗ್ರಾಮದಲ್ಲಿ ಕೆಲವು ಮನೆಗಳಿಗೆ ತೋಡುನೀರು, ಮಳೆ ನೀರು ನುಗ್ಗಿ ಮನೆಯ ಗೃಹೋಪಯೋಗಿ ವಸ್ತುಗಳು ಹಾನಿಗೊಂಡಿದ್ದರೆ, ಮತ್ತೊಂದೆಡೆ ವಿಪರೀತ ಮಳೆಯ ನಡುವೆಯೂ ಅನ್ನದಾತರಾದ ರೈತರು ಗದ್ದೆ ಉಳುಮೆ ಮಾಡಿ ಹದಗೊಳಿಸಿ ಭತ್ತದ ಬಿತ್ತನೆ ಬೀಜ ಕಾಯಕದಲ್ಲಿ ತೊಡಗಿಸಿಕೊಂಡಿದ್ದಾರೆ.
ಸುಂಟಿಕೊಪ್ಪ ಕಂದಾಯ ವ್ಯಾಪ್ತಿಯಲ್ಲಿ ೧೨ ಕ್ಕೂ ಮಿಕ್ಕಿ ಮನೆಗಳು ಗಾಳಿ ಮಳೆಯಿಂದ ಹಾನಿಗೀಡಾಗಿವೆ. ಅಪಾಯದ ಅಂಚಿನಲ್ಲಿದ್ದ ಮನೆಗಳನ್ನು ಪರಿಶೀಲಿಸಿ ಕುಟುಂಬಗಳು ಸ್ಥಳಾಂತರಗೊಳ್ಳುವAತೆ ಸೂಚಿಸಲಾಗಿದೆ ಎಂದು ಕಂದಾಯ ಪರಿವೀಕ್ಷಕ ಪ್ರಶಾಂತ್ ತಿಳಿಸಿದ್ದಾರೆ.
ನಾಪೋಕ್ಲು: ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಶೌರ್ಯ ಸ್ವಯಂಸೇವಕರು ಸಮೀಪದ ಬೇತು ಗ್ರಾಮದಲ್ಲಿ ಸೇವಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. ಗ್ರಾಮದ ಕುಟ್ಟಂಜೆಟ್ಟೀರ ಮಂದ್ ಬಳಿ ಮುಖ್ಯ ರಸ್ತೆಯಲ್ಲಿ ಸತತ ಮಳೆಯಿಂದ ಜಲಹುಟ್ಟಿ ಚರಂಡಿಯಲ್ಲಿ ನೀರು ಹರಿದು ಹೋಗುತ್ತಿರಲಿಲ್ಲ. ಮಳೆ ನೀರು ಸಂಪೂರ್ಣವಾಗಿ ರಸ್ತೆಯಲ್ಲಿ ಹರಿಯುತ್ತಿದ್ದು ವಾಹನ ಸಂಚಾರಕ್ಕೆ ಅಡಚಣೆಯಾಗಿತ್ತು. ನಾಪೋಕ್ಲು ಶೌರ್ಯ ತಂಡದ ಸದಸ್ಯರು ಚರಂಡಿ ನಿರ್ಮಿಸಿ ನೀರು ಸರಾಗವಾಗಿ ಹರಿದುಹೋಗುವಂತೆ ಮಾಡಿದರು.
ಸೇವಾಕಾರ್ಯದಲ್ಲಿ ಲಕ್ಷಿö್ಮÃಕಾಂತ್, ದೇವಯ್ಯ, ಮೇದಪ್ಪ, ತಮ್ಮಯ್ಯ, ನವೀನ್, ಚಿಮ್ಮಣ್ಣ, ಪಾಲ್ಗೊಂಡಿದ್ದರು. ಶೌರ್ಯತಂಡದ ಸದಸ್ಯರು ಪ್ರತಿದಿನ ಒಂದಲ್ಲಾ ಒಂದು ಸೇವಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದು ಜನಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಕರಿಕೆ: ಗ್ರಾಮದಲ್ಲಿ ನಿರಂತರ ಭೂಕಂಪನದ ಪರಿಣಾಮ ಭೂಮಿಯಲ್ಲಿ ಬಿರುಕು ಕಾಣಿಸಿಕೊಂಡು ಆತಂಕದ ಪರಿಸ್ಥಿತಿ ಉಂಟಾಗಿದೆ. ಇಲ್ಲಿಗೆ ಸಮೀಪದ ಪಚ್ಚೆಪಿಲಾವು ಹೆಚ್.ಎಂ. ಕೇಶವ ಎಂಬವರ ಮನೆ ಹಿಂಭಾಗದ ಬರೆಯಲ್ಲಿ ಮೂರ್ನಾಲ್ಕು ಕಡೆ ದೊಡ್ಡ ಪ್ರಮಾಣದಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಬರೆ ಕುಸಿದಲ್ಲಿ ಮನೆಗೆ ಅಪಾಯ ಎದುರಾಗುವ ಸಾಧ್ಯತೆ ಇದೆ. ಭೂಮಿ ಕಂಪಿಸಿದ ಪರಿಣಾಮ ಈ ರೀತಿ ಆಗಿದೆ ಎಂದು ಅವರು ಸಂಶಯ ವ್ಯಕ್ತ ಪಡಿಸಿದ್ದಾರೆ.
ಸೋಮವಾರಪೇಟೆ: ಸೋಮವಾರಪೇಟೆ-ಕೊಣನೂರು ರಾಜ್ಯ ಹೆದ್ದಾರಿಯ ತಣ್ಣೀರುಹಳ್ಳ-ಅಬ್ಬೂರುಕಟ್ಟೆ ನಡುವಿನ ರಸ್ತೆ ಮಧ್ಯೆ ಬೀಟೆ ಮರವೊಂದು ರಸ್ತೆಗೆ ಅಡ್ಡಲಾಗಿ ಬಿದ್ದು ಕೆಲಕಾಲ ರಾಜ್ಯ ಹೆದ್ದಾರಿಯಲ್ಲಿ ವಾಹನಗಳ ಸಂಚಾರ ಬಂದ್ ಆಗಿತ್ತು. ಇಂದು ಸಂಜೆ ೬.೩೦ರ ಸುಮಾರಿಗೆ ಅಬ್ಬೂರುಕಟ್ಟೆ ತೋಟವೊಂದರ ಬೀಟೆ ಮರವೊಂದು ಮಳೆ ಗಾಳಿಗೆ ರಸ್ತೆಗೆ ಅಡ್ಡಲಾಗಿ ಬಿದ್ದ ಹಿನ್ನೆಲೆ ವಾಹನಗಳ ಸಂಚಾರ ಸ್ಥಗಿತಗೊಂಡಿತ್ತು. ಸ್ಥಳೀಯರ ಸಹಕಾರದಿಂದ ಮರವನ್ನು ತೆರವುಗೊಳಿಸಿ, ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.ನಾಪೋಕ್ಲು: ಹೋಬಳಿ ವ್ಯಾಪ್ತಿಯಲ್ಲಿ ಭಾನುವಾರ ಮಳೆಯ ಅಬ್ಬರ ತಗ್ಗಿದ್ದು ಜಲಾವೃತವಾದ ರಸ್ತೆಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗುತ್ತಿದೆ. ನಾಪೋಕ್ಲು ಮೂರ್ನಾಡು ಸಂಪರ್ಕ ರಸ್ತೆಯ ಬೊಳಿಬಾಣೆಯಲ್ಲಿ ರಸ್ತೆಯ ಮೇಲೆ ನೀರು ಹರಿಯುತ್ತಿದೆ. ಸತತವಾಗಿ ಸುರಿದ ಮಳೆಯಿಂದ ಅಲ್ಲಲ್ಲಿ ಹಾನಿ ಸಂಭವಿಸಿದ್ದು ಬಲ್ಲಮಾವಟಿ ಗ್ರಾಮಪಂಚಾಯಿತಿಯ ದೊಡ್ಡಪುಲಿಕೋಟು ಗ್ರಾಮದ ಮಣವಟ್ಟಿರ ಕುಟ್ಟಪ್ಪ ಅವರ ನೂತನ ಮನೆಯ ಹಿಂಭಾಗದ ಬರೆ ಕುಸಿದು ನಷ್ಟ ಸಂಭವಿಸಿದೆ.
ಮಣ್ಣು ಬಿದ್ದ ಪರಿಣಾಮ ಕಾಫಿ ಗಿಡಗಳಿಗೆ ಹಾನಿಯಾಗಿದೆ. ಈ ವ್ಯಾಪ್ತಿಯಲ್ಲಿ ಬಿರುಸಿನ ಮಳೆಯಾಗಿದ್ದು, ಮಳೆಗಾಳಿಗೆ ಹಲವೆಡೆ ಕಾಫಿ ಕಾಯಿಗಳು ಉದುರಿ ನಷ್ಟ ಸಂಭವಿಸಿದೆ. ವಿದ್ಯುತ್ ಕಂಬಗಳು ಮುರಿದು ಬಿದ್ದು ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿದ್ದು, ಸೆಸ್ಕ್ ಸಿಬ್ಬಂದಿಗಳ ಪ್ರಯತ್ನದಿಂದ ಗ್ರಾಮೀಣ ಪ್ರದೇಶಗಳಿಗೆ ಇಂದು ವಿದ್ಯುತ್ ಸಂಪರ್ಕ ಒದಗಿಸಲಾಗಿದೆ. ಮಡಿಕೇರಿ: ಚೆಟ್ಟಿಮಾನಿ ಸಮೀಪದ ಪದಕಲ್ಲು ಗ್ರಾಮದಲ್ಲಿ ಭಾರೀ ಮಳೆ ಹಿನ್ನೆಲೆ ಕಾಫಿ ಫಸಲು ಉದುರಿ ನಷ್ಟ ಸಂಭವಿಸಿದೆ. ಜೊತೆಗೆ ಕಾಳುಮೆಣಸು ಬಳ್ಳಿಗಳಿಗೆ ಕೊಳೆ ರೋಗ ಬಾಧಿಸಿದೆ. ಇದರಿಂದ ಕೃಷಿಕರು ಹೈರಾಣಾಗಿದ್ದಾರೆ.
ವರದಿ: ರಾಜು ರೈ, ದುಗ್ಗಳ ಸದಾನಂದ, ವಾಸು, ವಿಜಯ್, ಸುಧೀರ್ ಹೊದ್ದೆಟ್ಟಿ, ಶಿವಗಿರಿ ರಾಜೇಶ್