ಮಡಿಕೇರಿ, ಜು. ೧೮: ಲಂಚಕ್ಕೆ ಬೇಡಿಕೆಯೊಡ್ಡಿದ್ದ ನಗರದ ಜಿಲ್ಲಾ ಖಜಾನೆಯ ಪ್ರಥಮ ದರ್ಜೆ ಸಹಾಯಕನನ್ನು ಭ್ರಷ್ಟಾಚಾರ ನಿಗ್ರಹ ದಳ ಬಂಧಿಸಿದೆ.
ರವಿಕುಮಾರ್ ಎಂ.ಎ. ಬಂಧಿತ ಸರಕಾರಿ ನೌಕರ. ಇತ್ತೀಚೆಗೆ ಕುಶಾಲನಗರ ಸರ್ವೆ ಅಧೀಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಅಧಿಕಾರಿಯೋರ್ವರು ತಮ್ಮ ನಿವೃತ್ತಿ ವೇತನ ಪಡೆಯಲು ಖಜಾನೆಗೆ ತೆರಳಿದ ಸಂದರ್ಭ ಕಡತ ವಿಲೇವಾರಿಗೆ ರವಿಕುಮಾರ್ ರೂ. ೭ ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ. ನಂತರ ರೂ. ೫ ಸಾವಿರ ನೀಡುವಂತೆ ತಿಳಿಸಿದ್ದು, ದೂರುದಾರರು ಎ.ಸಿ.ಬಿ. ಠಾಣೆಗೆ ದೂರು ನೀಡಿದ್ದಾರೆ.
ನಂತರ ಟ್ರಾö್ಯಪ್ ಕಾರ್ಯಾಚರಣೆ ಮೂಲಕ ರೂ. ೫ ಸಾವಿರ ಲಂಚವನ್ನು ಸ್ವೀಕರಿಸುವ ವೇಳೆ ಎ.ಸಿ.ಬಿ. ಬಲೆಗೆ ಬಿದ್ದಿದ್ದಾರೆ. ಬಳಿಕ ಆರೋಪಿಯನ್ನು ವಶಕ್ಕೆ ಪಡೆದು ಹಣವನ್ನು ವಶಕ್ಕೆ ಪಡೆದು ತನಿಖೆ ಕೈಗೊಳ್ಳಲಾಗಿದೆ.
ಎ.ಸಿ.ಬಿ. ವಿಭಾಗದ ಡಿ.ವೈ.ಎಸ್.ಪಿ. ರಾಜೇಂದ್ರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಉಪನಿರೀಕ್ಷಕ ಕುಮಾರ್, ಮುಖ್ಯಪೇದೆ ವಸಂತ್, ಪೇದೆಗಳಾದ ಸಜನ್, ಲೋಹಿತ್, ಪ್ರವೀಣ್, ದೀಪಿಕಾ, ಚಾಲಕರಾದ ವಿಶ್ವನಾಥ್ ಹಾಗೂ ಸುರೇಶ್ ಭಾಗವಹಿಸಿದ್ದರು.