ಮಡಿಕೇರಿ, ಜು. ೧೬: ಭಾರೀ ಮಳೆಗೆ ಜಿಲ್ಲೆಯ ವಿವಿಧೆಡೆ ಬರೆ, ಮರ ಕುಸಿತಗೊಳ್ಳುತ್ತಿವೆ. ಕೆಲವು ಕಡೆಗಳಲ್ಲಿ ಬಂಡೆಗಳು ಉರುಳಿ ಬಿದ್ದಿವೆ., ಮನೆಗಳು ಕುಸಿತಕ್ಕೊಳಗಾಗಿವೆ. ಆದರೆ., ಇಲ್ಲಿ ಭೂಮಿಯೇ ಸುಮಾರು ಹನ್ನೆರಡು ಅಡಿಗಳಷ್ಟು ಕುಸಿದು ಹೋಗಿದೆ. ಗಿಡ-ಮರಗಳ ಸಹಿತ ಭೂಮಿ ಕುಸಿದಿರುವದು ಅಚ್ಚರಿಯೊಂದಿಗೆ ಆತಂಕ ಸೃಷ್ಟಿಸಿದೆ. ಕಳೆದ ೨೦೧೮, ೧೯, ೨೦ರಲ್ಲಿ ಹಲವೆಡೆ ಭೂಮಿ ಕುಸಿದು ಕೊಚ್ಚಿಹೋಗಿತ್ತು. ಆದರೆ ಇಲ್ಲಿ ಎಲ್ಲಿಯೂ ಕೊಚ್ಚಿಹೋಗದೆ ಇದ್ದಲ್ಲಿಯೇ ಇದ್ದಕ್ಕಿದ್ದ ಹಾಗೆ ಕುಸಿದು ನಿಂತಿದೆ. ಇದೇ ಪ್ರಥಮ ಬಾರಿಗೆ ಈ ರೀತಿಯಾಗಿ ಕುಸಿತಗೊಂಡಿರುವದು ಭೀತಿಯನ್ನುಂಟುಮಾಡಿದೆ.
ಮಡಿಕೇರಿ ಸನಿಹದ ಮದೆ ಗ್ರಾ.ಪಂ. ವ್ಯಾಪ್ತಿಯ ಕಾಟಕೇರಿ ಎಂಬಲ್ಲಿ ಭೂಮಿ ತಾನಾಗಿಯೇ ಕುಸಿದು ಭೂಮಿಯೊಳಗಡೆ ಹುದುಗಿ ಹೋಗುತ್ತಿರುವದು ಆತಂಕ ಮೂಡಿಸಿದೆ. ಕಾಟಕೇರಿ ಗ್ರಾಮ ನಿವಾಸಿ ಚಿಮ್ಮಂಡ ಬೋಪಯ್ಯ ಅವರ ಮನೆಯ ಸನಿಹದಲ್ಲೇ ಇದ್ದಕ್ಕಿದ್ದ ಹಾಗೆ ಭೂಮಿ ಸುಮಾರು ೧೨ ಅಡಿಗಳಷ್ಟು ಆಳಕ್ಕೆ ಕುಸಿದಿದೆ. ನಾಲ್ಕು ದಿನಗಳ ಹಿಂದೆ ಸ್ವಲ್ಪ ಕುಸಿದಿದ್ದುದು ಇದೀಗ ೧೨ ಅಡಿಗಳಷ್ಟು ಆಳಕ್ಕೆ ಕುಸಿದಿದೆ. ಸುಮಾರು ಅರ್ಧ ಎಕರೆಯಷ್ಟು ಪ್ರದೇಶದಲ್ಲಿ ಕಾಫಿ ಗಿಡಗಳ ಸಹಿತ ಅಡಿಕೆ ಮರ, ಬಾಳೆ ಸೇರಿದಂತೆ ಕಾಡುಮರಗಳು ಕುಸಿದು ನಿಂತಿವೆ. ಬಹುಶಃ ಭೂಮಿಯೊಳಗಡೆ ಜಲ ನೀರು ಹರಿದು ಹೋಗುತ್ತಿರು ವದರಿಂದ ಈ ರೀತಿ ಕುಸಿದಿರ ಬಹುದೆಂಬ ಮಾತುಗಳು ಕೇಳಿ ಬರುತ್ತಿವೆ. ಭೂ ವಿಜ್ಞಾನಿಗಳು ಭೇಟಿ ನೀಡಿ, ಪರಿಶೀಲಿಸಿ ಸತ್ಯಾಸತ್ಯತೆಯನ್ನು ತಿಳಿಯಪಡಿಸಬೇಕಿದೆ.
(ಮೊದಲ ಪುಟದಿಂದ)
೨೦೧೮ರಲ್ಲಿ ಸ್ವಲ್ಪ ಕುಸಿದಿತ್ತು, ಈ ಬಾರಿ ತುಂಬಾ ಕುಸಿದಿರುವದಾಗಿ ಬೋಪಯ್ಯ ಹೇಳುತ್ತಾರೆ. ಬೋಪಯ್ಯ ಅವರು ತಮ್ಮ ಮನೆಯ ಎದುರು ಭಾಗವನ್ನು ನವೀಕರಿಸುತ್ತಿದ್ದು, ಇದೀಗ ಮನೆಯ ಸನಿಹದಿಂದಲೇ ಭೂಮಿ ಕುಸಿದಿದೆ. ಮನೆ ಅಪಾಯದ ಸ್ಥಿತಿಯಲ್ಲಿದೆ.
ರೂ.೧೫ ಲಕ್ಷ ವೆಚ್ಚದಲ್ಲಿ ಮನೆ ನವೀಕರಿಸಲು ಗುತ್ತಿಗೆ ನೀಡಲಾಗಿತ್ತು. ಈಗಾಗಲೇ ರೂ.೭.೫೦ಲಕ್ಷದಷ್ಟು ವೆಚ್ಚವಾಗಿದೆ. ಇನ್ನು ಈ ಮನೆ ಕೆಲಸಕ್ಕೆ ಕೈ ಹಾಕುವದಿಲ್ಲ. ಸದ್ಯಕ್ಕೆ ತಾಳತ್ತಮನೆಯಲ್ಲಿ ಬಾಡಿಗೆಗೆ ಮನೆ ಪಡೆದುಕೊಂಡಿದ್ದು, ಅಲ್ಲಿ ನೆಲೆಸಿದ್ದೇವೆ. ಪರ್ಯಾಯ ಮನೆ ಹಾಗೂ ಪರಿಹಾರಕ್ಕಾಗಿ ಪಂಚಾಯ್ತಿ ಹಾಗೂ ಕಂದಾಯ ಇಲಾಖೆಗೆ ಅರ್ಜಿ ಸಲ್ಲಿಸಿರುವದಾಗಿ ಬೋಪಯ್ಯ ಹೇಳಿದರು. ನಾಲ್ಕು ದಿನಗಳ ಹಿಂದೆ ರಾತ್ರಿ ವೇಳೆ ಸ್ವಲ್ಪ ಕುಸಿದಿತ್ತು. ಬೆಳಿಗ್ಗೆ ನೋಡುವಾಗ ಕುಸಿದಿರುವದು ಗೋಚರಿಸಿತು. ಮಧ್ಯಾಹ್ನದ ವೇಳೆಗೆ ಸುಮಾರು ಹನ್ನೆರಡು ಅಡಿಗಳಷ್ಟು ಆಳಕ್ಕೆ ಕುಸಿದಿದೆ. ಕುಸಿಯುವ ಸಂದರ್ಭದಲ್ಲಿ ಯಾವದೇ ರೀತಿಯ ಶಬ್ಧ ಬರಲಿಲ್ಲ. ಕುಸಿದಿರುವದು ಗೊತ್ತೇ ಆಗಲಿಲ್ಲ ಎಂದು ಬೊಪಯ್ಯ ದಂಪತಿಯರು ತಿಳಿಸಿದರು.
ಮನೆಯಲ್ಲಿ ಬೋಪಯ್ಯ, ತನ್ನ ವಯಸ್ಸಾದ ತಂದೆ, ತಾಯಿ, ಪತ್ನಿ, ಮೂರೂವರೆ ವರ್ಷದ ಪುಟ್ಟ ಮಗುವಿನೊಂದಿಗೆ ವಾಸವಿದ್ದರು. ಅದೃಷ್ಟವಶಾತ್ ಯಾವದೇ ಅಪಾಯ ಸಂಭವಿಸಿಲ್ಲ. ಭೂ ಕುಸಿತವಾದ ಸ್ಥಳದಿಂದ ಮನೆಯ ಸಮೀಪದಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಅಪಾಯದ ಪರಿಸ್ಥಿತಿ ಕಂಡುಬರುತ್ತಿದೆ. ಸದ್ಯಕ್ಕೆ ಕುಸಿತವಾದ ಸ್ಥಳದಲ್ಲಿ ಟಾರ್ಪಲ್ ಹೊದಿಸಲಾಗಿದ್ದು, ಮಳೆ ಇದೇ ರೀತಿ ಮುಂದುವರಿದರೆ ಅಪಾಯ ಸಂಭವಿಸುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಸ್ಥಳಕ್ಕೆ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ, ಗ್ರಾಮ ಲೆಕ್ಕಿಗರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.