ಕಣಿವೆ, ಜು. ೧೬: ಮಳೆಗಾಲದ ಮಳೆಯನ್ನು ಲೆಕ್ಕಿಸದೇ ರಾತ್ರಿ ಹಗಲು ಎನ್ನದೆ ಕರ್ತವ್ಯ ನಿರ್ವಹಿಸುವ ಪೊಲೀಸ್ ಸಿಬ್ಬಂದಿಗಳು ವಾಸವಿರುವ ಮನೆಗಳು ಮಳೆಗೆ ಸೋರುತ್ತಿವೆ.
ಮನೆಯ ಸೂರಿನಿಂದ ಸೋರುತ್ತಿರುವÀ ಮಳೆಯ ಹನಿ ತಡೆಯಲು ಪೇದೆಗಳ ಕುಟುಂಬ ಸದಸ್ಯರು ಮನೆಯೊಳಗೆ ಅಲ್ಲಲ್ಲಿ ಪಾತ್ರೆಗಳನ್ನು ಇಟ್ಟು ಮನೆ ಶೀತವಾಗ ದಂತೆ ಮತ್ತು ಮನೆಯೊಳಗೆ ಮಳೆಯ ನೀರು ಬಾರದಿರಲು ಹರಸಾಹಸ ಪಡುವ ಸ್ಥಿತಿ ಸೃಷ್ಟಿಯಾಗಿದೆ.ಕುಶಾಲನಗರ ಪೊಲೀಸ್ ಠಾಣೆಯ ಸರಹದ್ದಿನಲ್ಲಿ ಇರುವ ಪೊಲೀಸ್ ಸಿಬ್ಬಂದಿಗಳ ವಸತಿ ಗೃಹಗಳು ಹದಗೆಟ್ಟಿವೆ. ಎಲ್ಲವೂ ಶಿಥಿಲಾವಸ್ಥೆ ತಲುಪಿದ್ದು ಕುಸಿಯುವ ಹಂತ ತಲುಪಿವೆ. ಹಾಗಿದ್ದರೂ ಕೂಡ ಠಾಣೆಯ ಸನಿಹ ಇರುವ ಈ ಅವ್ಯವಸ್ಥೆಯ ವಸತಿ ಗೃಹಗಳಲ್ಲಿ ವಾಸವಿರುವ ಪೇದೆಗಳು ಸಂಕಷ್ಟದಲ್ಲಿ ವಾಸಿಸುತ್ತಿದ್ದಾರೆ. ಬ್ರಿಟಿಷರ ಕಾಲದಲ್ಲಿ ನಿರ್ಮಾಣ ವಾಗಿದ್ದ ಈ ವಸತಿ ಗೃಹಗಳು ಸರಿಯಾದ ನಿರ್ವಹಣೆ ಇಲ್ಲದ ಕಾರಣ ಶಿಥಿಲಾವಸ್ಥೆ ತಲುಪಿ ದಶಕಗಳೇ ಕಳೆದಿವೆ. ಗೋಡೆಗಳು ಶಿಥಿಲಗೊಂಡಿವೆ. ಹಳೆಯದಾದ ಮನೆಗಳ ಸೂರುಗಳು ಸೋರುತ್ತಿವೆ.
ಹಾಗಾಗಿ ಮನೆಯೊಳಗಿನ ಗೋಡೆಗಳು ಕೂಡ ನೀರು ಕುಡಿದು ಶೀತಗೊಂಡು ಕುಸಿಯಲು ದಿನ ಎಣಿಸುತ್ತಿವೆ. ಹಗಲು-ರಾತ್ರಿ ಕಷ್ಟಪಟ್ಟು ಟ್ರಾಫಿಕ್ ವ್ಯವಸ್ಥೆ ಸುಗಮಗೊಳಿಸಲು ಹೆಣಗಾಡುವ ಪೊಲೀಸ್ ಸಿಬ್ಬಂದಿಗಳು, ರಾತ್ರಿ ವೇಳೆ ಪಟ್ಟಣ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ಕಳ್ಳತನ ಅಥವಾ ಕಾನೂನು ಬಾಹಿರ ಕೃತ್ಯಗಳು ನಡೆಯದಂತೆ ನಿದ್ದೆ ಬಿಟ್ಟು ಕಾಯಕ ಮಾಡುವ ಪೇದೆಗಳು ಬಿಡುವಿನ ತಮ್ಮ ಅವಧಿಯನ್ನು ಬೆಚ್ಚಗಿನ ಮನೆಯೊಳಗೆ ಕಳೆಯಲು ಆಗುತ್ತಿಲ್ಲ.
ಹಳೆಯದಾದ ಗೋಡೆಗಳು ನೀರು ಕುಡಿದು ಗೋಡೆಗಳಿಂದಲೂ ನೀರು ತೊಟ್ಟಿಕ್ಕಿದರೆ, ಅತ್ತ ಸೂರಿನ ಕಳೆಗೂ ಮಳೆಯ ನೀರು ಹರಿಯುತ್ತಿದೆ. ಕೆಲವು ಸಿಬ್ಬಂದಿಗಳು ತಾವು ವಾಸವಿರುವ ಇಲಾಖಾ ವಸತಿ ಗೃಹಗಳಿಗೆ ತಮ್ಮದೇ ಹಣ ವ್ಯಯಿಸಿ ಸಣ್ಣ ಪುಟ್ಟ ರಿಪೇರಿ ಅಥವಾ ದುರಸ್ಥಿ ಮಾಡಿಕೊಂಡಿದ್ದಾರೆ.
ಇನ್ನು ಕೆಲವರು ವಸತಿ ಗೃಹದ ಸಹವಾಸವೇ ಬೇಡ ಅಂದುಕೊAಡು ಬಾಡಿಗೆ ದುಪ್ಪಟ್ಟು ಹಣ ಕೊಟ್ಟು ಬಾಡಿಗೆ ಮನೆಗಳಲ್ಲಿ ವಾಸವಿದ್ದಾರೆ. ಇನ್ನು ಎಎಸ್ಐ ಹಂತದಿAದ ಡಿವೈಎಸ್ಪಿ ಹುದ್ದೆಗಳ ಅಧಿಕಾರಿಗಳು ಕೂಡ ಬಾಡಿಗೆ ಮನೆಗಳಲ್ಲೇ ವಾಸವಿದ್ದಾರೆ.
ಕುಶಾಲನಗರ ತಾಲೂಕಿನ ಗ್ರಾಮಾಂತರ ಠಾಣೆ, ಸಂಚಾರಿ ಠಾಣೆ, ನಗರ ಠಾಣೆ, ವೃತ್ತ ನಿರೀಕ್ಷಕರ ಕಚೇರಿ ಹಾಗೂ ಡಿವೈಎಸ್ಪಿ ಕಚೇರಿಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನೂರಕ್ಕು ಅಧಿಕ ಪೇದೆಗಳು ಹತ್ತಕ್ಕು ಅಧಿಕ ಮಂದಿ ಅಧಿಕಾರಿಗಳು ನೆಮ್ಮದಿಯಿಂದ ಕರ್ತವ್ಯ ನಿರ್ವಹಿಸಲು ಸರ್ಕಾರ ಕೂಡಲೇ ಸುವ್ಯವಸ್ಥಿತ ಹಾಗೂ ಸುಸಜ್ಜಿತವಾದ ವಸತಿ ಸಮುಚ್ಛಯಗಳನ್ನು ಕಟ್ಟಿಕೊಡಬೇಕಿದೆ.
ನಗರದಲ್ಲಿ ಸುಗಮ ಪೊಲೀಸ್ ವ್ಯವಸ್ಥೆಗೆ ಅಗತ್ಯವಾದ ಹಾಗೂ ಅನಿವಾರ್ಯವಾದ ಎಲ್ಲಾ ಅನುಕೂಲಗಳನ್ನು ಮಾಡಿಕೊಡ ಬೇಕಾದ್ದು ಇಲಾಖೆಯ ಹಿರಿಯ ಅಧಿಕಾರಿಗಳ ಬದ್ಧತೆಯಾಗಬೇಕಿದೆ.
ಒಟ್ಟಾರೆ ಇನ್ನಾದರೂ ಇಲಾಖೆಯ ಹಿರಿಯ ಅಧಿಕಾರಿಗಳು ಇಲ್ಲಿ ಭೇಟಿ ನೀಡಿ ಪೇದೆಗಳ ಪತ್ನಿಯರು, ವಯಸ್ಸಾದ ತಂದೆ ತಾಯಂದಿರು ಹಾಗೂ ಮಕ್ಕಳು ಮಳೆಗಾಲದಲ್ಲಿ ಮಳೆಯ ನೀರಿಗೆ ಸೋರುತ್ತಿರುವ ವಸತಿ ಗೃಹಗಳಿಗೆ ಕಾಯಕಲ್ಪ ನೀಡಲು ಮುಂದಾಗಬೇಕಿದೆ. ಆ ಕೆಲಸ ಮುಂದಿನ ಮಳೆಗಾಲದ ಒಳಗಾದರೂ ಆಗಬಹುದಾ ಕಾದು ನೋಡಬೇಕಿದೆ.
- ಕೆ.ಎಸ್. ಮೂರ್ತಿ