ವೀರಾಜಪೇಟೆ, ಜು. ೧೬: ವೀರಾಜಪೇಟೆಯ ಮಲೆತಿರಿಕೆ ಬೆಟ್ಟದಲ್ಲಿ ಬಿರುಕು ಕಾಣಿಸಿಕೊಂಡು ಅಪಾಯದ ಮುನ್ಸೂಚನೆ ಇದೆ ಎಂಬ ವದಂತಿಯನ್ನು ವೀರಾಜಪೇಟೆ ಪುರಸಭೆ ತಳ್ಳಿ ಹಾಕಿದೆ.
ವೀರಾಜಪೇಟೆ ಮಲೆತಿರಿಕೆ ಬೆಟ್ಟದಲ್ಲಿ ಮತ್ತೆ ಬಿರುಕು ಕಾಣಿಸಿಕೊಂಡಿದೆ ಎಂಬ ವದಂತಿ ಸಾರ್ವಜನಿಕರಲ್ಲಿ ಕೆಲಕಾಲ ಆತಂಕ ಸೃಷ್ಟಿಸಿತ್ತು. ಒಮ್ಮೆಲೆ ವೀರಾಜಪೇಟೆಯ ಸಂತ ಅನ್ನಮ್ಮ ಸಭಾಂಗಣದಲ್ಲಿ ತೆರೆದಿರುವ ಕಾಳಜಿ ಕೇಂದ್ರದಲ್ಲಿ ಜನರು ಅಧಿಕ ಸಂಖ್ಯೆಯಲ್ಲಿ ಜಮಾಯಿಸಿದರು. ಸುಮಾರು ೪೮೯ ಜನರು ನೋಂದಣಿ ಮಾಡಿಸಿದರು.
ಆದರೆ, ಪುರಸಭೆಯ ಮುಖ್ಯಾಧಿಕಾರಿ ‘ಶಕ್ತಿ’ಗೆ ಮಾಹಿತಿ ನೀಡಿ ಇದಾವುದು ನಿಜವಲ್ಲ. ಮಲೆತಿರಿಕೆ ಬೆಟ್ಟದಲ್ಲಿ ಮೊದಲ ಬಾರಿ ಬಂದ ಬಿರುಕು ಬಿಟ್ಟರೇ ಮತ್ತೆ ಬಿರುಕು ಕಾಣಿಸಿಕೊಂಡಿಲ್ಲ. ಕೇರಳದ ಯಾವ ಭೂವಿಜ್ಞಾನಿಗಳು ವೀರಾಜಪೇಟೆ ಬೆಟ್ಟದ ಪರಿಶೀಲನೆಗೆ ಬಂದಿಲ್ಲ. ಇತ್ತೀಚೆಗೆ ಜಿಲ್ಲಾಕೇಂದ್ರದಿAದ ವಿಪತ್ತು ನಿರ್ವಹಣಾ ಕೇಂದ್ರದಿAದ ಬಂದು ಬೆಟ್ಟದ ಪರಿಶೀಲನೆ ಮಾಡಿದ್ದಾರೆ ಆದರೆ ಅವರು ನಮಗಾಗಲಿ, ಜಿಲ್ಲಾಡಳಿತಕ್ಕಾಗಲಿ ಯಾವ ವರದಿಯನ್ನು ನೀಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ರಾತೋರಾತ್ರಿ ಕಾಳಜೀ ಕೇಂದ್ರಕ್ಕೆ ಬಂದ ಜನತೆ ಬೆಳಗಾಗುವುದರೊಳಗೆ ಮನೆಗೆ ಹಿಂದಿರುಗಿ ಕೇವಲ ೧೩೦ ಜನರು ಮಾತ್ರ ಕಾಳಜಿ ಕೇಂದ್ರದಲ್ಲಿ ಉಳಿದುಕೊಂಡಿದ್ದಾರೆ. ಇಂದು ಅವರಿಗೆ ತಾಲೂಕು ಆರೋಗ್ಯ ಇಲಾಖೆಯಿಂದ ಆರೋಗ್ಯ ತಪಾಸಣೆ ನಡೆಸಲಾಯಿತು.