ಮಡಿಕೇರಿ, ಜು. ೧೬: ಕೊಡಗು ಪ್ರೆಸ್‌ಕ್ಲಬ್, ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ವೀರಾಜಪೇಟೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಸಂಯುಕ್ತ ಆಶ್ರಯದಲ್ಲಿ ತಾ. ೧೭ ರಂದು (ಇಂದು) ಪಾಲಿಬೆಟ್ಟದ ಮೇಕೂರಿನಲ್ಲಿ ಪತ್ರಕರ್ತರ ಜಿಲ್ಲಾಮಟ್ಟದ ಕೆಸರುಗದ್ದೆ ಕ್ರೀಡಾಕೂಟ ಆಯೋಜಿಸಲಾಗಿದೆ ಎಂದು ಸಂಚಾಲಕ ಪುತ್ತಂ ಪ್ರದೀಪ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪಾಲಿಬೆಟ್ಟದ ಪತ್ರಕರ್ತ ಕುಟ್ಟಂಡ ಅಜಿತ್ ಕರುಂಬಯ್ಯ ಅವರ ಮೇಕೂರು ಗದ್ದೆಯಲ್ಲಿ ಕ್ರೀಡಾಕೂಟ ನಡೆಯಲಿದೆ. ೬೪ ಕಾರ್ಯನಿರತ ಪತ್ರಕರ್ತರು ಕೆಸರುಗದ್ದೆ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲಿದ್ದಾರೆ.

ಕೆಸರುಗದ್ದೆಯಲ್ಲಿ ಹ್ಯಾಂಡ್‌ಬಾಲ್, ಹಗ್ಗಜಗ್ಗಾಟ, ಕೆಸರುಗದ್ದೆ ಓಟ ಸೇರಿದಂತೆ ವಿವಿಧ ಕ್ರೀಡೆಗಳು ನಡೆಯಲಿದೆ. ೬ ತಂಡಗಳು ಭಾಗವಹಿಸಲಿವೆ. ಬೆಳಿಗ್ಗೆ ೯ ಗಂಟೆಗೆ ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷೆ ಬಿ.ಆರ್. ಸವಿತಾ ರೈ ಅಧ್ಯಕ್ಷತೆಯಲ್ಲಿ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ನಿರ್ದೇಶಕ ರವಿ ಟೆಲೆಕ್ಸ್ ಕ್ರೀಡಾಕೂಟಕ್ಕೆ ಚಾಲನೆ ನೀಡಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಕಾಫಿ ಬೆಳೆಗಾರ ಕುಟ್ಟಂಡ ಸುಮನ್ ಕಾರ್ಯಪ್ಪ, ಕಾಫಿ ಉದ್ಯಮಿ ಎಂ. ನಿಯಾಜ್, ವೀರಾಜಪೇಟೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರೆಜಿತ್‌ಕುಮಾರ್ ಗುಹ್ಯ, ಉದ್ಯಮಿ ಚುಪ್ಪ ನಾಗರಾಜ್, ಹೊಟೇಲ್ ಉದ್ಯಮಿ ಮುನೀರ್, ಗುತ್ತಿಗೆದಾರ ವಿನ್ಸೆಂಟ್, ಉದ್ಯಮಿ ಟಿ.ಜಿ. ವಿಜೇಶ್ ಪಾಲ್ಗೊಳ್ಳಲಿದ್ದಾರೆ. ಮಧ್ಯಾಹ್ನ ೨ ಗಂಟೆಗೆ ನಡೆಯುವ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಕುಟ್ಟಂಡ ಭಾರತಿ ಉತ್ತಯ್ಯ ವಹಿಸಲಿದ್ದಾರೆ.

ಬಹುಮಾನ ವಿತರಣೆಯನ್ನು ಸುನಿಲ್ ಹಾಗೂ ದ್ರೌಪದಿ ಸುನಿಲ್ ಮಾಡಲಿದ್ದಾರೆ. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಉಪಾಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಅವರು ಸಮಾರೋಪ ಭಾಷಣ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮಾಲ್ದಾರೆ ಗ್ರಾ.ಪಂ. ಅಧ್ಯಕ್ಷ ಸಮೀರ್, ಪಾಲಿಬೆಟ್ಟ ಗ್ರಾ.ಪಂ. ಉಪಾಧ್ಯಕ್ಷ ಎಂ.ಬಿ. ಪವಿತ್ರ, ಜಿ.ಪಂ. ಮಾಜಿ ಸದಸ್ಯ ಮೂಕೊಂಡ ವಿಜು ಸುಬ್ರಮಣಿ, ಉದ್ಯಮಿ ಅಮೃತ ರಾಜನ್ ಭಾಗವಹಿಸಲಿದ್ದಾರೆ.