ಗೋಣಿಕೊಪ್ಪಲು, ಜು. ೧೬: ದೇಶ ಸುತ್ತಿ ನೋಡು, ಕೋಶ ಓದಿ ನೋಡು ಎಂಬ ಮಾತಿದೆ. ಹಲವು ವರ್ಷಗಳಿಂದ ದೇಶ ಸುತ್ತಾಡಬೇಕೆಂಬ ಕನಸನ್ನು ಇಲ್ಲೊಬ್ಬರು ೫೪ರ ಪ್ರಾಯದಲ್ಲಿ ನನಸು ಮಾಡಿಕೊಂಡಿದ್ದಾರೆ. ಇವರ ಕನಸಿಗೆ ಬೆಂಬಲ ನೀಡಿದ್ದು ಇವರ ಮಗ. ೨೧ ದಿನಗಳಲ್ಲಿ ಅಪ್ಪ-ಮಗ ಬರೋಬ್ಬರಿ ೮,೩೫೦ ಕಿ.ಮೀ. ಕ್ರಮಿಸುವ ಮೂಲಕ ತಮ್ಮ ಕನಸನ್ನು ನನಸು ಮಾಡಿಕೊಂಡಿದ್ದಾರೆ.

ಅಪ್ಪನಿಗೆ ಬಾಲ್ಯದ ದಿನಗಳಿಂದ ಬೈಕ್ ರೈಡಿಂಗ್‌ನಲ್ಲಿ ಹೆಚ್ಚಿನ ಆಸಕ್ತಿ ವಹಿಸಿದ್ದ ಗೋಣಿಕೊಪ್ಪಲುವಿನ ಉದ್ಯಮಿ ನಾಮೇರ ಬೋಪಣ್ಣ ತನ್ನದೆ ಹೊಸ ಹಿಮಾಲಯ ಬೈಕ್‌ನಲ್ಲಿ ಲೇಹ್‌ಲಡಾಕ್‌ನಲ್ಲಿರುವ ಬೆಟ್ಟವನ್ನೇರಲು ಯಶಸ್ವಿಯಾಗಿದ್ದಾರೆ. ತನ್ನ ಮಗನಾದ ಅಂಕಿತ್ ಪೊನ್ನಪ್ಪನೊಂದಿಗೆ ಬೈಕ್‌ನಲ್ಲಿ ೨೧ ದಿನಗಳ ಕಾಲ ಗೋಣಿಕೊಪ್ಪದಿಂದ ಪ್ರವಾಸ ಕೈಗೊಂಡು ೧೦ ರಾಜ್ಯಗಳ ೭೩ ಪ್ರವಾಸಿ ತಾಣಗಳನ್ನು ಭೇಟಿ ಮಾಡಿದಲ್ಲದೆ ವಿಶ್ವ ಪ್ರಸಿದ್ಧ ಲೇಹ್‌ಲಡಾಕ್ ಬೆಟ್ಟವನ್ನು ಏರುವ ಮೂಲಕ ಸಾಧನೆ ಮಾಡಿದ್ದಾರೆ.

ಜೂನ್ ೧೬ ರಂದು ಮುಂಜಾನೆ ತನ್ನ ಮಗನಾದ ಅಂಕಿತ್ ಪೊನ್ನಪ್ಪನೊಂದಿಗೆ ಗೋಣಿಕೊಪ್ಪಲುವಿನಿಂದ ತನ್ನ ಬೈಕ್‌ನಲ್ಲಿ ಪ್ರವಾಸ ಆರಂಭಿಸಿದ ನಾಮೇರ ಅಪ್ಪಣ್ಣ ಪ್ರತಿ ದಿನ ೪೦೦ ರಿಂದ ೫೦೦ ಕಿ.ಮೀ. ಬೈಕ್ ಓಡಿಸಿ ೨೧ ದಿನದಲ್ಲಿ ೮,೩೫೦ ಕಿ.ಮೀ. ಕ್ರಮಿಸಿ ಮತ್ತೆ ಗೋಣಿಕೊಪ್ಪ ನಗರಕ್ಕೆ ತಾ. ೭ ರಂದು ಸುರಕ್ಷಿತವಾಗಿ ವಾಪಸ್ಸಾಗಿದ್ದಾರೆ.

ಬೈಕ್‌ನಲ್ಲಿ ಪ್ರವಾಸಕ್ಕೆ ತೆರಳುವ ವೇಳೆ ಅಗತ್ಯವಿರುವ ಟ್ಯೂಬ್, ಗಾಳಿಯಂತ್ರ, ಟೂಲ್ಸ್ ಕಿಟ್‌ನೊಂದಿಗೆ ೩೦ ಕೆ.ಜಿ. ತೂಕದ ಅಗತ್ಯ ವಸ್ತುಗಳನ್ನು ಹೆಗಲಿಗೇರಿಸಿ ಹೊರಟ ಇವರು ಕಾಶ್ಮೀರದಲ್ಲಿ ಭೂಕುಸಿತ ಹಿನ್ನೆಲೆಯಲ್ಲಿ ಈ ಭಾಗಕ್ಕೆ ತೆರಳಲು ಸಾಧ್ಯವಾಗಲಿಲ್ಲ. ಹತ್ತು ರಾಜ್ಯಗಳಲ್ಲಿ ಸಂಚರಿಸುವ ವೇಳೆ ಅಲ್ಲಿನ ನಾಗರಿಕರು ಇವರನ್ನು ವಿಶೇಷವಾಗಿ ನೋಡಿಕೊಂಡರಲ್ಲದೆ ಕರ್ನಾಟಕದಿಂದ ಬಂದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು ಎಂದು ನಾಮೇರ ಅಪ್ಪಣ್ಣ ತಮ್ಮ ಅನುಭವವನ್ನು ಹಂಚಿಕೊAಡರು.

ಪ್ರವಾಸದ ವೇಳೆ ವಿಶ್ರಾಂತಿ ಪಡೆಯಲು ಬೈಕ್ ಅನ್ನು ಪಾರ್ಕಿಂಗ್ ಮಾಡುವ ಸಂದರ್ಭ ಎದುರಾದಾಗ ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸ್ ಠಾಣೆಗಳಲ್ಲಿ ಹಾಗೂ ಪೊಲೀಸರು ಗಸ್ತು ಇರುವ ಸ್ಥಳಗಳಲ್ಲಿ ಬೈಕ್ ನಿಲ್ಲಿಸಿ ವಿಶ್ರಾಂತಿ ಪಡೆಯುತ್ತಿದ್ದರು. ರಾತ್ರಿಯ ವೇಳೆ ಹೊಟೇಲ್‌ಗಳಲ್ಲಿ ತಂಗುವ ಮೂಲಕ ಮುಂಜಾನೆ ೫.೩೦ರ ವೇಳೆ ಮತ್ತೆ ತಮ್ಮ ಪ್ರವಾಸವನ್ನು ಆರಂಭಿಸುತ್ತಿದ್ದರು. ಈ ವೇಳೆ ಆಯಾಯ ರಾಜ್ಯದ ಜನರು ಆಗಮಿಸಿ ಇಷ್ಟೊಂದು ದೂರ ಬೈಕ್‌ನಲ್ಲಿ ಆಗಮಿಸಿರುವುದನ್ನು ಶ್ಲಾಘಿಸಿ ತಮ್ಮ ಮೊಬೈಲ್ ಮೂಲಕ ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಿದ್ದರು. ಇದರಿಂದ ಖುಷಿ ಸಿಗುತ್ತಿತ್ತು. ಹಾಗೆಯೇ ಗುರಿ ಸಾಧಿಸಬೇಕೆಂಬ ಹಠವೂ ಬರುತ್ತಿತ್ತು ಎಂದು ಅಪ್ಪಣ್ಣ ತಿಳಿಸಿದ್ದಾರೆ.

೧೯ ಸಾವಿರ ಅಡಿ ಎತ್ತರದ ಲೇಹ್‌ಲಡಾಕ್ ನಾಲ್ಕು ಸುತ್ತಿನ ಬೆಟ್ಟವನ್ನು ಏರುವ ವೇಳೆ ಅತ್ಯಂತ ರೋಮಾಂಚನಕಾರಿ ಅನುಭವಗಳು ಎದುರಾಗುತ್ತವೆ. ಬೆಟ್ಟ ಏರುತ್ತಿದ್ದಂತೆಯೇ ಉಸಿರಾಟಕ್ಕೆ ಅವಶ್ಯವಿರುವ ಆಮ್ಲಜನಕದ ಕೊರತೆ ನಮ್ಮನ್ನು ಕಾಡುತ್ತದೆ. ೩೮೦ ಕಿ.ಮೀ.ನಲ್ಲಿ ನಾಲ್ಕು ಬೆಟ್ಟಗಳನ್ನು ಸುತ್ತಿ ಈ ಪ್ರದೇಶಕ್ಕೆ ತೆರಳಬೇಕು ಇಲ್ಲಿಯ ವಾತಾವರಣಕ್ಕೆ ನಾವು ಹೊಂದಿಕೊAಡ ನಂತರವೇ ಮುಂದಿನ ಪ್ರವಾಸ ಕೈಗೊಳ್ಳಬೇಕು. ೩ ದಿನಗಳ ಕಾಲ ಇಲ್ಲಿ ವಾಸ್ತವ್ಯ ಹೂಡುವುದರಿಂದ ಇಲ್ಲಿಯ ವಾತಾವರಣಕ್ಕೆ ನಾವು ಹೊಂದಿಕೊಳ್ಳಬಹುದು. ಆಮ್ಲಜನಕ ಹೆಚ್ಚು ಪಡೆಯಲು ಸಹಜವಾಗಿಯೇ ಕರ್ಪೂರ ಹಾಗೂ ಬೆಳ್ಳುಳ್ಳಿಯ ಸಹಾಯ ಪಡೆಯಬೇಕು ಈ ಪ್ರದೇಶದಲ್ಲಿ ರಾತ್ರಿ ೮ ಗಂಟೆ ಕಳೆದರೂ ಕತ್ತಲು ಆವರಿಸುವುದಿಲ್ಲ.

ಹಿಮಾಚಲ ಪ್ರದೇಶದ ಕಿಲಾಂಗ್ ಪ್ರದೇಶವು ಅತ್ಯಂತ ರೋಮಾಂಚನಕಾರಿಯಾಗಿದ್ದು ಇಲ್ಲಿಯ ನಾವು ತಂಗಿದ್ದ ಹೊಟೇಲ್ ಬಾಗಿಲುಗಳನ್ನು ತೆರೆಯುತ್ತಿದ್ದಂತೆಯೇ ಮಂಜನ್ನು ಹೊದಿಕೆ ರೂಪದಲ್ಲಿ ಕಾಣಬಹುದಾಗಿದೆ. ಈ ಪ್ರದೇಶದಲ್ಲಿ ಕೆಲಕಾಲ ಉಷ್ಣಾಂಶ ವಾತಾವರಣ ವಿದ್ದರೆ ಕೆಲ ನಿಮಿಷದಲ್ಲಿ ಚಳಿಯ ವಾತಾವರಣವಿರುತ್ತದೆ. ಹತ್ತು ರಾಜ್ಯಗಳಲ್ಲಿ ಪ್ರವಾಸ ಕೈಗೊಂಡಾಗ ಯಾವುದೇ ಭಾಗದಲ್ಲಿ ಪೊಲೀಸರು ನಮ್ಮನ್ನು ತಪಾಸಣೆಗೆ ಒಳಪಡಿಸದಿರುವುದು ಆಶ್ಚರ್ಯ ವಾಯಿತು ಎಂದು ಹೇಳಿದ ಅಪ್ಪಣ್ಣ ಅವರು, ಮಗನ ಸಹಕಾರವನ್ನು ನೆನೆದರು.

- ಹೆಚ್.ಕೆ. ಜಗದೀಶ್