ಸೋಮವಾರಪೇಟೆ, ಜು. ೧೬: ಐತಿಹಾಸಿಕ ಹಿನ್ನೆಲೆ ಹೊಂದಿರುವ, ಸೋಮವಾರಪೇಟೆ ಭಾಗದ ಪ್ರಧಾನ ದೇವಾಲಯ ಎಂದೇ ಕರೆಯಲ್ಪಡುವ ಹಾನಗಲ್ಲು ಗ್ರಾಮದ ದುದ್ದುಗಲ್ಲು ಶ್ರೀ ಮಲ್ಲಿಕಾರ್ಜುನ ದೇವಾಲಯ ಪುನರ್ ನಿರ್ಮಾಣ ಕಾರ್ಯ ಭರದಿಂದ ಸಾಗು ತ್ತಿದ್ದು, ಇದೀಗ ಗರ್ಭಗುಡಿ ನಿರ್ಮಾಣ ಕಾರ್ಯ ಮುಕ್ತಾಯಗೊಂಡಿದೆ.
ಆದಿಚುAಚನಗಿರಿ ಮಠದ ನೇತೃತ್ವದಲ್ಲಿ ಡಾ. ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಹಾಗೂ ಹಾಸನ-ಕೊಡಗು ಶಾಖಾ ಮಠದ ಉಸ್ತುವಾರಿ ಶ್ರೀ ಶಂಭುನಾಥ ಸ್ವಾಮೀಜಿಗಳ ನೇತೃತ್ವದಲ್ಲಿ, ಸ್ಥಳೀಯರ ಮೂಲಕ ರಚನೆಗೊಂಡಿರುವ ಟ್ರಸ್ಟ್ನ ಮುಖಾಂತರ ನೂತನ ದೇವಾಲಯ ನಿರ್ಮಾಣಕ್ಕೆ ಉದ್ದೇಶಿಸಲಾಗಿದೆ.
ಸುಮಾರು ೬೮ ಎಕರೆ ಪ್ರದೇಶವನ್ನು ಹೊಂದಿರುವ, ಪ್ರಕೃತಿ ಸೌಂದರ್ಯದ ನಡುವೆ ಹೊಳೆ ದಂಡೆಯ ಮೇಲ್ಭಾಗದಲ್ಲಿ ನೂತನ ದೇವಾಲಯ ನಿರ್ಮಾಣ ವಾಗಲಿದ್ದು, ನೂರಾರು ವರ್ಷಗಳ ಹಿಂದೆ ನಿರ್ಮಾಣಗೊಂಡು ನಂತರ ಶಿಥಿಲಾವಸ್ಥೆಗೆ ತಲುಪಿದ್ದ ಹಳೆಯ ದೇವಾಲಯವನ್ನು ಸಂಪೂರ್ಣವಾಗಿ ತೆರವುಗೊಳಿಸಿ ನೂತನ ದೇವಾಲಯ ನಿರ್ಮಾಣ ಕಾರ್ಯ ಸಾಗುತ್ತಿದೆ. ಆದಿಚುಂಚನಗಿರಿ ಮಠದ ನೇತೃತ್ವದಲ್ಲಿ ಸ್ಥಳೀಯರ ನ್ನೊಳಗೊಂಡ ಟ್ರಸ್ಟ್ ರಚಿಸುವ ಮೂಲಕ ಸಮಾಜದ ದಾನಿಗಳ ಸಹಕಾರದಿಂದ ಕೋಟ್ಯಾಂತರ ವೆಚ್ಚದಲ್ಲಿ ಮಲ್ಲಿಕಾರ್ಜುನ ದೇವಾಲಯ, ಗರ್ಭಗುಡಿ, ಪ್ರಾಂಗಣ, ಪ್ರಾಕಾರ, ಕಲ್ಯಾಣಿ, ಹೊಳೆಯಿಂದ ದೇವಾಲಯದವರೆಗೆ ೧೦೮ ಮೆಟ್ಟಿಲು, ಆವರಣ ಗೋಡೆ ಸೇರಿದಂತೆ ಇತರ ಕಾಮಗಾರಿಗಳು ನೀಲನಕ್ಷೆಯಲ್ಲಿದೆ. ಈಗಾಗಲೇ ಗರ್ಭಗುಡಿ ನಿರ್ಮಾಣವಾಗಿದ್ದು, ಇನ್ನಿತರ ಕೆಲಸ ಕಾರ್ಯಗಳೂ ಪ್ರಗತಿಯಲ್ಲಿವೆ.
ಮುಂದಿನ ಶಿವರಾತ್ರಿ ಹಬ್ಬದ ಒಳಗೆ ದೇವಾಲಯದಲ್ಲಿ ಪೂಜೆಗೆ ಅವಕಾಶ ಕಲ್ಪಿಸಲಾಗುವದು. ಯೋಜನಾ ಪಟ್ಟಿಯಂತೆ ಕೆಲಸ ಕಾರ್ಯಗಳು ಮುಗಿಯಲು ಇನ್ನೂ ಕಾಲಾವಕಾಶಬೇಕಿದೆ ಎಂದು ದೇವಾಲಯ ಸಮಿತಿ ಪದಾಧಿಕಾರಿಗಳಾದ ರಾಜು ಪೊನ್ನಪ್ಪ, ಹೆಚ್.ಎಂ. ಬಸಪ್ಪ ಅವರುಗಳು ತಿಳಿಸಿದ್ದಾರೆ.