ಪೊನ್ನಂಪೇಟೆ, ಜು. ೧೫: ವನ್ಯಜೀವಿಗಳ ನಿರಂತರ ಹಾವಳಿಯಿಂದಾಗಿ ಮೊದಲೇ ಕಂಗೆಟ್ಟಿದ್ದ ಕೊಡಗಿನ ಜನರಿಗೆ ಮತ್ತೊಂದು ಆಘಾತಕಾರಿ ಸಂಕಷ್ಟ ಎದುರಾಗಲಿದ್ದು, ಶೀಘ್ರದಲ್ಲೇ ಕೊಡಗು ಜಿಲ್ಲೆಯ ಬಹುತೇಕ ಪ್ರದೇಶ ವನ್ಯಜೀವಿ ಸೂಕ್ಷö್ಮ ಪರಿಸರ ವಲಯವಾಗಲಿದೆ ಎಂದು ತಿಳಿಸಿರುವ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ತೀತಿರ ಧರ್ಮಜ ಉತ್ತಪ್ಪ ಅವರು, ಈ ಕುರಿತು ಎಚ್ಚರ ವಹಿಸಬೇಕಾಗಿದ್ದ ಸಂಸದರು ಮತ್ತು ಶಾಸಕರು ಆ ಕುರಿತು ಗಮನವೇ ಹರಿಸದಿರುವವುದು ಖೇದಕರ ಎಂದಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆಗೊಳಿಸಿರುವ ಧರ್ಮಜ ಅವರು, ಸಂಸದ ಪ್ರತಾಪ್ ಸಿಂಹ ಮತ್ತು ಜಿಲ್ಲೆಯ ಇಬ್ಬರು ಶಾಸಕರು ಈ ದಿಸೆಯಲ್ಲಿ ಪರಿಣಾಮಕಾರಿಯಾಗಿ ಗಮನ ಹರಿಸಿದ್ದರೆ ಈ ಸ್ಥಿತಿ ಒದಗುತ್ತಿರಲಿಲ್ಲ ಎಂದಿದ್ದಾರೆ. ಯಾವುದೇ ಮಾರಕ ಯೋಜನೆಗಳನ್ನು ಕೇಂದ್ರ ಮತ್ತು ರಾಜ್ಯ ಸರಕಾರ ಕೊಡಗಿನಲ್ಲಿ ಜಾರಿಗೊಳಿಸುವುದಿಲ್ಲ ಎಂದು ಪದೇ ಪದೇ ಭರವಸೆ ನೀಡಿದ್ದ ಈ ಜನಪ್ರತಿನಿಧಿಗಳು ಈಗಿನ ನಿರ್ಧಾರದ ಕುರಿತು ಮೌನ ವಹಿಸಿರುವುದೇಕೆ ಎಂದು ಪ್ರಶ್ನಿಸಿದ್ದಾರೆ.

ವನ್ಯಜೀವಿ ಸೂಕ್ಷö್ಮ ಪರಿಸರ ವಲಯಕ್ಕೆ ಸಂಬAಧಿಸಿದ ಪ್ರಕರಣವು ದೇಶದ ಸರ್ವೋಚ್ಚ ನ್ಯಾಯಾಲಯದ ಪೀಠದಲ್ಲಿತ್ತು. ಈ ಕುರಿತು ವಿಚಾರಣೆ ನಡೆಸಿದ ನ್ಯಾಯಾಲಯ ಪಶ್ಚಿಮಘಟ್ಟದ ನಿಗದಿತ ಪ್ರದೇಶದ ಒಂದು ಕಿ.ಮೀ. ದೂರದ ವೈಮಾನಿಕ ಅಂತರದ ವ್ಯಾಪ್ತಿಯನ್ನು ವನ್ಯಜೀವಿ ಸೂಕ್ಷö್ಮ ಪರಿಸರ ವಲಯವನ್ನಾಗಿ ಘೋಷಿಸುವಂತೆ ತೀರ್ಪು ನೀಡಿದ್ದು, ಕೂಡಲೇ ಜಾರಿಗೊಳಿಸುವಂತೆ ಕೇಂದ್ರ ಮತ್ತು ರಾಜ್ಯ ಸರಕಾರಕ್ಕೆ ನಿರ್ದೇಶನ ನೀಡಿದೆ. ಇದರಂತೆ ಕೊಡಗು ಜಿಲ್ಲೆಯ ನಾಗರಹೊಳೆಯ ರಾಷ್ಟಿçÃಯ ಅಭಯಾರಣ್ಯ ಸೇರಿದಂತೆ ೪ ಪ್ರಮುಖ ವನ್ಯಜೀವಿ ಅಭಯಾರಣ್ಯಗಳ ವ್ಯಾಪ್ತಿಗಳು ಬಫರ್ ಝೋನಿಗೆ ಸೇರ್ಪಡೆಯಾಗಲಿದೆ ಎಂದು ಧರ್ಮಜ ಉತ್ತಪ್ಪ ಅವರು ವಿವರಿಸಿದ್ದಾರೆ.

ಸರಕಾರ ಈ ಯೋಜನೆಯನ್ನು ಜಿಲ್ಲೆಯಲ್ಲಿ ಅನುಷ್ಠಾನಗೊಳಿಸಿದರೆ ಕೊಡಗಿನ ನಾಗರಹೊಳೆ, ಬ್ರಹ್ಮಗಿರಿ, ಪುಷ್ಪಗಿರಿ ಮತ್ತು ತಲಕಾವೇರಿ ವನ್ಯಜೀವಿ ವಲಯದ ಒಂದು ಕಿ.ಮೀ. ದೂರದ ವೈಮಾನಿಕ ಅಂತರದಲ್ಲಿ ಕೊಡಗಿನ ಜನತೆ ಯಾವುದೇ ಚಟುವಟಿಕೆಗಳನ್ನು ಮಾಡುವಂತಿಲ್ಲ. ಇದರಿಂದ ಕೊಡಗಿನ ಬಹುತೇಕ ಜನರ ಜನ ಜೀವನಕ್ಕೆ ಅಡ್ಡಿಯಾಗಲಿದೆ ಎಂದು ಆತಂಕ ವ್ಯಕ್ತಪಡಿಸಿರುವ ಕಸ್ತೂರಿರಂಗನ್ ವರದಿ ವಿರೋಧಿ ಹೋರಾಟ ಸಮಿತಿಯ ಸಂಚಾಲಕರೂ ಆಗಿರುವ ಧರ್ಮಜ ಉತ್ತಪ್ಪ ಅವರು, ಜನರ ಹಿತವನ್ನು ಗಮನದಲ್ಲಿಟ್ಟು ರಾಜ್ಯ ಸರಕಾರ ಸುಪ್ರೀಂಕೋರ್ಟಿನಲ್ಲಿ ಸಮರ್ಥವಾಗಿ ವಾದ ಮಂಡಿಸಿದ್ದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪಶ್ಚಿಮ ಘಟ್ಟ ಹಾದು ಹೋಗಿರುವ ಕೊಡಗು ಜಿಲ್ಲೆಗೆ ಸೇರಿದ ಪ್ರದೇಶದಲ್ಲಿ ಜನರು ಬದುಕುತ್ತಿರುವ ಬಗ್ಗೆ ಮತ್ತು ಈ ವ್ಯಾಪ್ತಿಯ ಕೃಷಿ ಚಟುವಟಿಕೆಗಳ ಬಗ್ಗೆ ರಾಜ್ಯ ಸರಕಾರ ಸುಪ್ರೀಂ ಕೋರ್ಟಿಗೆ ಪ್ರಮಾಣ ಪತ್ರ ಸಲ್ಲಿಸುವ ಮೂಲಕ ಸರಿಯಾದ ರೀತಿಯಲ್ಲಿ ಮನವರಿಕೆ ಮಾಡಿಕೊಡಬೇಕಿತ್ತು. ಅಲ್ಲದೆ ಸಂಸದರು ಮತ್ತು ಶಾಸಕರು ಕೂಡ ಈ ಬಗ್ಗೆ ಹೆಚ್ಚಿನ ಆಸಕ್ತಿ ವಹಿಸಿ ಜಿಲ್ಲೆಯ ಜನರ ಹಿತ ಕಾಪಾಡಲು ಸರಕಾರದ ಮೇಲೆ ಒತ್ತಡ ಹೇರಬೇಕಿತ್ತು ಎಂದು ಅಭಿಪ್ರಾಯಪಟ್ಟಿರುವ ಧರ್ಮಜ ಉತ್ತಪ್ಪ ಅವರು, ಈ ಸಂದರ್ಭದಲ್ಲಿ ಕೇರಳ ಸರಕಾರ ಸಮರ್ಪಕವಾಗಿ ತನ್ನ ವಾದ ಮಂಡಿಸಿದ್ದರಿAದ ಕೇರಳ ರಾಜ್ಯದಲ್ಲಿ ಹಾದುಹೋಗುವ ಪಶ್ಚಿಮಘಟ್ಟ ಪ್ರದೇಶಗಳ ವ್ಯಾಪ್ತಿಯಲ್ಲಿ ಶೂನ್ಯ ಕಿ.ಮೀ. ವನ್ಯಜೀವಿ ಸೂಕ್ಷö್ಮ ಪರಿಸರ ವಲಯವಾಗಿ ಘೋಷಣೆಯಾಗಲಿದೆ. ಕೇರಳ ಸರಕಾರಕ್ಕೆ ಇರುವ ಇಚ್ಛಾ ಶಕ್ತಿ ಕರ್ನಾಟಕ ಸರಕಾರಕ್ಕೆ ಇಲ್ಲದಿರುವುದು ನಮ್ಮ ದುರಂತ ಎಂದು ತಿಳಿಸಿದ್ದಾರೆ.

ಕಸ್ತೂರಿರಂಗನ್ ವರದಿಗಿಂತ ಕಠಿಣ

ಈ ಯೋಜನೆ ಶೀಘ್ರದಲ್ಲೇ ಜಾರಿಯಾಗುವ ಸಾಧ್ಯತೆಗಳಿದ್ದು, ಇದು ಅನುಷ್ಠಾನಗೊಂಡರೆ ಕಸ್ತೂರಿರಂಗನ್ ವರದಿಯ ಕಾನೂನಿಗಿಂತ ಕಠಿಣವಾಗಲಿದೆ. ಇದರಿಂದ ಕೊಡಗಿನ ಹಲವು ಪ್ರದೇಶಗಳ ಜನರ ಬದುಕಿಗೆ ಮಾರಕವಾಗಲಿದೆ. ಈಗಾಗಲೇ ಕಂಗೆಟ್ಟಿರುವ ಕೊಡಗಿನ ಕೃಷಿಕರ ಸ್ಥಿತಿ ಮತ್ತಷ್ಟು ಶೋಚನೀಯವಾಗಲಿದೆ ಎಂದು ಎಚ್ಚರಿಸಿರುವ ಧರ್ಮಜ ಉತ್ತಪ್ಪ ಅವರು, ಈ ಕುರಿತು ರಾಜ್ಯ ಸರ್ಕಾರ ಪುನರ್ ಪರಿಶೀಲನಾ ಅರ್ಜಿಯನ್ನು ಅತಿ ಶೀಘ್ರವಾಗಿ ಸುಪ್ರೀಂ ಕೋರ್ಟಿಗೆ ಸಲ್ಲಿಸಬೇಕು. ಇದಕ್ಕೆ ಕೊಡಗಿನ ಶಾಸಕರು ವಿಶೇಷ ಆಸಕ್ತಿ ವಹಿಸಬೇಕು. ಈ ಪೈಕಿ ಕೊಡಗನ್ನು ಲೋಕಸಭೆಯಲ್ಲಿ ಪ್ರತಿನಿಧಿಸುತ್ತಿರುವ ಪ್ರತಾಪ್ ಸಿಂಹ ಅವರ ಹೊಣೆಗಾರಿಕೆ ಅತಿ ಪ್ರಮುಖವಾದದ್ದು. ಇದನ್ನು ಅವರು ನಿರ್ವಹಿಸಲಿ ಎಂದು ಒತ್ತಾಯಿಸಿದ್ದಾರೆ.

ಕಸ್ತೂರಿ ರಂಗನ್ ವರದಿ ಕೂಡ ಜೀವಂತವಾಗಿದ್ದು, ಈಗಾಗಲೇ ಕೇಂದ್ರ ಸರಕಾರ ೪ ಅಧಿಸೂಚನೆಗಳನ್ನು ಹೊರಡಿಸಿದೆ. ಈ ಎಲ್ಲಾ ಅಧಿಸೂಚನೆಗಳಿಗೆ ಕೊಡಗಿನ ಭೂ ಹಿಡುವಳಿದಾರರ ಪರವಾಗಿ ನಿರಂತರವಾಗಿ ಆಕ್ಷೇಪಣೆ ಸಲ್ಲಿಸಲಾಗಿದೆ. ಇದೀಗ ಮತ್ತೆ ಕೇಂದ್ರ ಸರ್ಕಾರ ೫ನೇ ಅಧಿಸೂಚನೆ ಹೊರಡಿಸಿದೆ. ಈ ಎಲ್ಲಾ ಮಾರಕ ಕಾನೂನುಗಳು ಜಿಲ್ಲೆಯಲ್ಲಿ ಜಾರಿಯಾದರೆ ಕೊಡಗಿನ ಅಸ್ತಿತ್ವವೇ ಇಲ್ಲದಾಗುತ್ತದೆ ಎಂದು ತಿಳಿಸಿರುವ ಧರ್ಮಜ ಉತ್ತಪ್ಪ ಅವರು, ಸಂಸದ ಪ್ರತಾಪ್ ಸಿಂಹ ಅವರು ನಿರ್ಲಕ್ಷ ವಹಿಸುವುದು ಸಲ್ಲದು ಎಂದಿದ್ದಾರೆ.