ಕೋವರ್ ಕೊಲ್ಲಿ ಇಂದ್ರೇಶ್ ಮೈಸೂರು, ಜು. ೧೫: ದಶಕಗಳಿಂದಲೂ ಪುಟ್ಟ ಜಿಲ್ಲೆ ಕೊಡಗಿಗೆ ರೈಲ್ವೇ ಸಂಪರ್ಕ ಕಲ್ಪಿಸುವ ಪ್ರಯತ್ನಗಳು ಇನ್ನೂ ಫಲ ನೀಡಿಲ್ಲ. ರೈಲ್ವೇ ಇಲಾಖೆ ಈ ಯೋಜನೆಯ ಅನುಷ್ಠಾನಕ್ಕೆ ಪ್ರಯತ್ನ ನಡೆಸುತ್ತಿದ್ದರೂ ಜನಪ್ರತಿನಿಧಿಗಳ ನಿರಾಸಕ್ತಿ, ಇಚ್ಚಾಶಕ್ತಿಯ ಕೊರತೆಯಿಂದ ಈ ಯೋಜನೆ ಇನ್ನೂ ಕಾಗದದಲ್ಲೇ ಉಳಿದಿದೆ. ಇದೀಗ ಮೈಸೂರು- ಕುಶಾಲನಗರ ನಡುವಿನ ೮೭.೫ ಕಿಲೋಮೀಟರ್ ಉದ್ದದ ರೈಲ್ವೇ ಮಾರ್ಗದ ಅಂತಿಮ ಮಾರ್ಗ ಸಮೀಕ್ಷೆ (ಈiಟಿಚಿಟ ಟoಛಿಚಿಣioಟಿ suಡಿveಥಿ)ಗೆ ಹೈದರಾಬಾದ್ ಮೂಲದ ಸಿಪ್ರಾ ಇನ್ಟಾçಸ್ಟçಕ್ಚರ್ ಡೆವಲಪ್ಮೆಂಟ್ ಪ್ರೈವೇಟ್ ಲಿಮಿಟೆಡ್ ಕಂಪೆನಿಗೆ ಟೆಂಡರ್ ನೀಡಲಾಗಿದೆ ಎಂದು ತಿಳಿದು ಬಂದಿದೆ. ಈ ಟೆಂಡರ್ ನ್ನು ೧.೬೫ ಕೋಟಿ ರೂಪಾಯಿಗಳಿಗೆ ನೀಡಲಾಗಿದೆ ಎಂದು ರೈಲ್ವೇ ಅಧಿಕಾರಿಗಳು ತಿಳಿಸಿದರು. ಸಿಪ್ರಾ ಕಂಪೆನಿಗೆ ಸರ್ವೆ ನಡೆಸಲು ನಾಲ್ಕು ತಿಂಗಳ ಕಾಲಾವಕಾಶ ನೀಡಲಾಗಿದ್ದು ಡ್ರೋನ್ ಕ್ಯಾಮೆರಾ ಬಳಸಿ ಸರ್ವೆ ಕಾರ್ಯ ನಡೆಸಲಿದೆ. ಈ ಹಿಂದೆ ಅಂತಿಮ ಮಾರ್ಗ ಸಮೀಕ್ಷೆಗೆ ಏರಿಯಲ್ ಕನ್ಸ್ಟ್ರಕ್ಷನ್ ಪ್ರೈವೇಟ್ ಲಿಮಿಟೆಡ್ ಎಂಬ ಕಂಪೆನಿಗೆ ೨೦೨೦ ರ ಆಗಸ್ಟ್ ತಿಂಗಳಿನಲ್ಲೇ ೧.೨೬ ಕೋಟಿ ರೂಪಾಯಿಗಳಿಗೆ ಟೆಂಡರ್ ನೀಡಿರುವುದಾಗಿ ರೈಲ್ವೇ ಅಧಿಕಾರಿಗಳು ತಿಳಿಸಿದ್ದರು. ಆದರೆ ಮಳೆಯ ಕಾರಣದಿಂದ ಮೂರು ತಿಂಗಳವರೆಗೆ ಸರ್ವೆ ಕಾರ್ಯ ನಡೆಸದ ಕಂಪೆನಿ ತನ್ನಿಂದ ಈ ಕೆಲಸ ಆಗುವುದಿಲ್ಲ ಎಂದು ಹೊರ ನಡೆದಿದೆ.
ಕಳೆದ ೨೦೧೯ ನೇ ಇಸವಿಯಲ್ಲಿಯೇ ಫೈನಲ್ ಲೋಕೇಷನ್ ಸರ್ವೆ ನಡೆಸಲು ಹೈದರಾಬಾದ್ ಮೂಲದ ಮಾತ ಕನ್ಸ್ಟ್ರಕ್ಷನ್ಸ್ ಮತ್ತು ಬಿಲ್ಡರ್ಸ್ ಲಿಮಿಟೆಡ್ ಎಂಬ ಕಂಪೆನಿ ಟೆಂಡರ್ ಪಡೆದುಕೊಂಡಿದ್ದು ಅದೂ ಕೂಡ ಕೆಲಸ ಮಾಡದೆ ನಿರ್ಗಮಿಸಿತ್ತು. ರೈಲ್ವೇ ಸೌಕರ್ಯ ವಂಚಿತ ರಾಜ್ಯದ ಏಕೈಕ ಜಿಲ್ಲೆಯಾಗಿ ಗುರುತಿಸಿಕೊಂಡಿರುವ ಈ ಜಿಲ್ಲೆಯ ರೈಲ್ವೇ ಮಾರ್ಗದ ಬೇಡಿಕೆಗೆ ದಶಕಗಳ ಇತಿಹಾಸವೇ ಇದೆ. ಕೇಂದ್ರದಲ್ಲಿದ್ದ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರವಾಗಲಿ ಅಥವಾ ಈಗಿನ ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರವಾಗಲಿ ಕೊಡಗಿನ ಜನತೆಯ ಬಹು ವರ್ಷಗಳ ಬೇಡಿಕೆ ಈಡೇರಿಕೆಗೆ ಗಂಭೀರ ಪ್ರಯತ್ನವನ್ನೇ ಮಾಡಿಲ್ಲ. ಅಂದು ೨೦೦೯ ರಲ್ಲಿ ಕೇಂದ್ರ ರೈಲ್ವೇ ಸಹಾಯಕ ಸಚಿವರಾಗಿದ್ದ ವಿ ಮುನಿಯಪ್ಪ ಅವರು ಮೈಸೂರಿನಿಂದ ಕುಶಾಲನಗರದವರೆಗಿನ ೮೮ ಕಿಲೋಮೀಟರ್ ಉದ್ದದ ರೈಲ್ವೇ ಹಳಿಯನ್ನು ನಿರ್ಮಿಸಲು ಸರ್ವೆ ಕಾರ್ಯಕ್ಕೂ ಆದೇಶಿಸಿದ್ದರು. ಇದು ಅಂದಿನ ೩ನಾಲ್ಕನೇ ಪುಟಕ್ಕೆ
(ಮೊದಲ ಪುಟದಿಂದ) ಯುಪಿಎ ಸರ್ಕಾರದ ಬಜೆಟ್ನಲ್ಲೂ ಈ ವಿಷಯವನ್ನು ಒಳಪಡಿಸಿದ್ದು, ಪತ್ರಿಕೆಗಳು ವರದಿ ಪ್ರಕಟಿಸಿದ್ದವು. ಸ್ವತಃ ಮುನಿಯಪ್ಪ ಅವರೆ ಕೊಡಗಿಗೆ ಭೇಟಿ ನೀಡಿದ್ದಾಗ ಈ ಬಗ್ಗೆ ಭರವಸೆಯನ್ನೂ ನೀಡಿದ್ದರು. ಅಂದು ರಾಜ್ಯದ ಮುಖ್ಯಮಂತ್ರಿ ಆಗಿದ್ದ ಬಿ ಎಸ್ ಯಡಿಯೂರಪ್ಪ ಅವರೂ ಕೂಡ ಕೇಂದ್ರದ ನಿರ್ಧಾರಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ್ದರು. ಉದ್ದೇಶಿತ ರೈಲ್ವೇ ಮಾರ್ಗ ಯೋಜನೆಯ ಪ್ರಕಾರ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳೆರಡೂ ತಲಾ ಶೇಕಡಾ ೫೦ ರಷ್ಟು ವೆಚ್ಚ ಭರಿಸಬೇಕಿದ್ದು, ರಾಜ್ಯ ಸರ್ಕಾರ ತನ್ನ ಖರ್ಚಿನಲ್ಲೇ ಭೂಮಿಯನ್ನೂ ಒದಗಿಸಬೇಕಿತ್ತು. ಆದರೆ ಈ ಯೋಜನೆ ಕಾಗದದಲ್ಲೇ ಉಳಿಯಿತು.
ಮೈಸೂರು -ಕೊಡಗು ಸಂಸದರಾದ ಪ್ರತಾಪ್ ಸಿಂಹ ಅವರು ತಾವು ಸಂಸದರಾಗುವುದಕ್ಕೂ ಮೊದಲು ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಕುಶಾಲನಗರದವರೆಗೆ ರೈಲ್ವೇ ಸಂಪರ್ಕ ಕಲ್ಪಿಸಿಯೇ ಸಿದ್ದ ಎಂದು ಘೋಷಿಸಿದ್ದರು. ಸಂಸದರಾದ ನಂತರವೂ ಈ ಯೋಜನೆ ಜಾರಿ ಆಗಲಿದೆ ಎಂದು ಹೇಳಿದರಲ್ಲದೆ ರೈಲು ಬಾರದಿದ್ದರೆ ಮುಂದಿನ ಚುನಾವಣೆಗೂ ಸ್ಪರ್ದಿಸುವುದಿಲ್ಲ ಎಂದು ಘೋಷಿಸಿದ್ದರು. ಆದರೆ ಅವರು ಪುನಃ ರೈಲ್ವೇ ಸಂಪರ್ಕ ಕಲ್ಲಿಸುವ ಯೋಜನೆ ಪ್ರಗತಿಯಲ್ಲಿದೆ ಎಂದು ಭರವಸೆ ನೀಡಿ ಎರಡನೇ ಬಾರಿಯೂ ಸಂಸದರಾಗಿ ಆಯ್ಕೆ ಆದರು. ಆಮೆ ವೇಗದಲ್ಲೇ ಸಾಗುತ್ತಿರುವ ಈ ಯೋಜನೆಯ ಮೊತ್ತ ಇದೀಗ ೧೯೫೭ ಕೋಟಿ ರೂಪಾಯಿಗಳಿಗೆ ಏರಿಕೆ ಆಗಿದೆ. ಈ ಹಿಂದೆಯೇ ವಿವರ ಯೋಜನಾ ವರದಿ (ಜeಣಚಿiಟeಜ ಠಿಡಿoರಿeಛಿಣ ಡಿeಠಿoಡಿಣ) ಕೈಗೊಂಡಿದ್ದ ರೈಲ್ವೇ ಇಲಾಖೆ ಈ ಯೋಜನೆ ಆರ್ಥಿಕವಾಗಿ ಕಾರ್ಯ ಸಾಧುವಲ್ಲ ಎಂಬ ಕಾರಣ ನೀಡಿ ಯೋಜನೆಯನ್ನೇ ಕೈ ಬಿಡಲು ಯೋಜಿಸಿತ್ತು. ಜನತೆಯ ಒತ್ತಾಯದಿಂದ ಮತ್ತೆ ಈ ಯೋಜನೆ ತೆವಳುತ್ತಾ ಸಾಗುತ್ತಿದೆ. ಈ ಯೋಜನೆಯ ಅನುಷ್ಠಾನ ನಿಧಾನವಾದಷ್ಟೂ ವೆಚ್ಚ ಏರುತ್ತಾ ಹೋಗುತ್ತದೆ.
ಈ ಫೈನಲ್ ಲೊಕೇಷನ್ ಸರ್ವೆಯ ನಂತರವಷ್ಟೆ ಎಲ್ಲೆಲ್ಲಿ ಮೇಲ್ಸೇತುವೆ, ಸೇತುವೆ, ಕ್ರಾಸಿಂಗ್ಗಳು ಬರಲಿವೆ ಎಂದು ತಿಳಿಯಲಿದೆ. ಇದನ್ನು ದೆಹಲಿಯಲ್ಲಿರುವ ರೈಲ್ವೇ ಮಂಡಳಿಗೆ ಸಲ್ಲಿಸಲಾಗುತ್ತದೆ. ನಂತರ ಈ ಯೋಜನೆಯ ಒಟ್ಟು ವೆಚ್ಚವನ್ನು ನಿಗದಿಪಡಿಸಲಾಗುತ್ತದೆ. ಇದಾದ ನಂತರ ರಾಜ್ಯ ಸರ್ಕಾರದ ಜತೆ ಸಮಾಲೋಚನೆ ನಡೆಸಿ ಬಜೆಟ್ನಲ್ಲಿ ಹಣ ಮೀಸಲಿರಿಸಿ ಯೋಜನೆಯನ್ನು ಕಾರ್ಯರೂಪಕ್ಕೆ ತರಬೇಕಾಗುತ್ತದೆ.
ಈ ಯೋಜನೆ ಜಾರಿಯಾದರೆ ಕೊಡಗಿಗೆ ದೇಶಾದ್ಯಂತ ಆಗಮಿಸುವ ಲಕ್ಷಾಂತರ ಪ್ರವಾಸಿಗರಿಗೆ ಹೆಚ್ಚಿನ ಅನುಕೂಲ ಆಗಲಿದ್ದು ಬೆಂಗಳೂರು -ಕುಶಾಲನಗರದ ವಾಹನ ದಟ್ಟಣೆ ಗಣನೀಯವಾಗಿ ಕಡಿಮೆ ಆಗಲಿದೆ. ಈ ಮಾರ್ಗದಲ್ಲಿ ನಿತ್ಯವೂ ೨೫೦ ಕ್ಕೂ ಅಧಿಕ ಸಾರಿಗೆ ಬಸ್ಗಳು ಸಂಚರಿಸುತಿದ್ದು ಆರಾಮದಾಯಕ ಮತ್ತು ಮಿತವ್ಯಯದ ಪ್ರಯಾಣಕ್ಕಾಗಿ ಜನರು ರೈಲ್ವೇ ಕಡೆ ಮುಖ ಮಾಡಲಿದ್ದಾರೆ. ದೇಶದ ವಿವಿಧೆಡೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಯೋಧರು ಕುಶಾಲನಗರದವರೆಗೆ ಬರಬಹುದು ಮತ್ತು ಹಿಂತಿರುಗಬಹುದಾಗಿದೆ. ಕೊಡಗಿನಲ್ಲಿ ಬೆಳೆಯುವ ಕೃಷಿ ಉತ್ಪನ್ನಗಳು ಮತ್ತು ಕಾಫಿಯನ್ನು ಬಂದರಿಗೆ ಸಾಗಿಸಲೂ ಇದು ಬಹು ಉಪಯುಕ್ತವಾಗಿದೆ. ಇದರಿಂದ ರೈತರಿಗೆ ಹೊಸ ಮಾರುಕಟ್ಟೆ ದೊರೆತು ಉತ್ತಮ ಬೆಲೆ ದೊರೆಯಲಿದೆ. ಆದರೆ ಈ ಯೋಜನೆ ಕಾರ್ಯರೂಪಕ್ಕೆ ಬಾರದಿರಲು ರಾಜಕಾರಣಿಗಳ ಮತ್ತು ಜನತೆಯ ನಿರಾಸಕ್ತಿಯೂ ಕಾರಣವಾಗಿದೆ. ಜನಪರ ಸಂಘಟನೆಗಳು ಇನ್ನಾದರೂ ಜನಪ್ರತಿನಿಧಿಗಳ ಮೇಲೆ ಒತ್ತಡ ಹೇರಿ ಯೋಜನೆಯ ಶೀಘ್ರ ಅನುಷ್ಠಾನಕ್ಕೆ ಮುಂದಾಗಬೇಕಿದೆ.