ಚೆಟ್ಟಳ್ಳಿ, ಜು. ೧೫: ಚೆಟ್ಟಳ್ಳಿ ಸಮೀಪದ ಪೊನ್ನತ್‌ಮೊಟ್ಟೆಯಲ್ಲಿ ಮಳೆಗೆ ಕುಸಿದ ಹಾಗೂ ಅಪಾಯದಂಚಿನ ಮನೆಗಳ ನಿವಾಸಿಗಳಿಗೆ ಪರಿಹಾರ ನೀಡಬೇಕೆಂಬ ಒತ್ತಾಯವಿದ್ದರೂ ಅರಣ್ಯ ಪೈಸಾರಿ ಜಾಗ, ಅನಧಿಕೃತ ಮನೆ ಎಂಬ ಕಾರಣಕ್ಕೆ ಹಲವು ವರ್ಷಗಳಿಂದ ಪರಿಹಾರ ನೀಡಲು ಸಾಧ್ಯವಿಲ್ಲವೆಂದು ಕಂದಾಯ ಇಲಾಖೆ ಮತ್ತು ಚೆಟ್ಟಳ್ಳಿ ಗ್ರಾಮ ಪಂಚಾಯಿತಿ ಹೇಳುತ್ತಿವೆ.

ಕುಶಾಲನಗರ ತಾಲೂಕು ಸುಂಟಿಕೊಪ್ಪ ಹೋಬಳಿಗೆ ಒಳಪಡುವ ಚೆಟ್ಟಳ್ಳಿ ಪಂಚಾಯಿತಿ ವ್ಯಾಪ್ತಿಯ ಪೊನ್ನತ್‌ಮೊಟ್ಟೆಯಲ್ಲಿ ಸೂರಿಲ್ಲದ ಹಲವು ಕುಟುಂಬಗಳು ಹತ್ತು ಹಲವು ವರ್ಷಗಳಿಂದ ಮನೆ ನಿರ್ಮಿಸಿಕೊಂಡಿದೆ. ಈ ಜಾಗವು ಅರಣ್ಯ ಪೈಸಾರಿಗೆ ಒಳಪಟ್ಟಿದ್ದು ಈವರೆಗೆ ನಿವೇಶನಕ್ಕೆ ಯಾವುದೇ ದಾಖಲೆ ದೊರೆತಿಲ್ಲ. ಕಳೆದ ಎರಡು ವರ್ಷಗಳಿಂದ ಮಳೆಗಾಲದ ಸಮಯದಲ್ಲಿ ತೋಡು ಉಕ್ಕಿ ಹರಿಯುವ ಕಾರಣ ತೋಡಿನ ಪಕ್ಕದಲ್ಲಿ ನಿರ್ಮಿಸಿರುವ ಮನೆಗಳಿಗೆ ತೊಂದರೆಯಾಗುತ್ತಿದ್ದು, ಮಳೆಗಾಲದಲ್ಲಿ ಅವರಿಗೆಲ್ಲ ಪಕ್ಕದ ಶಾಲೆಯಲ್ಲಿ ಆಶ್ರಯ ನೀಡಲಾಗುತ್ತಿದೆ. ಈ ವರ್ಷದ ಮಳೆಗೆ ತೋಡಿನ ಒತ್ತಿನಲ್ಲಿರುವ ಸುಮಾರು ೨೦ ರಿಂದ ೩೦ ಅಡಿ ಇಳಿಜಾರು ಜಾಗದಲ್ಲಿರುವ ೭ ಮನೆಗಳು ಅಪಾಯದಂಚಿನಲ್ಲಿದ್ದು, ಒಂದು ಮನೆಯ ಭಾಗ ಕುಸಿದಿದೆ.

ಕಂದಾಯ ಇಲಾಖೆಗೆ ಮಾಹಿತಿ ನೀಡಿದ ಮೇರೆಗೆ ಕಂದಾಯ ಅಧಿಕಾರಿಗಳು ಹಾಗೂ ಚೆಟ್ಟಳ್ಳಿ ಗ್ರಾಮ ಪಂಚಾಯಿತಿ ಅಧಿಕಾರಿಗಳು ಪರಿಶೀಲಿಸಿ ಕಾನೂನಡಿ ಅರಣ್ಯ ಪೈಸಾರಿಯ ಮನೆಗೆ ಯಾವುದೇ ಪರಿಹಾರ ನೀಡಲು ಸಾಧ್ಯವಿಲ್ಲವೆಂದು ತಿಳಿಸಿದ್ದಾರೆ.

- ಪುತ್ತರಿರ ಕರುಣ್ ಕಾಳಯ್ಯ